ಬೆಂಗಳೂರು, ಜ. 3: ಮಳೆ ಕೊರತೆ, ಅಧಿಕ ಶುಷ್ಕ ವಾತಾವರಣ, ತೇವಾಂಶ ಕೊರತೆ, ಅಂತರ್ಜಲ ಕುಸಿತ ಇತ್ಯಾದಿಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ 176 ತಾಲೂಕುಗಳ ಪೈಕಿ 156 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಇದರಲ್ಲಿ ಕೊಡಗಿನ ಮೂರು ತಾಲೂಕುಗಳು ಸೇರ್ಪಡೆಗೊಂಡಿವೆ.ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಸರ್ಕಾರದ ಉಪಕಾರ್ಯದರ್ಶಿ ಟಿ. ನಾರಾಯಣ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಕೊಡಗಿನ ಮೂರು ತಾಲೂಕುಗಳಾದ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಪರಿಗಣಿಸಲಾಗಿದೆ. ಮುಂದಿನ 6 ತಿಂಗಳ ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇದು ಚಾಲ್ತಿಯಲ್ಲಿರುತ್ತದೆ.
ಬರದ ತೀವ್ರತೆಯನ್ನು ಅಂದಾಜಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಬರಪೀಡಿತ ಪ್ರದೇಶವೆಂದು ಘೋಷಿಸಿರುವ ತಾಲೂಕುಗಳಲ್ಲಿ ಕೇಂದ್ರ ಸರಕಾರವು ಪ್ರಕಟಿಸಿರುವ ಬರ ನಿರ್ವಹಣೆ ಕೈಪಿಡಿ 2016 ಹಾಗೂ ಪರಿಷ್ಕøತ ಕೈಪಿಡಿಯಲ್ಲಿರುವ ಬೆಳೆಹಾನಿಯ ಬಗ್ಗೆ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ನಿಗದಿತ ನಮೂನೆಯಲ್ಲಿ ಸರ್ಕಾರಕ್ಕೆ ವರದಿ
(ಮೊದಲ ಪುಟದಿಂದ) ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಮಾತ್ರವಲ್ಲದೆ ಬರಪೀಡಿತ ತಾಲೂಕುಗಳಲ್ಲಿ ಭೂರಹಿತ ಕಾರ್ಮಿಕರು, ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವ ಕ್ರಮ, ಕುಡಿಯುವ ನೀರು ಸರಬರಾಜು, ಮೇವು ಸರಬರಾಜು ಮತ್ತು ಜಾನುವಾರು ಸಂರಕ್ಷಣೆ ಇತ್ಯಾದಿ ಬರಪರಿಹಾರ ಕಾರ್ಯಗಳನ್ನು ಎಸ್‍ಡಿಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್ ಮಾರ್ಗಸೂಚಿಯ ಪ್ರಕಾರ ಕೈಗೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.