ವೀರಾಜಪೇಟೆ, ಜ. 3: ತಾ. 2 ರಂದು ಬುಧವಾರ ಬೆಳಗ್ಗಿನ ನಸುಕಿನ ಜಾವ 3.38ಕ್ಕೆ ಶಬರಿಮಲೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರು ವೀರಾಜಪೇಟೆಯ ದೊಡ್ಡಟ್ಟಿಚೌಕಿಯ ಖಾಸಗಿ ಲಾಡ್ಜ್‍ನಲ್ಲಿ ತಂಗಿದ್ದರು. ಡಿಸೆಂಬರ್ 29 ರಂದು ಅಪರಾಹ್ನ 2.12ಕ್ಕೆ ಕ್ಯಾಲಿಕಟ್‍ನ ನೀಲಾವೂರ್ ಎಡಕುಳ ಗ್ರಾಮದ ಎ. ಬಿಂದು ಹಾಗೂ ಕನಕದುರ್ಗಾ ಎಂದು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ರೂಮ್ ನಂ. 14ರಲ್ಲಿ ಎರಡು ದಿನ ತಂಗಿದ್ದರು. ಲಾಡ್ಜ್‍ನ ದಾಖಲೆಯಲ್ಲಿ ಪ್ರವಾಸಕ್ಕೆಂದು ನಮೂದಿಸಲಾಗಿದ್ದು, ರೂಂ ಪಡೆಯಲು ಆಧಾರ್ ಕಾರ್ಡ್, ಅಗತ್ಯ ದಾಖಲೆಯನ್ನು ತೋರಿಸಿದ್ದಾರೆ. ಡಿಸೆಂಬರ್ 31 ರಂದು ಪೂರ್ವಾಹ್ನ 10.28ಕ್ಕೆ ನಿರ್ಗಮಿಸಿದ್ದಾರೆ.

2 ದಿನಗಳ ಕಾಲ ವೀರಾಜಪೇಟೆ ಸುತ್ತಮುತ್ತ ಸುತ್ತಾಡಿ ರೂಂ ಪಕ್ಕದಲ್ಲಿಯೇ ಇರುವ ಶಭರಿಗಿರಿ ಬೇಕರಿಯಲ್ಲಿ ಬಿಸ್ಕೆಟ್, ಚಹಾ ಸೇವಿಸಿದ್ದಾರೆ ಎಂದು ಬೇಕರಿ ಮಾಲೀಕರು ಮಾಹಿತಿ ನೀಡಿದ್ದಾರೆ.

ಶಬರಿಮಲೆಗೆ ತೆರಳಿದ್ದ ಇಬ್ಬರು ಮಹಿಳೆಯರು ನಮ್ಮ ಲಾಡ್ಜ್‍ಗೆ ಬಂದಾಗ ಅವರು ಸಾಮಾನ್ಯ ಮಹಿಳೆಯರಂತೆ ಇದ್ದು ಯಾವದೇ ರೀತಿಯಲ್ಲಿ ವ್ರತದ ಮಾಲೆ ಧರಿಸಿರಲಿಲ್ಲ.

ಈ ಇಬ್ಬರು ಮಹಿಳೆಯರು ಹೊಟೇಲ್‍ಗೆ ತೆರಳುವ ಮುನ್ನ ಗಂಡಸೊಬ್ಬರು ವಸತಿಗೃಹಕ್ಕೆ ತೆರಳಿ ಕೊಠಡಿ ಬಗ್ಗೆ ವಿಚಾರಿಸಿದ್ದಾರೆ. ಇಬ್ಬರು ಮಹಿಳೆಯರು ಒಂದು ದಿನ ತಂಗಲಿದ್ದಾರೆ ಎಂದು ಹೇಳಿದಾಗ ಹೊಟೇಲ್ ನೌಕರ 600 ರೂ. ಬಾಡಿಗೆ ಬಗ್ಗೆ ವಿವರಿಸಿದ್ದಾರೆ. ನಂತರ ಮಹಿಳೆಯರನ್ನು ಕರೆದುಕೊಂಡು ಬಂದ ಆ ವ್ಯಕ್ತಿ ಇವರುಗಳನ್ನು ಕೊಠಡಿಯಲ್ಲಿ ಬಿಟ್ಟು ಹೊರ ತೆರಳಿದ್ದಾರೆ. ಮಹಿಳೆಯರು ತಾವು ಸಂಜೆ 5.30ರ ವೇಳೆ ಕೊಠಡಿ ಖಾಲಿ ಮಾಡುವದಾಗಿ ಹೇಳಿದ್ದರೂ ಅಂದು ರಾತ್ರಿಯಲ್ಲದೆ ಮಾರನೆ ದಿನ ಕೂಡ ಇದೇ ಕೊಠಡಿಯಲ್ಲಿ ತಂಗಿದ್ದಾರೆ. ಎರಡು ದಿನಗಳ ವಾಸ್ತವ್ಯ ಬಳಿಕ ಡಿ. 31 ರಂದು ಬೆಳಿಗ್ಗೆ 10.28 ಗಂಟೆಗೆ ಕೊಠಡಿ ಖಾಲಿ ಮಾಡುವ ಸಂದರ್ಭ ಮುಂಗಡ ಹಣ 600ನ್ನು ಹೊರತುಪಡಿಸಿ ಮತ್ತೇ 600 ಪಾವತಿಸಿ ತೆರಳಿದ್ದಾರೆ.

ಈ ಮಹಿಳೆಯರು ವೀರಾಜಪೇಟೆಯನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ, ಇವರನ್ನು ಕರೆತಂದ ವ್ಯಕ್ತಿ ಯಾರು, ತಂಗಿದ್ದ ಎರಡು ದಿನ ಎಲ್ಲೆಲ್ಲಿ ಹೋಗಿದ್ದರು, ಯಾರನ್ನೆಲ್ಲಾ ಸಂಪರ್ಕಿಸಿದ್ದರು ಎಂಬ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ವೀರಾಜಪೇಟೆ ನಾಗರಿಕರು ಒತ್ತಾಯಿಸಿದ್ದಾರೆ.