ಮಡಿಕೇರಿ, ಜ. 4: ಕೃಷಿ ಪಂಪ್‍ಸೆಟ್‍ಗೆ ನೀಡಿದ ಉಚಿತ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವದರೊಂದಿಗೆ ಹಳೆಯ ಬಿಲ್ ಪಾವತಿಗೆ ವಿದ್ಯುತ್ ಇಲಾಖೆ ಒತ್ತಾಯಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸುಂಟಿಕೊಪ್ಪ ಹೋಬಳಿ ಹಾಗೂ ಸೋಮವಾರಪೇಟೆ ಕ್ಷೇತ್ರದ ಕೃಷಿಕರು ಇಂದು ಜಿಲ್ಲಾಡಳಿತ ಹಾಗೂ ಶಾಸಕರುಗಳಿಗೆ ಮನವಿ ಸಲ್ಲಿಸಿದರು.ಕರ್ನಾಟಕ ಸರ್ಕಾರವು ಕಳೆದ ಹಲವಾರು ವರ್ಷಗಳಿಂದ ಕೃಷಿ ಉಪಯೋಗಕ್ಕೆ ಬೇಕಾಗಿ ಉಪಯೋಗಿಸುವ 10 ಹೆಚ್.ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಒದಗಿಸುತ್ತಿದ್ದು, ಇದೀಗ ಇದುವರೆಗಿನ ವಿದ್ಯುತ್ ಬಿಲ್ ಪಾವತಿಸುವಂತೆ ವಿದ್ಯುತ್ ಇಲಾಖೆ ಬಿಲ್ ನೀಡಿದ್ದು, ಬಿಲ್ ಪಾವತಿಸದಿದ್ದಲ್ಲಿ ಸಂಪರ್ಕ ವನ್ನು ಕಡಿತಗೊಳಿಸಲಾಗುವದು ಎಂದು ಮಾಹಿತಿ ನೀಡಿದೆ. ಕೊಡಗು ಜಿಲ್ಲೆಯಲ್ಲಿ ಈ ವರ್ಷ ಸುರಿದ ಭಾರೀ ಮಳೆಯಿಂದ ಫಸಲು ನಷ್ಟವನ್ನು ಎಲ್ಲಾ ರೈತಾಪಿ ವರ್ಗದವರು ಅನುಭವಿಸುತ್ತಿದ್ದು, ಜಲಪ್ರಳಯದಿಂದ ಕಂಗೆಟ್ಟಿರುವ ರೈತರಿಗೆ ವಿದ್ಯುತ್ ಇಲಾಖೆಯ ಈ ಕ್ರಮ ಸಂಕಷ್ಟ ತಂದೊಡ್ಡಿದೆ. ಆದ್ದರಿಂದ ಕೃಷಿ ಪಂಪ್ ಸೆಟ್‍ಗೆ ಉಚಿತ ವಿದ್ಯುತ್ ಸಂಪರ್ಕವನ್ನು ಮುಂದುವರೆಸಲು ಕ್ರಮ ಕೈಗೊಳ್ಳಬೇಕೆಂದು

(ಮೊದಲ ಪುಟದಿಂದ) ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಯನ್ನು ಎಡಿಸಿ ಶ್ರೀನಿವಾಸ್, ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಇವರುಗಳಿಗೆ ಸಲ್ಲಿಸಲಾಯಿತು. ಮನವಿ ಸಲ್ಲಿಕೆ ವೇಳೆ ಎನ್.ಸಿ. ಪೊನ್ನಪ್ಪ, ದಾಸಂಡ ರಮೇಶ್, ಕೆ.ಎಸ್. ಮಂಜುನಾಥ್, ಎಸ್.ಪಿ. ಲಿಂಗಪ್ಪ, ಎಂ.ಪಿ. ಜಗನ್ನಾಥ್ ಮತ್ತಿತರರು ಇದ್ದರು.