ಮಡಿಕೇರಿ, ಜ. 4: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಮಂಗಳಾ ದೇವಿ ನಗರದ ಯುವಕ ಜೈಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಆತ್ಮಹತ್ಯೆಗೆ ಬೈಲುಕುಪ್ಪೆ ಪೊಲೀಸರು ಕಾರಣ ಎಂದು ಆರೋಪಿಸಿ; ಅವರುಗಳನ್ನು ಸೇವೆಯಿಂದ ಅಮಾನತುಗೊಳಿಸಿ ಬಂಧಿಸಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷ, ದಲಿತ ಸಂಘಟನೆಗಳ ಒಕ್ಕೂಟ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಎಸ್‍ಡಿಪಿಐ ಸಂಯುಕ್ತಾಶ್ರ ಯದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಐಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಎದುರು ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಡಿಪಿಐ ಪ್ರಮುಖ ಅಬೂಬಕ್ಕರ್, ಮೃತ ಯುವಕ ಜೈಕುಮಾರ್ ತಂದೆ ಕೃಷ್ಣ ಅವರ ವಿರುದ್ಧ ಕೆಲವು ಮೊಕದ್ದಮೆಗಳಿರುವದು ನಿಜ. ಹಾಗೆಂದ ಮಾತ್ರಕ್ಕೆ ವೈದ್ಯ ದಿಲೀಪ್ ಕುಮಾರ್ ಕೊಲೆ ಪ್ರಕರಣ ಸಂಬಂಧ ವಿನಾಕಾರಣ ಕೃಷ್ಣ ಅವರನ್ನು ವಿಚಾರಣೆ ನೆಪದಲ್ಲಿ ಹಿಂಸಿಸುವದರ ಜೊತೆಗೆ ಅವರ ಅಮಾಯಕ ಮಕ್ಕಳನ್ನು ಕೂಡ ಕರೆದೊಯ್ದು ಹೋಂ ಸ್ಟೇವೊಂದರಲ್ಲಿ ದೌರ್ಜನ್ಯವೆಸ ಗಿರುವದು ಖಂಡನೀಯ. ಇದರಿಂದ ಮನನೊಂದ ಕೃಷ್ಣ ಅವರ ಪುತ್ರ ಜೈಕುಮಾರ್ ಆತ್ಮಹತ್ಯೆಗೆ ಶರಣಾಗಿ ದ್ದಾನೆ. ಈ ಹಿನ್ನೆಲೆಯಲ್ಲಿ ಆತ ತನ್ನ ಮರಣ ಪತ್ರದಲ್ಲಿ ಉಲ್ಲೇಖಿಸಿರು ವಂತೆ ಆತನ ಮೇಲೆ ದೌರ್ಜನ್ಯವೆಸಗಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇಬೇಕು. ಪೊಲೀಸ್ ಇಲಾಖೆಗೆ ಈ ಬಗ್ಗೆ ತನಿಖೆ ನಡೆಸಲು ಸಾಧ್ಯವಿಲ್ಲದಿದ್ದರೆ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದ ಬಿಎಸ್‍ಪಿ ಜಿಲ್ಲಾ ಮುಖಂಡ ಮೋಹನ್ ಮೌರ್ಯ ಮಾತನಾಡಿ, ಪೊಲೀಸರು ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವದರಲ್ಲಿ ಅರ್ಥವಿದೆ. ಆದರೆ ಯಾವದೇ ತಪ್ಪು ಮಾಡದ ಯುವಕನ ಮೇಲೆ ದೌರ್ಜನ್ಯ ನಡೆಸಿರುವದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ದಿವಾಕರ್, ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಇವರುಗಳು ಮಾತನಾಡಿ, ಕಾನೂನು ರಕ್ಷಕರಾದ ಪೊಲೀಸರು ಇಂತಹ ಕೃತ್ಯವೆಸಗಿರುವದು ಖೇದಕರ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಂಧಿಸಬೇಕು. ಇಲ್ಲವಾದರೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವದೆಂದರು.

ಮನವಿ ಪತ್ರವನ್ನು ಎಡಿಸಿ ಶ್ರೀನಿವಾಸ್ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜೈಕುಮಾರ್ ತಂದೆ ಕೃಷ್ಣ, ನಗರಸಭಾ ಸದಸ್ಯರಾದ ಮನ್ಸೂರ್, ಗಿಲ್ಬರ್ಟ್ ಲೋಬೋ, ಹರೀಶ್, ಸತೀಶ್ ಇತರರಿದ್ದರು.