ಗ್ರಾಮಸ್ಥರ ಅಸಮಾಧಾನ

*ಗೋಣಿಕೊಪ್ಪ, ಜ. 5: ಸರಕಾರಿ ಆಸ್ಪತ್ರೆ ಎಂದರೆ ಸಾಕು ರೋಗಿಗಳನ್ನು ಸೇರಿಸಲು ಹಿಂದೇಟು ಹಾಕುತ್ತಾರೆ. ಆದರೆ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಇದಕ್ಕೆ ಹೊರತಾಗಿದೆ. ಇಲ್ಲಿನ ಕಾರ್ಯವೈಖರಿ ಜಿಲ್ಲೆಗೆ ಮಾದರಿಯಾಗಿದೆ.

ಆದರೂ ಆರೋಗ್ಯ ಕೆಂದ್ರವನ್ನು ಖಾಸಗಿ ಸಂಸ್ಥೆಯ ನಿರ್ವಹಣೆಗೆ ವಹಿಸಿರುವದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ನಾಲ್ಕು ಪಂಚಾಯಿತಿಗೆ ಒಳಪಡುವ ಆರೋಗ್ಯ ಕೇಂದ್ರವನ್ನು ಖಾಸಗಿ ಸಂಸ್ಥೆಯ ನಿರ್ವಹಣೆಗೆ ವಹಿಸಿರುವ ಮಾಹಿತಿ ಸ್ಥಳೀಯ ಪಂಚಾಯಿತಿಗೆ ನೀಡದೆ ಇರುವದು ಮತ್ತೊಂದು ಸಂದೇಹದ ಪ್ರಶ್ನೆಯಾಗಿದೆ.

ಹಲವು ವರ್ಷಗಳಿಂದ ದಾನಿಗಳ ಸಹಕಾರದಿಂದ ನಾಲ್ಕು ಎಕರೆ ಜಾಗದಲ್ಲಿ ಸ್ಥಳೀಯ ಜನರ ಸೇವೆಗಾಗಿ ತಲೆಎತ್ತಿ ನಿಂತ್ತಿದ್ದ ಆರೋಗ್ಯ ಕೇಂದ ಗ್ರಾಮಸ್ಥರಿಗೆ ಸೇವೆ ನೀಡುತ್ತಾ ಬಂದಿದೆ. ಇದೀಗ ಜಿಲ್ಲಾ ಆರೋಗ್ಯ ಇಲಾಖೆ ದಿಢೀರನೆ ಖಾಸಗಿ ಸಂಸ್ಥೆಯ ನಿರ್ವಹಣೆಗೆ ವಹಿಸಿರುವಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಇದುವರೆಗೆ ನಡೆದುಬಂದ ಸೇವೆಯಲ್ಲಿಯೇ ಆರೋಗ್ಯ ಕೇಂದ್ರ ಮುಂದುವರಿಯಲಿ ಎಂಬದು ಸಾರ್ವಜನಿಕರ ಅಭಿಲಾಷೆಯಾಗಿದೆ.

ಬಾಳೆಲೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ ಕನಿಷ್ಟವೆಂದರೂ ನೂರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳ ಕರ್ತವ್ಯದಿಂದ ಉತ್ತಮ ಸೇವೆ ಇಲ್ಲಿನ ಗ್ರಾಮಸ್ಥರಿಗೆ ದೊರಕುತ್ತಿದೆ.

24x7 ಸೇವೆಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಕನಿಷ್ಟವೆಂದರು ತಿಂಗಳಿಗೆ 8 ರಿಂದ 10 ಹೆರಿಗೆ ನಡೆಯುತ್ತಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚು ಕೂಲಿ ಕಾರ್ಮಿಕರು ಹಾಗೂ ಬುಡಕಟ್ಟು ಜನಾಂಗದವರೇ ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ಬಾಳೆಲೆ ಉಪ ಕೇಂದ್ರ ಆರೋಗ್ಯದ ವರದಾನವಾಗಿದೆ.

ಬಾಳೆಲೆ ಪಟ್ಟಣದಲ್ಲಿ ಸುಮಾರು ಹತ್ತು ಸಾವಿರ ಜನಸಂಖ್ಯೆಯನ್ನು ಹೊಂದಿದೆ ಆರೋಗ್ಯ ಕೇಂದ್ರವು ಬಿಳೂರು, ದೇವನೂರು, ನಿಟ್ಟೂರು, ಕೋಣನಕಟ್ಟೆ, ಕೊಟ್ಟಗೇರಿ, ಮಾಯಮುಡಿ, ಬಾಳೆಲೆ ಸೇರಿ ಸುಮಾರು ಏಳು ಉಪ ಕೇಂದ್ರಗಳನ್ನು ಹೊಂದಿದ್ದು ಹತ್ತು ಆಶಾ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿದ್ದರು, ಇತ್ತೀಚಿನ ದಿನಗಳಲ್ಲಿ ಇರುವ ಸಿಬ್ಬಂದಿಗಳೇ ನಿರ್ವಹಿಸುವ ಸೇವೆಯಿಂದ ಸಮಸ್ಯೆಯಿಂದ ದೂರ ಉಳಿದಿದೆ. ಕರ್ತವ್ಯದಲ್ಲಿ ಇರುವ ವೈದ್ಯಾಧಿಕಾರಿ ಪ್ರತಾಪ್, ಶುಶ್ರೂಷಕಿಗಳಾದ ವಿದ್ಯಾರಾಣಿ, ಪೂಜಾ, ಚಂದ್ರಕಲಾ ಇವರುಗಳ ಸೇವೆ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಇದರೊಂದಿಗೆ ವಾಹನ ಚಾಲಕ ರಘು ಹಾಗೂ ಡಿ ವರ್ಗ ನೌಕರರಾದ ಮಲ್ಲಾಜಮ್ಮ, ಕಲ್ಯಾಣಿ ಇವರ ಸೇವೆಯನ್ನು ಸಹ ಇಲ್ಲಿನ ಗ್ರಾಮಸ್ಥರು ಶ್ಲಾಘಿಸುತ್ತಾರೆ. ಆದರೆ ಆರೋಗ್ಯ ಕೇಂದ್ರದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯಾದ ಕರುಣಾ ಟ್ರಸ್ಟ್‍ಗೆ ವಹಿಸುವದರಿಂದ ಹಲವು ವರ್ಷಗಳಿಂದ ವಾಹನ ಚಾಲಕ ಮತ್ತು ಡಿ ದರ್ಜೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಉದ್ಯೋಗಕ್ಕೆ ಸಮಸ್ಯೆಯಾಗಲಿದೆ ಎಂಬದು ಸಾರ್ವಜನಿಕರ ಆರೋಪವಾಗಿದೆ. ಇದೀಗಾಗಲೇ ಕರುಣಾ ಟ್ರಸ್ಟ್ ಸಂಸ್ಥೆ ತಿತಿಮತಿ ಹಾಗೂ ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ವಹಿಸುತ್ತಿದೆ. ಆದರೆ ನಿರ್ವಹಣೆಯಲ್ಲಿ ಬಹಳಷ್ಟು ಲೋಪಗಳು ಕಂಡುಬಂದಿದ್ದು ಇಲ್ಲಿನ ಸಿಬ್ಬಂದಿಗಳ ವೇತನಕ್ಕೂ ತಿಂಗಳುಗಳ ಕಾಲ ಕಾಯುವ ಸ್ಥಿತಿ ಇದೆ ಎಂದು ಮಾಹಿತಿಯನ್ನು ಸಾರ್ವಜನಿಕರು ನೀಡಿದ್ದಾರೆ. ಇಂತಹ ಸಮಸ್ಯೆಯನ್ನು ಹೊಂದಿರುವ ಖಾಸಗಿ ಸಂಸ್ಥೆ ಬಾಳೆಲೆ ಆರೋಗ್ಯ ಕೇಂದ್ರವನ್ನು ನಿರ್ವಹಿಸುವದು ಬೇಡ ಈಗಿನ ಸ್ಥಿತಿಯಲ್ಲಿಯೇ ಆರೋಗ್ಯ ಕೇಂದ್ರ ಸೇವೆ ನೀಡಲಿ ಎಂಬ ಒತ್ತಾಯ ಕೇಳಿಬಂದಿದೆ. - ಎನ್.ಎನ್. ದಿನೇಶ್