ಮಡಿಕೇರಿ, ಜ. 4: ಕಳೆದ ಅಕ್ಟೋಬರ್‍ನಲ್ಲಿ ಯುವಕನೊಬ್ಬನಿಗೆ ಹಣ ದ್ವಿಗುಣಗೊಳಿಸಿಕೊಡುವ ಆಮಿಷವೊಡ್ಡಿ, ರಹಸ್ಯ ಸ್ಥಳಕ್ಕೆ ಕರೆಸಿಕೊಂಡು ವಂಚಿಸಿರುವ ಜಾಲವೊಂದರ ನಾಲ್ವರನ್ನು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಬಂಧಿತ ಆರೋಪಿಗಳಿಂದ ಕಾರು ಸಹಿತ ನಗದು ಹಣವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ. ಕಂಬಿಬಾಣೆಯ ರಾಶಿದ್, ಕುಶಾಲನಗರದ ಸಮ್ಮದ್ ಹಾಗೂ ಅನೀಶ್ ಮತ್ತು ಉಳ್ಳಾಲದ ಅಸ್ಗರ್ ಬಂಧಿತ ಆರೋಪಿಗಳಾಗಿದ್ದಾರೆ.ಮೇಲಿನ ಪ್ರಕರಣ ಸಂಬಂಧ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯಲ್ಲಿ ಅಂಗಡಿಯೊಂದರ ವರ್ತಕ ಸಫ್‍ವಾನ್ ಎಂಬಾತ ಅಲ್ಲಿನ ನಿವಾಸಿ ಖಾಲಿದ್ ಎಂಬವರ ಪುತ್ರ ರಾಶಿದ್ ಎಂಬಾತನ ಬಳಿ ಸಾಲ ಕೇಳಿದ್ದಾನೆ. ಈ ವೇಳೆ ಆತನಿಗೆ ಆಮಿಷವೊಡ್ಡಿರುವ ರಾಶಿದ್ ನಗದು ರೂ. 3 ಸಾವಿರಕ್ಕೆ 10 ಸಾವಿರ ಹಣ ಒದಗಿಸುವದಾಗಿ ನಂಬಿಸಿದ್ದಾನೆ. ಅಲ್ಲಿಂದ ಆತನನ್ನು ಕುಶಾಲನಗರದ ನಿಸರ್ಗಧಾಮಕ್ಕೆ ಕರೆದೊಯ್ಯುತ್ತಾನೆ.

ಆ ಮೇರೆಗೆ ಈತ ನಿಗರ್ಸ ಧಾಮಕ್ಕೆ ತೆರಳಿದಾಗ, ಸಾಲ ನೀಡುವ ವ್ಯಕ್ತಿಗಳು ಗುಡ್ಡೆಹೊಸೂರಿನಲ್ಲಿ ಇದ್ದಾರೆಂದು ನಂಬಿಸಿದ್ದಾನೆ. ಈ ಮಾತನ್ನು ನಂಬಿರುವ ಸಫ್‍ವಾನ್ ತನ್ನ ದ್ವಿಚಕ್ರ ವಾಹನದಲ್ಲಿ ನಗದು ರೂ. 30 ಸಾವಿರ ಹಾಗೂ ತನ್ನ ಪರ್ಸ್‍ನಲ್ಲಿದ್ದ ಸುಮಾರು 6 ಸಾವಿರ ಮೊತ್ತದೊಂದಿಗೆ ಗುಡ್ಡೆಹೊಸೂರಿಗೆ ತೆರಳುತ್ತಾನೆ. ಗುಡ್ಡೆಹೊಸೂರಿನ ಹಾರಂಗಿ ಮಾರ್ಗದ ನಿರ್ಜನ ಪ್ರದೇಶದಲ್ಲಿ ಕಾರೊಂದರಲ್ಲಿ (ಕೆ.ಎ. 19 ಎಂ.ಇ. 7801) ಆರೋಪಿ ಮಂಗಳೂರು ಉಳ್ಳಾಲದ ಅಸ್ಗರ್ ಹಸನ್ ಹಾಗೂ ಇತರರು ಎದುರಾಗಿದ್ದಾರೆ.

ಈ ವೇಳೆ ದ್ವಿಚಕ್ರ ವಾಹನದಿಂದ ಇಳಿದಿರುವ ಸಫ್‍ವಾನ್‍ನನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಈತನ

(ಮೊದಲ ಪುಟದಿಂದ) ಮೂಲಕ ರಾಶಿದ್‍ಗೆ ಮೊಬೈಲ್ ಕರೆ ಮಾಡಿಸಿ, ತಾವು ಸಿಬಿಐ ಅಧಿಕಾರಿ ಗಳೆಂದೂ, ಹಣ ದ್ವಿಗುಣಗೊಳಿಸುವ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವದಾಗಿ ನಾಟಕ ವಾಡಿದ್ದಾರೆ.

ಇತ್ತ ಸಫ್‍ವಾನ್‍ಗೆ ಪರಿಚಿತರೇ ಆಗಿದ್ದ ರಾಶಿದ್ ಹಾಗೂ ಸಮ್ಮದ್ ಎಂಬಿಬ್ಬರು, ತಾವು ಅಲ್ಲಿಗೆ ಬಂದು ಎಲ್ಲ ಸರಿ ಮಾಡುವದಾಗಿ, ಕಾರಿನಲ್ಲಿದ್ದವರಿಗೆ ತಿಳಿಸಿ ಕೆಲವೇ ಹೊತ್ತಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಸಂದರ್ಭ ಕುಶಾಲನಗರದ ಅನೀಸ್ ಎಂಬಾತನೂ ಸ್ಥಳದಲ್ಲಿ ಗೋಚರಿಸುತ್ತಾನೆ.

ಆ ಬಳಿಕ ಎಲ್ಲರೂ ಸೇರಿ ಸಫ್‍ವಾನ್ ಬಳಿಯಿದ್ದ ನಗದು ಹಣವನ್ನು ಕಿತ್ತುಕೊಂಡಿದ್ದಲ್ಲದೆ, ಸಿಬಿಐಯಿಂದ ಪ್ರಕರಣದೊಂದಿಗೆ ವಿಚಾರಣೆಗೆ ಒಳಪಡಿಸುವದಾಗಿ ಬೆದರಿಸಿದ್ದಾರೆ. ಈ ವೇಳೆ ರಾಶಿದ್, ಸಮದ್ ಹಾಗೂ ಅನೀಸ್ ಕಾರಿನಲ್ಲಿದ್ದವರಿಗೆ ಸಫ್‍ವಾನ್‍ನನ್ನು ಬಿಡುಗಡೆಗೊಳಿಸುವಂತೆಯೂ, ರೂ. 2 ಲಕ್ಷಕ್ಕೆ ಪ್ರಕರಣ ಸುಖಾಂತ್ಯ ಗೊಳಸಬೇಕೆಂದು ನಟಿಸಿದ್ದಾರೆ.

ಸಫ್‍ವಾನ್ ಒಪ್ಪದಿದ್ದಾಗ ನಗದು ರೂ. 35 ಸಾವಿರ ಕಿತ್ತುಕೊಂಡು, ಮಿಕ್ಕ ಹಣ ಕಂತಿನಲ್ಲಿ ನೀಡಬೇಕೆಂದು ಷರತ್ತು ವಿಧಿಸಿದ್ದಾರೆ. ಈ ರೀತಿ ಮೋಸ ಹೋದ ಕಂಬಿಬಾಣೆಯ ಯುವಕ ಅಂದು ಹೇಗೋ ಬಿಡಿಸಿಕೊಂಡು ವಾಪಾಸ್ಸಾಗಿದ್ದಾನೆ. ಆ ಬಳಿಕ ರಾಶಿದ್ ಹಾಗೂ ಇತರರು ಪದೇ ಪದೇ ಬೆದರಿಸಿ ಕಂತು ರೂಪದಲ್ಲಿ ಸುಮಾರು ರೂ. 80 ಸಾವಿರ ಲಪಟಾಯಿಸಿದ್ದಾರೆ.

ಆರೋಪಿಗಳಿಂದ ಉಪದ್ರ ತಾಳಲಾರದ ಯುವಕ ಕೊನೆಗೂ ಪೊಲೀಸರ ಮೊರೆ ಹೋಗಿದ್ದಾನೆ. ಆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಬಲೆ ಬೀಸಿರುವ ಅಪರಾಧ ಪತ್ತೆದಳ ಪೊಲೀಸರು ಇದೀಗ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ದುಷ್ಕøತ್ಯಕ್ಕೆ ಬಳಸಿದ ಕಾರು ಹಾಗೂ ನಗದು ರೂ. 77,500 ಸೇರಿದಂತೆ ಒಟ್ಟು ಮೌಲ್ಯ ರೂ. 6,77,500 ಸ್ವತ್ತನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್ಸ್‍ಪೆಕ್ಟರ್ ಎಂ. ಮಹೇಶ್, ಸಿಬ್ಬಂದಿಗಳಾದ ಹಮೀದ್, ವೆಂಕಟೇಶ್, ಅನಿಲ್ ಕುಮಾರ್, ಯೋಗೇಶ್ ಕುಮಾರ್, ನಿರಂಜನ್, ವಸಂತ್, ಮಹೇಶ್, ಶಶಿಕುಮಾರ್ ಹಾಗೂ ರಾಜೇಶ್ ಮತ್ತು ಗಿರೀಶ್ ಪಾಲ್ಗೊಂಡಿದ್ದರು.