ಚೆಟ್ಟಳ್ಳಿ, ಜ. 5: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಡಗು ಜಿಲ್ಲೆ ಹಾಗೂ ಕೊಂಡಂಗೇರಿಯ ಎಲಿಯಂಗಾಡು ಯುವಕ ಸಂಘ ಇವರ ಆಶ್ರಯದಲ್ಲಿ ನಡೆದ ಹೊಸ ವರ್ಷದ ಪ್ರಯುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಫೋರ್ ಸ್ಟಾರ್ ಎಡಪಾಲ ತಂಡವು 2-1 ಅಂತರದಿಂದ ಫೈನಲ್ ಪಂದ್ಯದಲ್ಲಿ ಗ್ರೀನ್ ಸ್ಟಾರ್ ಕರಿಕೆ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದುಕೊಂಡಿತು. ಕರಿಕೆ ತಂಡವು ದ್ವಿತೀಯ ಸ್ಥಾನ ಗಳಿಸಿತು. ಇದಕ್ಕೂ ಮೊದಲು ನಡೆದ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಎಲಿಯಂಗಾಡು ತಂಡವನ್ನು ಮಣಿಸಿ ಎಡಪಾಲ ತಂಡವು ಫೈನಲ್ ಪ್ರವೇಶಿಸಿದರೆ, ಕರಿಕೆ ತಂಡವು ಲಿಮ್ರಾ ತಂಡವನ್ನು ಮಣಿಸಿ ಫೈನಲ್‍ಗೆ ಲಗ್ಗೆಯಿಟ್ಟಿತು.

ಪಂದ್ಯಾಟದಲ್ಲಿ ಒಟ್ಟು 27 ತಂಡಗಳು ಭಾಗವಹಿಸಿದ್ದವು. ಅತ್ಯುತ್ತಮ ಆಟಗಾರ ಫೋರ್ ಸ್ಟಾರ್ ತಂಡದ ನೌಫಲ್, ಬೆಸ್ಟ್ ಪಾಸರ್ ರಾಸಿಕ್ ಹಾಗೂ ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಯನ್ನು ಕರಿಕೆ ತಂಡದ ನವಾಸ್ ಪಡೆದುಕೊಂಡರು.

ಪಂದ್ಯಾಟದ ಉದ್ಘಾಟನೆಯನ್ನು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ದಯಾನಂದ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದು ರಹಮಾನ್ ಅಂದಾಯಿ ವಹಿಸಿದರು. ಪಂದ್ಯಾಟದ ವೀಕ್ಷಕ ವಿವರಣೆಯನ್ನು ಜಂಶೀರ್ ಮಾಡಿದರು. ಈ ಸಂದರ್ಭ ಹಾರಿಸ್ ಎಲಿಯಂಗಾಡು ಹಾಗೂ ಅಬ್ದುಲ್ಲಾ ಇದ್ದರು.