ಕುಶಾಲನಗರ, ಜ. 5: ಕುಶಾಲನಗರದಲ್ಲಿ ನಿರ್ಮಾಣಗೊಳಿಸಲು ಉದ್ದೇಶಿಸಿದ ನ್ಯಾಯಾಲಯ ಸಂಕೀರ್ಣಕ್ಕೆ ಗುರುತಿಸಿರುವ ಪ್ರದೇಶವನ್ನು ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ವಿ. ಮಲ್ಲಾಪುರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಪ್ರವಾಸಿ ಮಂದಿರ ಆವರಣದಲ್ಲಿ ರೂ. 12.35 ಕೋಟಿ ವೆಚ್ಚದಲ್ಲಿ 1.04 ಎಕರೆ ಪ್ರದೇಶದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಸರಕಾರ ಈಗಾಗಲೆ ಹಸಿರು ನಿಶಾನೆ ನೀಡಿದ್ದು ಸಧ್ಯದಲ್ಲಿಯೇ ನ್ಯಾಯಾಲಯ ಸಮುಚ್ಚಯ ಕಾಮಗಾರಿಗೆ ಚಾಲನೆ ದೊರೆಯಲಿದೆ. ಇದೇ ಸಂದರ್ಭ ನ್ಯಾಯಾಲಯ ಸಿಬ್ಬಂದಿ ಅಧಿಕಾರಿ ವರ್ಗಗಳ ವಸತಿಗೃಹ ನಿರ್ಮಾಣ ಪ್ರದೇಶವನ್ನು ಕೂಡ ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಕುಶಾಲನಗರ ಜೆಎಂಎಫ್‍ಸಿ ನ್ಯಾಯಾಧೀಶ ನಟರಾಜ್, ತಹಶೀಲ್ದಾರ್ ಮಹೇಶ್, ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು, ಕಾರ್ಯದರ್ಶಿ ಮೋಹನ್ ಇದ್ದರು.