ಹಾವುಗಳನ್ನು ಕಂಡರೆ ಸಾಕು ಹಿರಿಯರು, ಕಿರಿಯರು ಎಂಬ ವ್ಯತ್ಯಾಸವಿಲ್ಲದೆ ಕಾಲ್ಕೀಳುವುದು ಸರ್ವೇ ಸಾಮಾನ್ಯವಾದ ಸಂಗತಿ. ಕೆಲವರಂತೂ ಹಾವು ಕಂಡರೆ ನಿಂತ ಸ್ಥಳದಿಂದ ಕದಲುವುದಿಲ್ಲ. ಹಾವುಗಳಲ್ಲಿ ಎಲ್ಲಾ ಹಾವುಗಳು ಕೆಟ್ಟದ್ದಲ್ಲ, ಕೆಲವು ಹಾವುಗಳು ಕಚ್ಚಿದರೆ ಪ್ರಾಣಾಪಾಯವಾಗುವುದಿಲ್ಲ.

ಕೆಲವು ವಿಷಜಂತುಗಳು ಕಚ್ಚಿದರೆ ಮರುಕ್ಷಣದಲ್ಲಿ ಸಾವು ಸಂಭವಿಸುವ ಅಪಾಯವಿದೆ. ಹಾವುಗಳ ಬಗ್ಗೆ ಕೆಲವರಿಗೆ ಅರಿವಿಲ್ಲ. ಅದನ್ನು ತಿಳಿಯುವ ಸಣ್ಣ ಪ್ರಯತ್ನಕ್ಕೂ ಯಾರೂ ಕೈ ಹಾಕುವುದಿಲ್ಲ. ಇಂತಹದ್ದರಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಎಸ್.ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಹಾವುಗಳ ಬಗ್ಗೆ ಮಾಹಿತಿ ನೀಡಲು ಹಾವುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮ ವನ್ನು ನಡೆಸಲಾಯಿತು.

ಹಾವುಗಳ ಬಗ್ಗೆ ಜನ ಸಾಮಾನ್ಯರಿಗೆ ಕುತೂಹಲಗಳು ಇದ್ದೇ ಇವೆ. ಅವುಗಳ ಆಕರ್ಷಕ ದೇಹಶೈಲಿಯ ವೈಶಿಷ್ಟದ ಜತೆಗೆ ವಿಷಜಂತು ಎಂಬ ಹಾನಿಕಾರಕ ಸ್ವಭಾವದಿಂದ ಭಯವಿದ್ದಷ್ಟೇ ಪೌರಾಣಿಕ ಹಾಗೂ ಧಾರ್ಮಿಕ ನಂಬಿಕೆಗಳಡಿ ದೈವಿ ಸ್ಥಾನವನ್ನು ತಮ್ಮ ಶ್ರದ್ಧೆಯಲ್ಲಿ ತೋರ್ಪಡಿಸಿ ಗೌರವ ಭಾವನೆ ಮೆರೆಯುತ್ತಾರೆ.

ಇವು ಎಲ್ಲಾದರೂ ಕಾಣಸಿಗುತ್ತವೆ ಎಂದಾಗ ಜನ ಮುತ್ತಿಕೊಳ್ಳುವುದು ಸಾಮಾನ್ಯ. ಹಾವುಗಳ ಚಲನವಲನ ದಿಟ್ಟಿಸಿದಷ್ಟೂ ಕುತೂಹಲ ಹೆಚ್ಚುತ್ತಲೇ ಇರುವುದು ಸಹಜ.

ಇಲ್ಲಿನ ಸ್ಥಳೀಯ ಉರಗಪ್ರೇಮಿ ಶರತ್ ರವರ ಮಾರ್ಗದರ್ಶನದಲ್ಲಿ ನೂರಾರು ಮುಖ್ಯ ಸರ್ಪ ಪ್ರಭೇದಗಳ ಬಗೆಗೆ ಇಲ್ಲಿ ಮಾಹಿತಿ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಉರಗಪ್ರೇಮಿಗಳು ಹಾಗೂ ಪ್ರಸಿದ್ಧ ಹಾವು ಹಿಡಿಯುವವರು ಪ್ರದರ್ಶನದಲ್ಲಿ ಭಾಗವಹಿಸಿ ಉದರಪಾದದ ಮುಂಚೂಣಿ ಪ್ರಭೇದಗಳ ಬಗೆಗೆ ಕುತೂಹಲದಿಂದ ಆಗಮಿಸಿರುವ ಪುಟಾಣಿ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರಿಗೆ ಅವುಗಳ ಸ್ವಾರಸ್ಯಕರ ಮಾಹಿತಿಗಳನ್ನು ನೀಡಿ ಮನ ರಂಜಿಸಿದರು.

ಪ್ರತಿಯೊಂದು ಹಾವುಗಳ ಜೀವನ ಚರಿತ್ರೆ, ಆಹಾರ ಸರಪಳಿಯಲ್ಲಿ ಹಾವುಗಳ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಮಕ್ಕಳು ಹಾವು ಮತ್ತು ಅದರೊಟ್ಟಿಗಿನ ನಂಬಿಕೆ ಕುರಿತು ಹತ್ತಾರು ಪ್ರಶ್ನೆಗಳನ್ನು ಕೇಳಿದರು. ಸಂವಾದದ ನಡುವೆ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರಿಂದ ಹಾವುಗಳನ್ನು ಮುಟ್ಟಿಸಿದರು.