ಮಡಿಕೇರಿ, ಜ. 5: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ತನ್ನ ಚಟುವಟಿಕೆ ಆರಂಭಿಸಿ, ನೂರು ವರ್ಷದ ಹೊಸ್ತಿಲಿನಲ್ಲಿದ್ದು, ಈ ಕಾಲಘಟ್ಟದಲ್ಲಿ ಇಡೀ ಮೈಸೂರು ವಿಭಾಗದಲ್ಲೇ ಅತ್ಯಂತ ಉತ್ತಮ ರೀತಿ ಕಾರ್ಯನಿರ್ವಹಣೆಯ ಸಹಕಾರ ಬ್ಯಾಂಕ್ ಎಂಬ ಪುರಸ್ಕಾರವನ್ನು ಪಡೆದುಕೊಂಡಿದೆ. ಪ್ರಸಕ್ತ ದಿನಗಳಲ್ಲೇ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಯೂ ಎದುರಾಗಿದೆ. ತಾ. 12 ರಂದು ನಡೆಯಲಿರುವ ಚುನಾವಣೆಗೆ ತೀವ್ರ ಪೈಪೋಟಿ ಯೊಂದಿಗೆ ಪ್ರಚಾರದ ಕಾವು ರಂಗೇರತೊಡಗಿದೆ.

ಈ ಬ್ಯಾಂಕ್ ಆಡಳಿತ ಮಂಡಳಿಯ ಒಟ್ಟು 13 ಸ್ಥಾನಗಳಿಗೆ ಈಗಾಗಲೇ 33 ಮಂದಿ ಉಮೇದು ವಾರಿಕೆ ಸಲ್ಲಿಸಿದ್ದು, ತಾ. 6 ರಂದು (ಇಂದು) ಅಪರಾಹ್ನ 3 ಗಂಟೆಯ ತನಕ ಕಣದಿಂದ ಹಿಂದೆ ಸರಿಯಲು ಕಾಲಾವಕಾಶವಿದೆ.ಮೀಸಲು ಸ್ಥಾನ: 13 ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಪೈಕಿ 7 ಮಂದಿ ಸಾಮಾನ್ಯ ಅಭ್ಯರ್ಥಿಗಳು, ಇಬ್ಬರು ಸಾಮಾನ್ಯ ಮಹಿಳೆಯರು, ಎರಡು ಹಿಂದುಳಿದ ವರ್ಗ ಹಾಗೂ ಒಂದೊಂದು ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಸ್ಥಾನಗಳು ಮೀಸಲುಗೊಳಿಸಲಾಗಿದೆ.

ಬ್ಯಾಂಕ್ ಸದಸ್ಯರು: ಪ್ರಸಕ್ತ ಈ ಬ್ಯಾಂಕ್ ಸರಿಸುಮಾರು 2,400 ಮಂದಿ ಸದಸ್ಯರನ್ನು ಹೊಂದಿದ್ದು, 2276 ಮತದಾರ ಸದಸ್ಯರುಗಳಿದ್ದಾರೆ. ಆ ಪೈಕಿ ಬ್ಯಾಂಕ್ ನಿಬಂಧನೆಗಳಿಗೆ ಒಳಪಡುವಂತೆ, ಪ್ರಸಕ್ತ ಚುನಾವಣೆ ಯಲ್ಲಿ 1112 ಮಂದಿ ಮಾತ್ರ ತಮ್ಮ ಮತದಾನದ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ.

ಚುನಾವಣಾ ಸಮಯ: ತಾ. 12 ರಂದು ನಗರದ ಬಾಲ ಭವನ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಚುನಾವಣಾ ಪ್ರಕ್ರಿಯೆಯೊಂದಿಗೆ ಮತದಾನಕ್ಕೆ ಅವಕಾಶವಿದೆ. ಆ ಬಳಿಕ ಮತ ಎಣಿಕೆ ನಡೆಯಲಿದೆ.

ಬ್ಯಾಂಕ್ ಇತಿಹಾಸ: 1919ರಲ್ಲಿ ಹೆಚ್. ಸಿದ್ಧಲಿಂಗಪ್ಪ ಎಂಬವರ ಆಶಯದಂತೆ ಮಹದೇವಪೇಟೆಯ ಕೆಲವರು ಸೇರಿ ಮಹದೇವಪೇಟೆ ಸಹಕಾರ ಸಂಘ ಹೆಸರಿನಲ್ಲಿ ಚಟುವಟಿಕೆ ಆರಂಭಿಸಿರುವ ಇತಿಹಾಸ ಈ ಬ್ಯಾಂಕ್‍ಗಿದೆ. ಅನಂತರದ 36 ವರ್ಷಗಳ ಬಳಿಕ ಈ ಸಂಘ ಮಹದೇವಪೇಟೆ ಪತ್ತಿನ ಸಹಕಾರ ಸಂಘವಾಗಿ ವಿಸ್ತಾರ ಗೊಂಡಿದೆ. ಜೊತೆಗೆ 63ನೇ ಪತ್ತಿನ ಸಂಘವಾಗಿ ಸಹಕಾರ ಇಲಾಖೆಯ ನೋಂದಣಿ ಪಡೆದುಕೊಂಡಿದೆ.

1955ರಿಂದ 1972ರ ತನಕವೂ ಪತ್ತಿನ ಸಂಘವಾಗಿದ್ದು, ಕೇವಲ 10 ರೂ.ನಂತೆ ಪಾಲು ಹಣದಿಂದ ಸದಸ್ಯತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದೇ ವರ್ಷ 1972ರಲ್ಲಿ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಎಂದು ನಾಮಕರಣಗೊಂಡು ತನ್ನ ಚಟುವಟಿಕೆಯನ್ನು

(ಮೊದಲ ಪುಟದಿಂದ) ಇಡೀ ನಗರಕ್ಕೆ ವಿಸ್ತರಿಸಿಕೊಂಡಿರುವದು ಕಂಡು ಬರುತ್ತದೆ. ರೂ. 10 ಷೇರು ಹಣದೊಂದಿಗೆ ಆ ವರ್ಷಗಳಲ್ಲಿ ಸುಮಾರು 225 ಮಂದಿ ಸದಸ್ಯತ್ವ ಪಡೆದಿದ್ದಾರೆ.

1996ರಲ್ಲಿ ಆರ್‍ಬಿಐ ಮಾನ್ಯತೆ: ಹೀಗೆ ವರ್ಷದಿಂದ ವರ್ಷಕ್ಕೆ ತನ್ನ ಪ್ರಗತಿ ಸಾಧಿಸಿರುವ ಬ್ಯಾಂಕ್‍ಗೆ 1996ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದಲೂ ಅಧಿಕೃತ ಮಾನ್ಯತೆ ಲಭಿಸಿದೆ. ಅಂತೆಯೇ ರೂ. 10 ರಿಂದ ಬ್ಯಾಂಕ್ ಸದಸ್ಯತ್ವ ಮುಂದುವರಿದು ಕ್ರಮೇಣ ರೂ. 25, 50, 100, 300, 500ಕ್ಕೆ ತಲಪುವದರೊಂದಿಗೆ ಪ್ರಸಕ್ತ ರೂ. 1000ಕ್ಕೆ ಸೀಮಿತಗೊಂಡಿದೆ.

ಪ್ರಶಸ್ತಿಯ ಗರಿ: ಪ್ರತಿ ವರ್ಷವೂ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ಪುರಸ್ಕಾರದೊಂದಿಗೆ ಉತ್ತಮ ಕಾರ್ಯನಿರ್ವಹಣೆಯ ಪ್ರಶಂಸೆಗೆ ಒಳಗಾಗಿರುವ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಇತಿಹಾಸದಲ್ಲಿ ಕಳೆದ ಅವಧಿಗೆ ಲಭಿಸಿರುವ ಮೈಸೂರು ವಿಭಾಗದಲ್ಲೇ ಉತ್ತಮ ಬ್ಯಾಂಕ್ ಎಂಬ ರಾಜ್ಯಮಟ್ಟದ ಪುರಸ್ಕಾರ ಇನ್ನಷ್ಟು ಹೆಗ್ಗಳಿಕೆಯೊಂದಿಗೆ, ಹಿರಿಮೆ ಹೆಚ್ಚಿಸಿದೆ.

ಆಧುನಿಕ ಸೌಲಭ್ಯ: ನಾಲ್ಕೈದು ದಶಕಗಳ ಹಿಂದೆ ಈ ಬ್ಯಾಂಕ್‍ನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಉದ್ಯೋಗಿಯಾಗಿದ್ದ ಇತಿಹಾಸವೂ ಇದ್ದು, ಪ್ರಸಕ್ತ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್, ಕೆಎಸ್‍ಆರ್‍ಟಿಸಿ ಡಿಪೋ ಬಳಿ ತನ್ನ ಶಾಖೆ ಹೊಂದುವದರೊಂದಿಗೆ ಆಧುನಿಕ ತಂತ್ರಜ್ಞಾನ ಸೌಲಭ್ಯದೊಂದಿಗೆ ಗ್ರಾಹಕರಿಗೆ ಸೇವೆ ನೀಡುತ್ತಿದೆ.

ರೂ. 10 ಲಕ್ಷ ವೆಚ್ಚದ ಕೋರ್ ಬ್ಯಾಂಕಿಂಗ್ ಸೌಲಭ್ಯ ಸಮಗ್ರ ಮಾಹಿತಿ ಸಹಿತ ಪಾರದರ್ಶಕ ಆಡಳಿತಕ್ಕಾಗಿ ಸಿಸಿ ಕ್ಯಾಮರಾ ಅಳವಡಿಕೆ, ಜನರೇಟರ್ ಮತ್ತಿತರ ಸುಧಾರಣೆ ಕಂಡುಕೊಂಡಿದೆ.

ಸೌಲಭ್ಯಗಳು: ಆರಂಭದಿಂದಲೂ ಕನಿಷ್ಟ ಮೊತ್ತದಿಂದ ರೂ. 6 ಲಕ್ಷ ತನಕ ಆಭರಣ ಸಾಲ, ರೂ. 1 ಲಕ್ಷದವರೆಗೆ ಜಾಮೀನು ಸಾಲ, ರೂ. 30 ಲಕ್ಷ ಮನೆ ಸಾಲ, ರೂ. 10 ಲಕ್ಷ ವಾಹನ ಸಾಲದೊಂದಿಗೆ ಗ್ರಾಹಕರಿಗೆ, ಹಿರಿಯ ನಾಗರಿಕರಿಗೆ ಠೇವಣಿ ಹಾಗೂ ಉಳಿತಾಯ ಖಾತೆಗಳಿಗೆ ಆಕರ್ಷಕ ಬಡ್ಡಿ ನೀಡುತ್ತಾ ಬಂದಿದೆ.

ಗ್ರಾಹಕರ ಭದ್ರತೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹೂಡಿಕೆಯಲ್ಲಿ ರೂ. 9.94 ಕೋಟಿ ಠೇವಣಿ ಹೊಂದಿದೆ. ಒಟ್ಟಿನಲ್ಲಿ ಶತಮಾನದ ಹಿಂದೆ ಮಹದೇವಪೇಟೆ ಜನವಸತಿಗೆ ಸೀಮಿತವಿದ್ದ ಸಂಸ್ಥೆಯೊಂದು, ಇಂದು ಇಡೀ ಮಡಿಕೇರಿಯಲ್ಲೇ ಹೆಮ್ಮೆಯ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆಯೊಂದಿಗೆ ಶತಮಾನದೆಡೆಗೆ ಸಾಗುತ್ತಿರುವದು ಕೊಡಗಿನ ಸಹಕಾರ ರಂಗಕ್ಕೂ ಹೆಮ್ಮೆ.

-ಶ್ರೀಸುತ