ಸೋಮವಾರಪೇಟೆ, ಜ. 4: ಕೋಟ್ಯಾಂತರ ಅಯ್ಯಪ್ಪ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಕೇರಳ ಸರ್ಕಾರವೇ ಮುಂದಾಳತ್ವ ವಹಿಸಿ ಪುರಾಣ ಪ್ರಸಿದ್ಧ ಶಬರಿಮಲೆಗೆ ಸ್ತ್ರೀಯರು ಪ್ರವೇಶಿಸು ವಂತೆ ಮಾಡಿದೆ ಎಂದು ಆರೋಪಿಸಿ, ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಅಯ್ಯಪ್ಪ ವ್ರತಧಾರಿಗಳು ಹಾಗೂ ಸಾರ್ವಜನಿಕರು ಸೋಮ ವಾರಪೇಟೆ ಯಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಕೇರಳ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರೆ, ಅಯ್ಯಪ್ಪ ವ್ರತಧಾರಿಗಳು ಶರಣಘೋಷ ಮಾಡುವ ಮೂಲಕ ಪ್ರತಿಭಟಿಸಿದರು.
ಈ ಸಂದರ್ಭ ಮಾತನಾಡಿದ ಇಲ್ಲಿನ ಶ್ರೀ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರು, ಐಚ್ಛಿಕ ಬ್ರಹ್ಮಚಾರಿಯಾಗಿರುವ ಅಯ್ಯಪ್ಪ ದೇವಾಲಯಕ್ಕೆ ಸ್ತ್ರೀಯರನ್ನು ಕರೆತರುವ ಮೂಲಕ ಕೇರಳ ಸರ್ಕಾರ ಕೋಟ್ಯಾಂತರ ಭಕ್ತರ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ದರ್ಶನ್ ಜೋಯಪ್ಪ ಮಾತನಾಡಿ, ಶಬರಿಮಲೆಗೆ ಸ್ತ್ರೀ ಪ್ರವೇಶದಿಂದ ಇತಿಹಾಸ ಸೃಷ್ಟಿ ಯಾಗಿಲ್ಲ;ಬದಲಿಗೆ ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಕಮ್ಯೂನಿಸ್ಟ್ ಸರ್ಕಾರ ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಎಂ.ಬಿ. ಉಮೇಶ್, ರಮೇಶ್, ರವಿ, ಬನ್ನಳ್ಳಿ ಗೋಪಾಲ್, ಪ್ರಮುಖರಾದ ಸತೀಶ್ ಶೇಟ್, ಸುಜಿತ್, ಸುಧಾಕರ್, ಹರೀಶ್, ಐಗೂರು ಪ್ರಭಾಕರ್, ಪ.ಪಂ. ಸದಸ್ಯ ಬಿ.ಆರ್. ಮಹೇಶ್ ಸೇರಿದಂತೆ ಅಯ್ಯಪ್ಪ ವ್ರತಧಾರಿಗಳು, ಹಿಂದೂಪರ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.
ಕುಶಾಲನಗರ : ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತಾದಿಗಳು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇರಳ ಸರಕಾರ ಮತ್ತು ಮುಖ್ಯಮಂತ್ರಿ ಪಿಣಾರಾಯಿ ವಿಜಯನ್ ವಿರುದ್ಧ ಘೋಷಣೆ ಗಳನ್ನು ಕೂಗಿದರು. ಕೆಲಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಅಯ್ಯಪ್ಪ ಶರಣು ಕೂಗಲಾಯಿತು.
ಈ ಸಂದರ್ಭ ಮಾತನಾಡಿದ ಹಿಂದೂಪರ ಸಂಘಟನೆಯ ಪ್ರಮುಖ ರಾದ ವರದ, ಶಬರಿಮಲೆಗೆ ಮಹಿಳೆಯರಿಬ್ಬರು ಪ್ರವೇಶಿಸಿ ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಇಂತಹ ಘಟನೆಗಳಿಗೆ ಪ್ರಚೋದನೆ ನೀಡುತ್ತಿರುವ ಪಿಣಾರಾಯಿ ವಿಜಯನ್ ಧೊರಣೆ ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಉಪಾಧ್ಯಕ್ಷ ಬೋಸ್ ಮೊಣ್ಣಪ್ಪ, ಕಾರ್ಯದರ್ಶಿ ಶಿವಾಜಿ, ಜಿಪಂ ಸದಸ್ಯೆ ಮಂಜುಳಾ, ಪ್ರಮುಖರಾದ ನಿಡ್ಯಮಲೆ ದಿನೇಶ್, ಚಿಲ್ಲನ ಗಣಿಪ್ರಸಾದ್, ಬಿ.ಎಸ್. ಶಿವಕುಮಾರ್, ಪ.ಪಂ. ಸದಸ್ಯರು ಗಳಾದ ಅಮೃತ್ರಾಜ್, ರೇಣುಕಾ, ಜಗದೀಶ್, ಹಿಂದೂಪರ ಸಂಘಟನೆ ಗಳ ಪ್ರಮುಖರಾದ ಜಿ.ಎಲ್. ನಾಗರಾಜ್, ಮಂಜು, ಅನೀಶ್, ಬಿ.ಜೆ.ಅಣ್ಣಯ್ಯ ಮತ್ತಿತರರು ಇದ್ದರು.