ಮೂರ್ನಾಡು, ಜ. 5: ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಪೂಜೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಪೂಜೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ಕೆ.ವಿ. ವೆಂಕಟರಮಣ ಕುಣಿಕುಳ್ಳಾಯ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಭಸ್ಮಾರ್ಚನೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ದೇವರಿಗೆ ಅರ್ಪಿಸ ಲಾಯಿತು. ಪಟ್ಟಣದ ಸುತ್ತ ಮುತ್ತಲಿನ ಗ್ರಾಮಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ದೇವಾಲಯದ ವತಿಯಿಂದ ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಸಾರ್ವಜನಿಕರು ಅನ್ನಸಂತರ್ಪಣೆ ಸ್ವೀಕರಿಸಿದರು. ಸಂಜೆ ಶ್ರೀ ಅಯ್ಯಪ್ಪ ಯುವಕ ಮಂಡಳಿ ವತಿಯಿಂದ ಅಯ್ಯಪ್ಪ ಮೂರ್ತಿ ಮೆರವಣಿಗೆ ನಡೆಯಿತು. ವಿದ್ಯುತ್ ಅಲಕೃಂತ ಮಂಟಪದಲ್ಲಿ ಅಯ್ಯಪ್ಪ ಮೂರ್ತಿ ಕುಳ್ಳಿರಿಸಿ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಪುಟಾಣಿ ಮಕ್ಕಳು ಮೆರವಣಿಗೆಯಲ್ಲಿ ಸಾಲುದೀಪ ಹಿಡಿದು ಮೆರವಣಿಗೆಗೆ ಮೆರಗು ನೀಡಿದರು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ, ಶ್ರೀ ಅಯ್ಯಪ್ಪ ಯುವಕ ಮಂಡಳಿ ಸದಸ್ಯರು ಹಾಜರಿದ್ದರು.