*ಕುಶಾಲನಗರ, ಜ. 4: ಕೊಡಗು ಪ್ರಾಕೃತಿಕ ವಿಕೋಪದಿಂದ ಆಸ್ತಿ ಹಾನಿಗೊಂಡಿದ್ದರೂ ಕೊಡಗಿನಾದ್ಯಂತ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿರುವದು ಆ ಎಲ್ಲಾ ನೋವುಗಳನ್ನು ಮಾಸುವಂತೆ ಮಾಡಿದೆ ಎಂದು ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸತೀಶ್ ಆಡಿನಾಸರ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಕುಪ್ಪಳ್ಳಿಯ ಹೇಮಾಂಗಣದಲ್ಲಿ ನಡೆದ ಮಲೆನಾಡಿನ ಭಾವ ಸಂಗಮ ಕವಿ ಶೈಲದಲ್ಲಿ ಭಾವದಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಕಾರ್ಯಕ್ರಮಗಳಲ್ಲಿ ದುಡಿಯುವ ಪ್ರತಿಯೊಬ್ಬರು ಹಾಗೂ ಸಾಹಿತ್ಯಾಸಕ್ತರೆಲ್ಲರೂ ಸಾಹಿತಿಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಿ ಮಾತನಾಡಿ ಶಿವಮೊಗ್ಗ ಜಿಲ್ಲೆ ಸಾಹಿತ್ಯ, ಸಂಸ್ಕೃತಿಗೆ ಹೆಸರಾದ ನಾಡು. ಮಲೆನಾಡಿನ ಹಸಿರು ಬೆಟ್ಟ ಗುಡ್ಡಗಳು ಚೊಚ್ಚಲ ಕವಿಗಳಿಗೆ ಕವನ ರಚಿಸಲು ಪ್ರೇರಣೆ ನೀಡುತ್ತದೆ. ಅಂತರ ಜಿಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೊಡಗಿನಲ್ಲಿ ಸಾಹಿತ್ಯ ಬೆಳವಣಿಗೆಗೆ ಸಹಕಾರವಾಗಲಿದೆ ಎಂದರು. ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಕವಿಗಳು ಸ್ಥಳದಲ್ಲಿಯೇ ಕವನ ರಚಿಸಿ ವಾಚಿಸಿದರು. ಜಿಲ್ಲೆಯ ಕವಿಗಳಾದ ವೀರಾಜಪೇಟೆಯ ರಂಜಿತಾ, ಕೊಡ್ಲಿಪೇಟೆಯ ಶಿಕ್ಷಕಿ ಕವಿತಾ, ನಾಪೋಕ್ಲು ಉಷಾರಾಣಿ, ಬೆಸೂರು ಮಂಜುಳಾಮಣಿ ಕವನ ವಾಚಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಎಸ್.ಎ. ಮುರಳೀಧರ್ ಕುವೆಂಪು ಅವರ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದ ಸಾಹಿತ್ಯಾಸಕ್ತರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್, ಮಾದ್ಯಮ ಕಾರ್ಯದರ್ಶಿ ಎನ್.ಎ. ಅಶ್ವಥ್ ಕುಮಾರ್, ತೀರ್ಥಹಳ್ಳಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಉದಯ್ಕುಮಾರ್, ಕುಶಾಲನಗರ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ಶನಿವಾರಸಂತೆ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಸಿ.ಎಂ.ಪುಟ್ಟಸ್ವಾಮಿ ಇದ್ದರು.