ಮಡಿಕೇರಿ, ಜ. 3: ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯಲ್ಲಿ ಮರು ಚೇತರಿಕೆಯ ಆಶಯದೊಂದಿಗೆ ಇದೇ ತಾ. 11 ರಿಂದ 13ರ ತನಕ ಮೂರು ದಿನಗಳ ತನಕ ಜರುಗಲಿರುವ, ಕೊಡಗು ಪ್ರವಾಸಿ ಉತ್ಸವಕ್ಕೆ ಹೆಸರಾಂತ ಕಲಾವಿದರುಗಳಿಂದ ಸಂಗೀತ ಮಾತ್ರವಲ್ಲದೆ, ಸ್ಥಳೀಯವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಲು ತಯಾರಿ ನಡೆದಿದೆ.ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲಾ ಕೇಂದ್ರದ ಗಾಂಧಿ ಮೈದಾನದಲ್ಲಿ ರೂಪುಗೊಳ್ಳುತ್ತಿರುವ ಉತ್ಸವಕ್ಕೆ ಸಾಕಷ್ಟು ತಯಾರಿ ಮುಂದುವರಿದಿದೆ. ಇನ್ನೆರಡು ದಿನಗಳಲ್ಲಿ ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ, ಕಾರ್ಯಕ್ರಮ ಸ್ವರೂಪ ಅಂತಿಮಗೊಳಿಸಲಾಗುವದು ಎಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸುಳಿವು ನೀಡಿದ್ದಾರೆ.

ತೋಟಗಾರಿಕಾ ಇಲಾಖೆ: ವರ್ಷಂಪ್ರತಿ ಏಪ್ರಿಲ್‍ನಲ್ಲಿ ನಡೆಯುವ ತೋಟಗಾರಿಕಾ ಇಲಾಖೆಯ ಫಲಪುಷ್ಟ ಪ್ರದರ್ಶನವನ್ನು ಈ ಬಾರಿ ರಾಜಾಸೀಟ್‍ನಲ್ಲಿ ಕೊಡಗು ಉತ್ಸವದ ವೇಳೆ ಸಾರ್ವಜನಿಕ ವೀಕ್ಷಣೆಗೆ ಅನುಕೂಲವಾಗುವ ರೀತಿ ಆಯೋಜಿಸಲಾಗುವದು ಎಂದು ಅಧಿಕಾರಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ. ಕೊಡಗಿನ ಜೀವನದಿ ಹಾಗೂ ಕುಲಮಾತೆ ಕಾವೇರಿಯ ಪ್ರತಿರೂಪವನ್ನು ಪುಷ್ಪಗಳಿಂದ ರೂಪಿಸಲು ಚಿಂತನೆ ನಡೆದಿದೆ.

ಇಲಾಖೆಯಿಂದ 7 ಸಾವಿರ ವಿಭಿನ್ನ ಪುಷ್ಪ ಕುಂಡಗಳು, ಇತರ ಕಸಿ ಮಾಡಿದ ಫಲಪುಷ್ಟಗಳ ಗಿಡಗಳು, ಹೂವಿನ ಕಾವೇರಿ ಮಾತೆ, ವಿಂಟೇಜ್ ಹಳೆಯ ಕಾರು, ಯುದ್ಧ ವಿಮಾನ, ನಕ್ಷತ್ರ ಮೀನು, ನವಿಲು, ತಬಲ ಸೇರಿದಂತೆ ಮಕ್ಕಳ ಆಕರ್ಷಿಸುವ ಸ್ಪೈಡರ್‍ಮ್ಯಾನ್, ದೋರಾ ಮ್ಯಾನ್ ಮುಂತಾದ ಕಲಾಕೃತಿಗಳು ಅನಾವರಣಗೊಳ್ಳಲಿವೆ. ಇನ್ನು ದೊನ್ನೆ ಮೆಣಸಿನ ಕಾಯಿಯಿಂದ ಸಿದ್ಧಗೊಳ್ಳುವ ಗಜರಾಜ, ಜಲಮೂಲದಿಂದಲೇ ಬೆಳೆಯುವ ಸೊಪ್ಪು, ತರಕಾರಿ, ಇತ್ಯಾದಿ ಆಕರ್ಷಣೆಯೊಂದಿಗೆ ಸಂಗೀತ ಕಾರಂಜಿ ಎಲ್ಲರ ಗಮನ ಸೆಳೆಯುವ ದಿಸೆಯಲ್ಲಿ ತಯಾರಿ ನಡೆದಿದೆ.

70ಕ್ಕೂ ಅಧಿಕ ಮಳಿಗೆ: ಇನ್ನು ಹೊಟೇಲ್ ಉದ್ಯಮ, ರೆಸಾರ್ಟ್ ಸಂಸ್ಥೆಗಳಿಂದ 70ಕ್ಕೂ ಅಧಿಕ ಮಳಿಗೆಗಳು ಪ್ರವಾಸಿಗರ ಆಕರ್ಷಿಸಲಿದ್ದು, ವಿಶೇಷವಾಗಿ ಕೊಡಗಿನ ತಿನಿಸುಗಳು ದೊರೆಯಲಿದೆ ಎಂದು ಸಂಬಂಧಿಸಿದ ಮುಖ್ಯಸ್ಥ ನಾಗೇಂದ್ರ ಪ್ರಸಾದ್ ಸುಳಿವು ನೀಡಿದ್ದಾರೆ.

ತಾ. 11 ರಂದು ರಾಜಾಸೀಟ್‍ಗೆ ತೆರಳುವ ಗಾಂಧಿ ಮೈದಾನದ ಮಾರ್ಗದಲ್ಲೇ ಸುಮಾರು 40 ಮಳಿಗೆಗಳಲ್ಲಿ ವಿಭಿನ್ನ ಉತ್ಪನ್ನಗಳು, ಬರುವವರಿಗೆ ಖರೀದಿಗಾಗಿ ಸಜ್ಜುಗೊಳ್ಳಲಿವೆ. ಮಾತ್ರವಲ್ಲದೆ ಪ್ರವಾಸೋದ್ಯಮ, ಪ್ರಾಚ್ಯವಸ್ತು ಇಲಾಖೆ, ಇತರ ಇಲಾಖೆಗಳ ಮಾಹಿತಿ ಹಾಗೂ ಪ್ರದರ್ಶಿನಿ ಎದುರುಗೊಳ್ಳಲಿವೆ. ವಿವಿಧ ಹೊಟೇಲ್ ಉದ್ಯಮಿಗಳು ವಿಭಿನ್ನ ತಿನಿಸುಗಳ ಕೇಂದ್ರ ತೆರೆಯುವ ಇಂಗಿತ ವ್ಯಕ್ತಪಡಿಸಿದ್ದು, ಕೊಡಗಿನ ಆಹಾರಕ್ಕೂ ಒತ್ತು ನೀಡುವದಾಗಿ ಅವರು ವಿವರಿಸಿದ್ದಾರೆ.

ಶ್ವಾನ ಪ್ರದರ್ಶನ: ಪಶು ಸಂಗೋಪನಾ ಇಲಾಖೆಯಿಂದ ತಾ. 12 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ವಿಭಿನ್ನ ತಳಿಯ ಶ್ವಾನಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಇಲಾಖೆಯ ವೈದ್ಯಾಧಿಕಾರಿ ಡಾ. ಚಿದಾನಂದ ಖಚಿತಪಡಿಸಿದ್ದಾರೆ.