ರಾಜ್ಯದ ನಿಯೋಗದಿಂದ ಕೇಂದ್ರ ವಾಣಿಜ್ಯ ಸಚಿವರ ಭೇಟಿ

ಮಡಿಕೇರಿ, ಜ. 5: ಕಾಫಿ ಬೆಳೆಗಾರರ ವಿವಿಧ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ. ದೇವೇಗೌಡ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಅವರೊಂದಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ಚರ್ಚಿಸಿತು. ಇವರುಗಳೊಂದಿಗೆ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ರಮಣರೆಡ್ಡಿ ಹಾಗೂ ಕೇಂದ್ರದ ಉನ್ನತ ಅಧಿಕಾರಿಗಳು ಹಾಜರಿದ್ದು, ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮತ್ತು ಮುಂದಿನ ಎಲ್ಲಾ ಸಾಲವನ್ನು ಶೇ. 3 ಬಡ್ಡಿ ದರದಲ್ಲಿ ಮರು ಪಾವತಿಸುವ ಬೆಳೆಗಾರರಿಗೆ ಸಾಲವನ್ನು ನೀಡುವದು. ವಿದೇಶಿ ಕಾಳುಮೆಣಸು ಆಮದನ್ನು ನಿಲ್ಲಿಸುವಂತೆ ಮತ್ತು ಕಾಳಸಂತೆಯಲ್ಲಿ ಬರುವ ಮೆಣಸಿಗೆ ಕಡಿವಾಣ ಹಾಕುವದು. ಕೇಂದ್ರ ಸರಕಾರ ಕೆ.ಜಿ. ಮೆಣಸಿನ ನಮ್ಮ ಉತ್ಪಾದನಾ ವೆಚ್ಚದ ಆಧಾರಿತ ರೂ. 500 ಎಂದು ನಿರ್ಧರಿಸಿರುವದನ್ನು ಸ್ವಾಗತಿಸಿ, ಅದನ್ನು ಆಮದುದಾರರಿಗೆ ಚಾಚೂತಪ್ಪದಂತೆ ಪಾಲಿಸಲು ಕ್ರಮ ಕೈಗೊಳ್ಳಬೇಕು.

ತೀವ್ರ ಅತಿವೃಷ್ಟಿಯಿಂದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ, ಆಸ್ತಿಪಾಸ್ತಿ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಲು ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು.

ಕಾಡಾನೆ ಹಾವಳಿಗೆ ಸಂಬಂಧಪಟ್ಟಂತೆ, ಆನೆಕಾರಿಡಾರ್ ಅಥವಾ ಆನೆ ಪಾರ್ಕ್ ರಚಿಸಲು ಕ್ರಮ ಕೈಗೊಳ್ಳುವದು. ಕಾಫಿ ಮತ್ತು ಕಾಳುಮೆಣಸಿಗೆ ಬೆಂಬಲ ಬೆಲೆ ಘೋಷಿಸಲು ಕ್ರಮ ಕೈಗೊಳ್ಳುವದು ಇತ್ಯಾದಿ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಕಾಫಿಗೆ ಸಂಬಂಧಪಟ್ಟಂತೆ ಹಿತರಕ್ಷಣಾ ಸಮಿತಿ (ಟಾಕ್ಸ್‍ಫೋರ್ಸ್) ರಚಿಸಿ, ಕೇಂದ್ರ ಸರಕಾರದ ಅಧಿಕಾರಿಗಳನ್ನು ಒಳಗೊಂಡಂತೆ, ಅದರ ನೇತೃತ್ವವನ್ನು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಬಾಸ್ಕರ ಅವರಿಗೆ ನೀಡಿ ಕೆಲವೇ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ವರದಿಯನ್ನು ಸಿದ್ಧಪಡಿಸಿ ನೀಡುವಂತೆ ಸೂಚಿಸಲಾಗಿದೆ. ಮೂರು ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಫಿ ಮಂಡಳಿ ಮತ್ತು ಸಂಬಾರು ಮಂಡಳಿ ಸದಸ್ಯರು ಹಾಗೂ ಕಾಫಿ ಮಂಡಳಿ ಕಾರ್ಯದರ್ಶಿ ಸಲಹೆ ಸಹಕಾರವನ್ನು ನೀಡಿ ಶಾಶ್ವತ ಪರಿಹಾರಗಳನ್ನು ಕಾಫಿ ಬೆಳೆಗಾರರಿಗೆ ದೊರಕಿಸಿಕೊಡುವಲ್ಲಿ ಸಹಕರಿಸಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಈ ಸಂದರ್ಭ ಮನವಿ ಮಾಡಿದೆ. ಈ ಭೇಟಿ ಹಾಗೂ ಚರ್ಚೆಗೆ ಸಹಕರಿಸಿದ ಪ್ರಮುಖರು ಹಾಗೂ ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ. ಜಗನ್ನಾಥ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ತೋ.ಚ. ಅನಂತ ಸುಬ್ಬರಾವ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜೈರಾಂ ಹಾಗೂ ಪ್ರಧಾನ ಕಾರ್ಯದರ್ಶಿ ಯು.ಎಂ. ತೀರ್ಥಮಲ್ಲೇಶ್ ಅಭಿನಂದನೆ ಸಲ್ಲಿಸಿದ್ದಾರೆ. ಈ ನಿಯೋಗವನ್ನು ಕೊಂಡೊಯ್ಯಲು ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್. ಲಿಂಗೇಶ್, ಸಕಲೇಶಪುರ-ಆಲೂರು ಕ್ಷೇತ್ರದ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಅವರು ಸಹಕರಿಸಿದ್ದರು.