ಬಹಳ ಹಿಂದಿನ ಕಾಲದಲ್ಲಿ ರೈತಾಪಿ ವರ್ಗದವರು ತಮ್ಮ ವಿಶಾಲವಾದ ಬೃಹತ್ ಗಾತ್ರದ ವಿವಿಧ ರೀತಿಯ ವಿನ್ಯಾಸಗಳಿಂದ ರಚಿಸಿದ ಮರದ ಹಲಗೆಗಳಿಂದ ನಿರ್ಮಿಸಿದ ಭತ್ತ, ರಾಗಿ, ಧಾನ್ಯ ಶೇಖರಿಸುವ ಕಣಜಗಳು ಹೆಚ್ಚಾಗಿ ಬಳಕೆ ಯಾಗುತ್ತಿತು. ಆದರೆ ಇತ್ತೀಚೆನ ದಿನಗಳಲ್ಲಿ ಎಲ್ಲಾವೂ ಆಧುನಿಕ ಶೈಲಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಮತ್ತು ರೈತಾಪಿ ವರ್ಗಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಮೀಪದ ಶನಿವಾರಸಂತೆ ಬೈಪಾಸ್ ರಸ್ತೆ ಯಲ್ಲಿ ವರ್ಕ್‍ಶಾಪ್ ನಡೆಸಿ ಕೊಂಡು, ರೈತ ಉಪಯೋಗಿ ಸಲಕರಣೆಗಳನ್ನು ಸ್ವಂತ ತಯಾರಿಸಿ ಯುವ ರೈತ ವಿಜ್ಞಾನಿ ಎಂದು ಈ ಭಾಗದಲ್ಲಿ ಕರೆಸಿಕೊಳ್ಳುತ್ತಿರುವ ವರ್ಕ್‍ಶಾಪ್ ಮಾಲೀಕ ಎ.ಡಿ.ಮೋಹನ್‍ಕುಮಾರ್ ಇದೀಗ ಭತ್ತ, ರಾಗಿ, ಮುಂತಾದ ಧಾನ್ಯಗಳನ್ನು ಶೇಖರಣೆ ಮಾಡುವ ಕಣಜವೊಂದನ್ನು ಆವಿಷ್ಕರಿಸಿದ್ದಾರೆ.

ಎ. ಡಿ. ಮೋಹನ್‍ಕುಮಾರ್ ಇದೀಗ ಆವಿಷ್ಕರಿಸಿರುವ ಧಾನ್ಯ ಕಣಜ ಅತೀ ಕಡಿಮೆ ವೆಚ್ಚದಲ್ಲಿ ಮತ್ತು ಆಧುನಿಕ ಶೈಲಿಯಲ್ಲಿ ನಿರ್ಮಿಸಿದ್ದಾರೆ. ತಗಡು ಶೀಟ್‍ಗಳಿಂದ 6 ಅಡಿ ಎತ್ತರ, ಮೂರೂವರೆ ಅಗಲ ಇರುವ ಸುಮಾರು 12 ಕ್ವಿಂಟಾಲ್‍ಗಳಷ್ಟು ಬತ್ತ, ರಾಗಿ ಮುಂತಾದ ಧಾನ್ಯಗಳನ್ನು ಶೇಖರಿಸಿಡಬಹುದಾದ ಕಣಜವನ್ನು ನಿರ್ಮಿಸಿದ್ದಾರೆ. ಇದನ್ನು ಉತ್ತಮ ಗುಣಮಟ್ಟದ ತಗಡು ಶೀಟ್, ನೆಟ್, ಬೋಲ್ಟ್‍ಗಳನ್ನು ಬಳಸಿ ನಿರ್ಮಿಸಿದ್ದಾರೆ. ಈ ಕಣಜ ಬಹು ಸರಳವಾಗಿದ್ದು ಅತೀ ಕಡಿಮೆ ತೂಕವನ್ನು ಹೊಂದಿದೆ, ರೈತರು ಬೆಳೆದ ಎಲ್ಲಾ ರೀತಿಯ ಧಾನ್ಯಗಳನ್ನು ಈ ಕಣಜದಲ್ಲಿ ಸಂಗ್ರಹಿಸಿಡಬಹುದಾಗಿದೆ. ರೈತರ ಶತ್ರು ಎಂದೆ ಕರೆಸಿಕೊಳ್ಳುವ ಇಲ್ಲಿ, ಹೆಗ್ಗಣಗಳ ಕಾಟದಿಂದ ಕೂಡ ರಕ್ಷಣೆ ಪಡೆದುಕೊಳ್ಳಬಹುದಾಗಿದ್ದು, ಕಣಜದಲ್ಲಿ ಸಂಗ್ರಹಿಸಿದ ಧಾನ್ಯಗಳನ್ನು ತಮ್ಮ ಅಗತ್ಯತೆಗೆ ತಕ್ಕಷ್ಟು ಬಳಕೆ ಮಾಡಿಕೊಳ್ಳಲು ಕಣಜದ ಕೆಳ ಭಾಗದಲ್ಲಿ ಚಿಕ್ಕ ಗಾತ್ರದ ಬಾಗಿಲನ್ನು ನಿರ್ಮಿಸಿದ್ದು ಅದರ ಮೂಲಕ ತಮಗೆ ಬೇಕಾಗುವಷ್ಟು ಧಾನ್ಯವನ್ನು ತೆಗೆದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಈ ಭಾಗದ ರೈತಾಪಿ ವರ್ಗಕ್ಕೆ ರೈತ ವಿಜ್ಞಾನಿ ಎಂದು ಕರೆಸಿಕೊಳ್ಳುತ್ತಿರುವ ಎ.ಡಿ.ಮೋಹನ್‍ಕುಮಾರ್ ಇದೀಗ ಆವಿಷ್ಕರಿಸಿರುವ ಧಾನ್ಯದ ಕಣಜ ರೈತರ ಉಪಯೋಗಕ್ಕೆ ಬರುತ್ತಿದೆ. ಮಾಹಿತಿ ಸಂಪರ್ಕಕ್ಕಾಗಿ ಎ.ಡಿ.ಮೋಹನ್‍ಕುಮಾರ್-9448919518

-ವಿ.ಸಿ.ಸುರೇಶ್ ಒಡೆಯನಪುರ.