ಮಡಿಕೇರಿ, ಜ. 3: ಅಬ್ಬಬ್ಬಾ... ಇದೇನು ಚಳಿಯಪ್ಪಾ... ಜತೆಗೆ ತಣ್ಣನೆ ಬೀಸುವ ಶೀತಗಾಳಿ... ಮುಖ... ಮೈ ಕೈ ಒಡೆಯುವ ರೀತಿಯ ವಾತಾವರಣ ಕಳೆದ ಒಂದೆರಡು ದಿನಗಳಿಂದ ಕಂಡುಬರುತ್ತಿದೆ. ಮಂಜಿನನಗರಿ ಎನಿಸಿರುವ ಜಿಲ್ಲಾ ಕೇಂದ್ರ ಮಡಿಕೇರಿ ಮಾತ್ರವಲ್ಲ, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದೇ ರೀತಿಯ ವಾತಾವರಣ ಸಾಮಾನ್ಯವಾಗಿದೆ. ಮುಂಜಾನೆಯ ಹೊತ್ತು ಸೇರಿದಂತೆ ಸಂಜೆಯಾಗುತ್ತಲೇ ಎಲ್ಲರಿಗೂ ಚಳಿ... ಚಳಿ... ಮಾತ್ರವಲ್ಲದೆ ಹಗಲಿನ ವೇಳೆಯಲ್ಲೂ ಶೀತದ ವಾತಾವರಣದೊಂದಿಗೆ ರಭಸದ ಗಾಳಿಯೂ ಧೂಳೆಬ್ಬಿಸುತ್ತಿದೆ. ಈ ಪರಿಸ್ಥಿತಿಯ ಕುರಿತಾಗಿಯೇ ಎಲ್ಲರಲ್ಲೂ ಪರಸ್ಪರ ಚರ್ಚೆಯೂ ಕಂಡುಬರುತ್ತಿದೆ. ಸ್ವೆಟರ್, ಕ್ಯಾಪ್... ಜರ್ಕಿನ್ ಧರಿಸಿಯೇ ಜನರ ಓಡಾಟ ಗೋಚರವಾಗುತ್ತಿದೆ. ಇದರಿಂದ ಸಹಜವಾಗಿಯೇ ಮುಂಜಾನೆಯ ವೇಳೆಯಲ್ಲಿ ವಾಕಿಂಗ್, ಜಾಗಿಂಗ್ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಸಂಜೆ ವೇಳೆಯಲ್ಲೂ ನಗರ- ಪಟ್ಟಣಗಳು ಜನತೆ ಬೇಗ ಬೇಗನೆ ಮನೆ ಸೇರಿಕೊಳ್ಳುವದರೊಂದಿಗೆ ಕಡಿಮೆಯಾಗಿದೆ. ಶಾಲಾ ಮಕ್ಕಳನ್ನು ಬೆಚ್ಚನೆಯ ಉಡುಪು ಹಾಕಿಸಿಯೇ ಪೋಷಕರು ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. 2018ರ ವರ್ಷಾಂತ್ಯ ಹಾಗೂ ನೂತನ ವರ್ಷಾರಂಭದಿಂದಲೇ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ.

ಕಡಿಮೆ ಉಷ್ಣಾಂಶ ದಾಖಲು

ಹವಾಮಾನ ಇಲಾಖೆಯ ಮಾಹಿತಿಯಂತೆ ತಾ.3ರಂದು ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿಯಲ್ಲಿ ಈ ಬಾರಿಯ ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಈ ದಿನ ಉಷ್ಣಾಂಶ 8.3 ಡಿಗ್ರಿ ಸೆಲ್ಸಿಯಸ್‍ನಷ್ಟು ಕೆಳಮಟ್ಟಕ್ಕೆ ಇಳಿದಿತ್ತು. ಕೇವಲ ಮಡಿಕೇರಿ ಮಾತ್ರವಲ್ಲ ಜಿಲ್ಲೆಯ ಇನ್ನಿತರ ಭಾಗಗಳಲ್ಲೂ ಉಷ್ಣಾಂಶ ಇಳಕೆಯಾಗಿದೆ. ಜನವರಿ 1ರಂದು 13.3 ಡಿಗ್ರಿ ಹಾಗೂ ತಾ. 2ರಂದು 11.4 ಡಿಗ್ರಿ ಸೆಲ್ಸಿಯಸ್‍ನಷ್ಟಿದ್ದ ಉಷ್ಣಾಂಶ ತಾ. 3ರಂದು 8.3 ಡಿಗ್ರಿಗೆ ಇಳಿದಿತ್ತು. ಕೇವಲ ಕೊಡಗು ಮಾತ್ರವಲ್ಲ ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತಿತರ ಕಡೆಗಳಲ್ಲೂ ಚಳಿಯ ವಾತಾವರಣ ಕಂಡುಬರುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನಷ್ಟು ಕಡಿಮೆ ತಾಪಮಾನವಿರುವದಾಗಿ ಹವಾಮಾನ ಇಲಾಖೆಯ ಬೆಂಗಳೂರಿನ ವಿಜ್ಞಾನಿ ಹಾಗೂ ನಿರ್ದೇಶಕ ಎಸ್.ಎಸ್. ಪಾಟೀಲ್

(ಮೊದಲ ಪುಟದಿಂದ) ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಈತನಕ ಬೀದರ್ ಜಿಲ್ಲೆಯಲ್ಲಿ ಈ ಬಾರಿಯ ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಇಲ್ಲಿ 6 ಡಿಗ್ರಿ ಸೆಲ್ಸಿಯಸ್‍ನಷ್ಟು ಕಡಿಮೆ ಉಷ್ಣಾಂಶ ಕಂಡುಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ತಾ.4ರಿಂದ (ಇಂದಿನಿಂದ) ಉಷ್ಣಾಂಶ ಒಂದಷ್ಟು ಹೆಚ್ಚಾಗುವ ಸಾಧ್ಯತೆಯಿರುವದಾಗಿಯೂ ಇಲಾಖೆಯ ಅಧಿಕಾರಿ ಮುನ್ಸೂಚನೆ ನೀಡಿದ್ದಾರೆ.

-ಶಶಿ