ಕೂಡಿಗೆ. ಜ. 4: ರಾಷ್ಟ್ರೀಯ ಸೇವಾ ಯೋಜನೆ ಗಾಂಧೀಜಿಯವರ ಕನಸಿನ ಕೂಸು, ಯುವ ಜನತೆಯನ್ನು ಸ್ಥಿರವಾಗಿ ಸಮಾಜ ಕಟ್ಟುವ ಕಾರ್ಯಕ್ಕೆ ಬಳಸಿಕೊಳ್ಳುವದರ ಮೂಲಕ, ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವದು ಇದರ ಉದ್ದೇಶವಾಗಿದೆ ಎಂದು ಕೂಡಿಗೆ ಶಿಕ್ಷಕರ ತರಬೇತಿ ಕೇಂದ್ರದ ಉಪನ್ಯಾಸಕ ಕೆ.ವಿ. ಸುರೇಶ್ ಹೇಳಿದರು.
ಕೂಡಿಗೆ ಸಮೀಪದ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಗಣದಲ್ಲಿ, ಕುಶಾಲನಗರ ಸರಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎರಡು ಘಟಕಗಳು ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ಕೇವಲ ಪಠ್ಯ ಕ್ರಮವನ್ನು ಮಾತ್ರವೇ ಅವಲಂಬಿಸದೆ, ಸಾಮಾಜಿಕ ಕಳಕಳಿಯುಳ್ಳ ವಿಚಾರಗಳತ್ತ ಗಮನ ಹರಿಸುವದು ಬಹಳ ಮುಖ್ಯ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪ ನಿರ್ದೇರ್ಶಕ ಕೆಂಚಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ ಹಾಗೂ ಸಮಯಪಾಲನೆಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದರು. ಹೆಬ್ಬಾಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಚ್.ಎಲ್. ರಮೇಶ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಕಲ್ಪಿಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕುಶಾಲನಗರ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ, ಹೆಚ್.ಬಿ. ಲಿಂಗಮಾರ್ತಿ, ರಾಷ್ಟ್ರೀಯ ಸೇವಾ ಯೋಜನೆ, ಸಾಮಾಜಿಕವಾಗಿ ಉತ್ತಮ ಮಹತ್ವಾಕಾಂಕ್ಷಿ ಯೋಜನೆ ಎಂದರು. ಏಳು ದಿನಗಳ ಶಿಬಿರದ ಪ್ರಮುಖ ಭಾಗಗಳಾಗಿ ಶ್ರಮದಾನ, ಗ್ರಾಮಾಂತರ ಪ್ರದೇಶದ ಮನೆ ಮನೆ ಕಾರ್ಯಕ್ರಮ, ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಒಟ್ಟು 100 ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.