ಸೋಮವಾರಪೇಟೆ,ಜ.3: ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು ಫಲಿತಾಂಶವೂ ಘೋಷಣೆಯಾಗಿ 2 ತಿಂಗಳು ಕಳೆದರೂ ಇಂದಿಗೂ ಆಡಳಿತ ಮಂಡಳಿ ರಚನೆಗೆ ಕಾಲ ಕೂಡಿ ಬಂದಿಲ್ಲ.

ಅಧಿಕಾರ ಸ್ಥಾಪನೆಗೆ ಗೆಲುವು ಸಾಧಿಸಿದ ಸಂದರ್ಭ ಇದ್ದಂತಹ ಹುಮ್ಮಸ್ಸು ಇದೀಗ ಯಾರಲ್ಲೂ ಕಾಣುತ್ತಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಲೇ ಪಂಚಾಯಿತಿ ಕೆಲಸ ಕಾರ್ಯಗಳು ನಡೆಯುತ್ತಿದ್ದು, ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಅಧಿಕಾರ ವಹಿಸಿಕೊಳ್ಳುವ ಕಾಲ ಇನ್ನೂ ಹತ್ತಿರವಾಗಿಲ್ಲ. ಈ ಮಧ್ಯೆ ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪಿನತ್ತ ಗೆದ್ದವರ ಚಿತ್ತ ನೆಟ್ಟಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಕಳೆದ ಅಕ್ಟೋಬರ್ 28ರಂದು ಮತದಾನ ನಡೆದಿದ್ದು, 31ರಂದು ಹೊರಬಿದ್ದ ಫಲಿತಾಂಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತ ಲಭಿಸಿದ್ದು, ಅಧಿಕಾರ ಸ್ಥಾಪನೆಗೆ ಎರಡೂ ಪಕ್ಷಗಳು ಮುಂದಾಗಿವೆ.

ಈ ಮಧ್ಯೆ ಸರ್ಕಾರ ನಿಗದಿ ಪಡಿಸಿದ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಸಮರ್ಪಕವಾಗಿಲ್ಲ ಎಂದು ಉತ್ತರ ಕರ್ನಾಟಕದ ಕೆಲ ಪ.ಪಂ.ಗಳ ಮುಖಂಡರು ಹೈಕೋರ್ಟ್ ಮೆಟ್ಟಿಲೇರಿರುವದರಿಂದ ರಾಜ್ಯದ ಯಾವ ಪ.ಪಂ.ಗಳಿಗೂ ಆಡಳಿತ ಮಂಡಳಿ ರಚನೆಗೆ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಇದರಿಂದಾಗಿ ರಾಜ್ಯದ ಇತರ ಜಿಲ್ಲೆಗಳ ಪ.ಪಂ.ಗಳಿಗೆ 4 ತಿಂಗಳಿನಿಂದ ಆಡಳಿತ ಮಂಡಳಿ ರಚನೆಯಾಗಿಲ್ಲ. ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿನಲ್ಲಿ ಎರಡು ತಿಂಗಳು ತಡವಾಗಿ ಚುನಾವಣೆ ನಡೆದಿದ್ದು, ಇಲ್ಲಿಯೂ 2 ತಿಂಗಳಾದರೂ ಅಧಿಕಾರಿಗಳ ಆಡಳಿತದಲ್ಲಿಯೇ ಪಟ್ಟಣ ಪಂಚಾಯಿತಿಗಳಿವೆ.

ಸದ್ಯ ಸೋಮವಾರಪೇಟೆ ಪ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಆಕಾಂಕ್ಷಿಗಳೂ ಹೆಚ್ಚಿದ್ದಾರೆ. ಬಹುಮತ ಪಡೆದಿರುವ ಮೈತ್ರಿಕೂಟದಿಂದ ಹಿರಿಯ ಸದಸ್ಯರಾಗಿರುವ ವೆಂಕಟೇಶ್, ಸಂಜೀವ ಅವರುಗಳೊಂದಿಗೆ ಉದಯಶಂಕರ್, ಶೀಲಾ ಡಿಸೋಜ, ಜಯಂತಿ ಶಿವಕುಮಾರ್ ಅವರುಗಳೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಒಂದನೇ ವಾರ್ಡ್‍ನಿಂದ ಗೆಲುವು ಸಾಧಿಸಿರುವ ಉದಯಶಂಕರ್ ಅವರು ತಮಗೇ ಅಧ್ಯಕ್ಷ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದು, ಈಗಾಗಲೇ ತಮ್ಮ ಅಹವಾಲನ್ನು ಪಕ್ಷದ ವರಿಷ್ಠರ ಮುಂದಿಟ್ಟಿದ್ದಾರೆ. ಕಾಂಗ್ರೆಸ್‍ನ ಹಿರಿಯ ಸದಸ್ಯರಾಗಿರುವ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿಯೇ ಸಿದ್ಧ ಎನ್ನುತ್ತಿದ್ದಾರೆ. ಪ.ಪಂ.ನಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಪಕ್ಷದ ಇತರ ಮೂವರು ಸದಸ್ಯರೂ ಸಹ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ವೆಂಕಟೇಶ್, ಸಂಜೀವ, ಶೀಲಾ ಡಿಸೋಜ ಅವರುಗಳು ತಮ್ಮ ಪಕ್ಷದ ಮುಖಂಡರ ಮೇಲೆ ಪ್ರಭಾವ ಬೀರುತ್ತಿದ್ದಾರೆ.

ಮೈತ್ರಿಕೂಟವಾಗಿರುವ ಹಿನ್ನೆಲೆ ಜೆಡಿಎಸ್‍ನ ಜಯಂತಿ ಶಿವಕುಮಾರ್ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ದ್ದಾರೆ. ಬಿಜೆಪಿ ಮಾತ್ರ ಸದ್ಯದ ಮಟ್ಟಿಗೆ ತಟಸ್ಥವಾಗಿದ್ದು, ಮೈತ್ರಿಕೂಟದಲ್ಲಿನ ಬೆಳವಣಿಗೆಯ ಏರಿಳಿತವನ್ನು ಗಮನಿಸುತ್ತಿದೆ. ಕಳೆದ ಬಾರಿ ಬಹುಮತ ಇಲ್ಲದಿದ್ದರೂ ಸಹ ರಾಜಕೀಯ ತಂತ್ರಗಾರಿಕೆ ನಡೆಸಿ ಅಧಿಕಾರ ಉಳಿಸಿಕೊಂಡಿದ್ದ ಬಿಜೆಪಿ ಈ ಬಾರಿ ಮೌನವಾಗಿರುವದರ ಹಿಂದೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ನಿರಾಸಕ್ತಿ ಅಡಗಿದೆ ಎನ್ನಲಾಗಿದೆ.

ಮೈತ್ರಿಕೂಟದಲ್ಲಿ 7 ಸದಸ್ಯ ಬಲವಿದ್ದು, ಸ್ಪಷ್ಟ ಬಹುಮತ ಹೊಂದಿದೆ. ಬಿಜೆಪಿಯಿಂದ 3 ಮಂದಿ ಸದಸ್ಯರಿದ್ದಾರೆ. ಬಿಜೆಪಿ ಬಂಡಾಯ ವಿದ್ದ ಓರ್ವರು ಪಕ್ಷೇತರರಾಗಿ ಆಯ್ಕೆಯಾಗಿದ್ದು, ಇವರು ಬಿಜೆಪಿಗೆ ಬೆಂಬಲ ಸೂಚಿಸಿದರೆ ಶಾಸಕರು ಮತ್ತು ಸಂಸದರ ಮತದಿಂದ ಸಂಖ್ಯಾಬಲ 6ಕ್ಕೆ ಏರಿಕೆಯಾಗಲಿದೆ. ಮೈತ್ರಿಕೂಟ ದಿಂದ ಅಧ್ಯಕ್ಷ ಸ್ಥಾನಕ್ಕೆ ಒಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿರುವದು ಬಿಜೆಪಿಯ ಕಾತುರವನ್ನು ಹೆಚ್ಚಿಸಲು ಕಾರಣವಾಗಿದೆ.

ಪ.ಪಂ. ಅಧಿಕಾರ ಸ್ಥಾಪನೆಗೆ ಶಾಸಕರು ಮನಸ್ಸು ಮಾಡುತ್ತಿಲ್ಲ ಎಂಬ ನಿರಾಸೆ ಬಿಜೆಪಿ ಸದಸ್ಯರಲ್ಲಿದ್ದು, ಈ ಅವಧಿಯಲ್ಲಿ ಮೈತ್ರಿಕೂಟವೇ ಆಡಳಿತ ನಡೆಸಲಿ ಎಂದು ಅಪ್ಪಚ್ಚು ರಂಜನ್ ಹೇಳಿದ್ದಾರೆ. ಈ ಮಧ್ಯೆ ಪಕ್ಷೇತರ ಸದಸ್ಯರಿಗೆ ‘ಸದ್ಯದ ಮಟ್ಟಿಗೆ ಯಾವದೇ ತೀರ್ಮಾನ ಬೇಡ;ಕಾದು ನೋಡುವ’ ಎಂದು ಶಾಸಕರು ಮೌಖಿಕವಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. 20 ವರ್ಷಗಳ ಬಿಜೆಪಿ ಅಡಳಿತ: ಹಿಂದೆ ಪುರಸಭೆಯಾಗಿದ್ದ ಸ್ಥಳೀಯಾಡಳಿತ ನಂತರ ಮಂಡಲ ಪಂಚಾಯಿತಿ ಆ ನಂತರ ಪರಿವರ್ತಿತ ಮಂಡಲ ಪಂಚಾಯಿತಿಯಾಗಿ 1996 ರಲ್ಲಿ ಪ್ರಥಮವಾಗಿ ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂತು. 25.7.1996 ರಂದು ಪಟ್ಟಣ ಪಂಚಾಯಿತಿಯ ಪ್ರಥಮ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಕಳೆದ 20 ವರ್ಷಗಳಿಂದ ಆಡಳಿತ ನಡೆಸುತ್ತಾ ಪಂಚಾಯಿತಿಯನ್ನು ಬಿ.ಜೆ.ಪಿ. ಯ ಭದ್ರಕೋಟೆ ಮಾಡಿಕೊಂಡಿತ್ತು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 3 ಸ್ಥಾನದಲ್ಲಿ ಗೆದ್ದಿದ್ದು, ಬಿಜೆಪಿ 4 ಸ್ಥಾನ ಗಳಿಸಿದರೂ ಸಹ ಪಕ್ಷೇತರ ಅಭ್ಯರ್ಥಿ ಮತ್ತು ಕಾಂಗ್ರೆಸ್‍ನ ಸದಸ್ಯೆಯಾಗಿದ್ದ ಶೀಲಾ ಡಿಸೋಜ ಅವರ ಸಹಕಾರದಿಂದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಬಿಜೆಪಿಯ ಲೀಲಾ ನಿರ್ವಾಣಿ ಅಧ್ಯಕ್ಷೆಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಜೆಡಿಎಸ್‍ನ ಈರ್ವರನ್ನು ಬಿಜೆಪಿಗೆ ಕರೆತಂದು ವಿಜಯಲಕ್ಷ್ಮೀ ಅವರನ್ನು ಅಧ್ಯಕ್ಷೆಯನ್ನಾಗಿ ಮಾಡಿ, ಪಕ್ಷೇತರ ಸದಸ್ಯ ರಮೇಶ್ ಅವರನ್ನು ಉಪಾಧ್ಯಕ್ಷರನ್ನಾಗಿಸುವ ಮೂಲಕ ಬಿಜೆಪಿಯೇ ಅಧಿಕಾರ ನಡೆಸಿತ್ತು.

ಈ ಬಾರಿ ಕಾಂಗ್ರೆಸ್ 4, ಬಿಜೆಪಿ ಮತ್ತು ಜೆಡಿಎಸ್ ತಲಾ 3, ಪಕ್ಷೇತರ 1 ಸ್ಥಾನದಲ್ಲಿ ಜಯಗಳಿಸಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.ಈ ಮೀಸಲಾತಿಯನ್ನು ಬದಲಾಯಿಸಲು ಬಹುತೇಕ ಆಕಾಂಕ್ಷಿಗಳು ಬೆಂಗಳೂರು ಮಟ್ಟದಲ್ಲಿ ವ್ಯವಹರಿಸಿದ್ದು, ಬದಲಾವಣೆ ಅಸಾಧ್ಯ ಎಂದು ಹಿರಿಯ ವಕೀಲರೋರ್ವರು ತಿಳಿಸಿದ ಮೇರೆ ಸುಮ್ಮನಾಗಿದ್ದಾರೆ. ಒಟ್ಟಾರೆ ಹೈಕೋರ್ಟ್‍ನ ಆದೇಶ ಮತ್ತು ಸರ್ಕಾರದ ಅಧಿಸೂಚನೆಯ ನಂತರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ರಂಗೇರಲಿದೆ.

- ವಿಜಯ್ ಹಾನಗಲ್