ಮಡಿಕೇರಿ, ಜ. 5: ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳ ಸುಸ್ಥಿರ ಬಳಕೆ, ಶೌಚಾಲಯದ ಮಾಲೀಕತ್ವದ ಬಗ್ಗೆ ಜಾಗೃತಿ ಮೂಡಿಸುವದು, ಉತ್ತಮ ಗುಣಮಟ್ಟದ ಶೌಚಾಲಯ ನಿರ್ಮಾಣದ ಖಾತರಿಪಡಿಸುವಿಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗೃಹ ಶೌಚಾಲಯಗಳ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ತಾ. 1 ರಿಂದ 31 ರವರೆಗೆ ಸ್ವಚ್ಛ, ಸುಂದರ, ಶೌಚಾಲಯ ಸ್ಪರ್ಧೆಯನ್ನು ಆಯೋಜಿಸಿದೆ. ಈ ಒಂದು ತಿಂಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿರುವ ಶೌಚಾಲಯಗಳಿಗೆ ಬಣ್ಣಗಳಿಂದ ಸುಂದರಗೊಳಿಸಬೇಕಾಗಿದೆ.

ತಾ. 1 ರಿಂದ 31 ರವರೆಗೆ ಒಂದು ತಿಂಗಳ ಕಾಲ ನಡೆಯುವ ಸ್ವಚ್ಛ, ಸುಂದರ, ಶೌಚಾಲಯ ಸ್ಪರ್ಧೆಯ ಆಂದೋಲನ ಅವಧಿಯಲ್ಲಿ ಅತೀ ಹೆಚ್ಚು ಶೌಚಾಲಯಗಳಿಗೆ ಬಣ್ಣ ಬಳಿಯುವ ಸಂಖ್ಯೆ ಮತ್ತು ಶೇಕಡವಾರು ಸಾಧನೆಯ ಆಧಾರದ ಮೇಲೆ ಜಿಲ್ಲೆ, ಗ್ರಾಮ ಪಂಚಾಯಿತಿಗಳು ಹಾಗೂ ವೈಯಕ್ತಿಕ ಗೃಹ ಶೌಚಾಲಯಕ್ಕೆ ಸೃಜನಾತ್ಮಕವಾಗಿ ಪೈಂಟಿಂಗ್ ಮಾಡಿಸಿರುವ ಕುಟುಂಬಕ್ಕೆ ಕೇಂದ್ರ ಸರ್ಕಾರವು ಪುರಸ್ಕಾರವನ್ನು ನೀಡಿ ಗೌರವಿಸಲಿದೆ.

ಸ್ಪರ್ಧೆಯ ವಿನ್ಯಾಸ: ಪ್ರತಿಯೊಬ್ಬ ಕುಟುಂಬದ ಮಾಲೀಕರು ತಮ್ಮ ಶೌಚಾಲಯಗಳನ್ನು ಹೊಸದಾಗಿ ವಿನೂತನವಾಗಿ ಬಣ್ಣ ಬಳಿಸುವದು, ಶೌಚಾಲಯದ ಗೋಡೆಯ ಮೇಲೆ ಚಿತ್ರಕಲೆ ಬಿಡಿಸುವದು, ಸ್ವಚ್ಛ ಭಾರತ್ ಮಿಷನ್ (ಗ್ರಾ) ಚಿಹ್ನೆ ಬಿಡಿಸುವದು, ಶೌಚಾಲಯ ಬಳಕೆ ಸಂದೇಶ, ಸ್ವ.ಭಾ.ಮಿ ಘೋಷ ವಾಕ್ಯಗಳ ಬರಹ ಕೈಗೊಳ್ಳುವದು.

ಆಂದೋಲನದ ಅವಧಿಯಲ್ಲಿ ಅತಿ ಹೆಚ್ಚು ಶೌಚಾಲಯಗಳಿಗೆ ಪೈಂಟ್ ಮಾಡಿರುವ ಶೇಕಡವಾರು ಫಲಿತಾಂಶದ ಆಧಾರದ ಮೇಲೆ ಪ್ರತಿ ರಾಜ್ಯದಿಂದ 3 ಜಿಲ್ಲೆಗಳನ್ನು ಆಯ್ಕೆ ಮಾಡಲಾಗುವದು. ಈ ರೀತಿ ಆಯ್ಕೆಯಾದ ಪ್ರತಿಯೊಂದು 3 ಜಿಲ್ಲೆಗಳಲ್ಲಿ ಅತ್ಯಂತ ಸೃಜನಾತ್ಮಕವಾಗಿ ಪೈಂಟ್ ಮಾಡಿರುವ 5 ಶೌಚಾಲಯಗಳ ಫೋಟೋಗಳನ್ನು ರಾಜ್ಯ ಹಂತಕ್ಕೆ ಕಳುಹಿಸಲಾಗುತ್ತದೆ.

ಅತ್ಯುತ್ತಮ ಸಾಧನೆ ಮಾಡಿದ ರಾಜ್ಯ, ಜಿಲ್ಲೆ ಮತ್ತು ವೈಯಕ್ತಿಕ ಗೃಹ ಶೌಚಾಲಯಗಳಿಗೆ ಕೇಂದ್ರ ಸರ್ಕಾರದ ಮೌಲ್ಯಮಾಪನ ಸಮಿತಿಯು ಪುರಸ್ಕಾರಕ್ಕೆ ಆಯ್ಕೆ ಮಾಡಲಿದೆ ಎಂದು ಜಿ.ಪಂ. ಸಿಇಒ ಕೆ. ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.

ಒಂದು ತಿಂಗಳ ಕಾಲ ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆಯನ್ನು ಆಯೋಜಿಸಿ ಜಿಲ್ಲೆಯು ಉತ್ತಮ ಪುರಸ್ಕಾರ ಪಡೆಯಲು ಅಗತ್ಯ ಕ್ರಮವಹಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9481771255), 9480351193, 9448266503 ಸಂಪರ್ಕಿಸಬಹುದು.