ವೀರಾಜಪೇಟೆ, ಜ.4: ಕನ್ನಡ ರಂಗಭೂಮಿ ಉಚ್ಚ್ರಾಯ ಸ್ಥಿತಿಯಲ್ಲಿರುವ ಕಾಲಘಟ್ಟದ ಮುಂಚಿತವಾಗಿಯೇ ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚ ಕವಿ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದರು ಎಂದು ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ ಚಿಕ್ಕಣ್ಣ ಹೇಳಿದರು.
ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನಕದಾಸರು ಮತ್ತು ಅಪ್ಪಚ್ಚಕವಿ ತೌಲನಿಕ ಅಧ್ಯಯನ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ದಾರ್ಶನಿಕರು ಹರಹರಿ ಎಂದು ತಮ್ಮನ್ನು ಕರೆದುಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಆದರೆ ಇಂದು ಹರಹರಿಯನ್ನು ನಾವು ಬೀದಿಗೆ ತಂದು ನಿಲ್ಲಿಸಿದ್ದೇವೆ. ಇಂದಿನ ಪರಿಸ್ಥಿತಿಯಲ್ಲಿ ಏಸು, ಅಲ್ಲಾ, ಹರಿ ಎಲ್ಲಾ ಒಂದೇ ಎಂದು ತೋರಿಸಲು ಚಿಂತನಾ ತತ್ವಗಳನ್ನು ಸಮಾಜದ ಮುಂದಿಡಬೇಕು. ಕನಕದಾಸರು ಅಸಮಾನತೆಯ ಸಮಾಜದಲ್ಲಿ ಹುಟ್ಟಿ ಬದುಕಿನಲ್ಲಿ ಸಮಾಜದಿಂದ ಅಪಮಾನ ಅನುಭವಿಸಿದಾಗ ಸಂಗೀತ, ಸಾಹಿತ್ಯ, ಕೀರ್ತನೆಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶಗಳು ಇಂದಿಗೂ ಸ್ಮರಣೀಯ. ಅಪ್ಪಚ್ಚ ಕವಿ ನಾಟಕಕಾರನಾಗಿ, ಕವಿಯಾಗಿ, ಸಾಹಿತಿಯಾಗಿ ಕೊಡವ ಸಾಹಿತ್ಯಕ್ಕೆ ಅವರದೇ ಆದ ಕೊಡುಗೆ ನೀಡಿದ್ದಾರೆ. ಕೊಡವ ಸಾಹಿತ್ಯ ಇತರ ಯಾವದೇ ಸಾಹಿತ್ಯಕ್ಕೂ ಕಡಿಮೆ ಇಲ್ಲ. ನಮಗೆ ಅದರ ಮಹತ್ವದ ಬಗ್ಗೆ ಅರಿವಿಲ್ಲದಾಗಿದೆ. ಯಾವದೇ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಅರಿವು ನಮಗಾಗುತ್ತದೆ ಎಂದು ಹೇಳಿದರು.
ಹಿರಿಯ ರಂಗಭೂಮಿ ಕಲಾವಿದ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಸುಮಾರು 530 ವರ್ಷದ ಹಿಂದಿನ ಕನಕದಾಸರು, 150 ವರ್ಷದ ಹಿಂದಿನ ಅಪ್ಪಚ್ಚ ಕವಿಯ ಜನನ ಕಾಲವಾಗಿದೆ. ಇವರ ದಾಸ ಪರಂಪರೆಯ ಸಾಮ್ಯತೆ ಮಾತ್ರ ಸೋಜಿಗವಾದದು. ಕನಕದಾಸರು ಜಾತೀಯತೆಯನ್ನು ಕಂಡವರು, ಅಪ್ಪಚ್ಚ ಕವಿಗೆ ಅದು ಇರಲಿಲ್ಲ. ಕನಕರು ವಿಜಯನಗರದ ಸೇನೆಯ ದಂಡ ನಾಯಕನಾಗಿ ಸಾವು ನೋವುಗಳನ್ನು ಕಂಡು ನೊಂದು ಹರದಾಸನಾದರು. ಅದೇ ರೀತಿ ಅಪ್ಪಚ್ಚಕವಿ ಮುಜರಾಯಿ ಇಲಾಖೆಯ ನೌಕರನಾಗಿ ಕೊಡವ ಮತ್ತು ಕನ್ನಡದಲ್ಲಿ ಕೃತಿ ರಚಿಸಿ ನಾಟಕಕಾರನಾಗಿ ಕೊನೆಯ ಕಾಲದಲ್ಲಿ ಅವರ ಮನೆಗೆ ಯಾರೋ ಬೆಂಕಿ ಹಚ್ಚಿದಾಗ ಎಲ್ಲವನ್ನೂ ಕಳೆದುಕೊಂಡು ಸಾಹಿತ್ಯದಲ್ಲಿ ಹರದಾಸರಾದರು ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ ಟಿ.ಕೆ. ಬೋಪಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಿ.ಕೆ. ಉಷಾ ಉಪಸ್ಥಿತರಿದ್ದರು. ಮಡಿಕೇರಿಯ ಪ್ರೊ ಸಿದ್ದರಾಜು, ಡಾ ಎಂ.ಕೆ. ಮಾಧವ, ನಾಗೇಶ್ ಕಾಲೂರು, ಗೋಣಿಕೊಪ್ಪದ ಡಾ ಎಂ.ಪಿ ರೇಖಾ ವಿಚಾರ ಮಂಡಿಸಿದರು. ಅಮ್ಮುಣಿಚಂಡ ಪ್ರವೀಣ್, ಸ್ಮಿತಾ ಅಮೃತರಾಜ್, ಚೇಂದಿರ ನಿರ್ಮಲ ಬೋಪಣ್ಣ, ಡಾ. ಕಾವೇರಿ ಪ್ರಕಾಶ್, ಕಿಗ್ಗಾಲು ಗಿರೀಶ್, ಡಾ ಡಿ.ಕೆ. ಸರಸ್ವತಿ ಮತ್ತಿತರರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಉಷಾ ಸ್ವಾಗತಿಸಿದರು.