ಮಡಿಕೇರಿ, ಜ. 3: ಭಾರತ ಸೇನೆಯ ಲೆಕ್ಕಪತ್ರ ವಿಭಾಗದ ಅಧಿಕಾರಿಗಳ ತಂಡವು ಇಂದು ಮತ್ತೆ ನಾಳೆ (ತಾ.4) ಇಲ್ಲಿನ ಗೌಡ ಸಮಾಜದ ಕೆಳಗಿನ ಕಟ್ಟಡದಲ್ಲಿ ಪಿಂಚಣಿ ಅದಾಲತ್ ಮೂಲಕ ನಿವೃತ್ತ ಸೈನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಮುಂದಾಗಿದ್ದಾರೆ. ತಮ್ಮ ಸೇವೆಯ ಬಳಿಕ ಸೈನಿಕ ಕುಟುಂಬಗಳ ಸಮಸ್ಯೆಗೆ ಆಯ ತವರು ಜಿಲ್ಲೆಯಲ್ಲೇ ಸ್ಪಂದಿಸಿ ಸರಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಂಬಂಧಪಟ್ಟವರಿಗೆ ಸಲಹೆ ನೀಡಿದ್ದು, ಆ ಮೇರೆಗೆ ಎರಡು ದಿನಗಳ ಅದಾಲತ್‍ನಲ್ಲಿ ಪರಿಹಾರ ಕಲ್ಪಿಸಲಾಗುವದು ಎಂದು ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮೇಜರ್ ಗೀತಾ ಖಚಿತಪಡಿಸಿದ್ದಾರೆ. ಇಂದು ಸುಮಾರು 130 ಮಾಜಿ ಸೈನಿಕರ ಕುಟುಂಬಸ್ಥರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದು, ತಾ. 4 ರಂದು ಕೂಡ ಈ ಅದಾಲತ್‍ನಲ್ಲಿ ಖುದ್ದು ಮಾಜಿ ಸೈನಿಕರು ಪರಿಹಾರ ಕಂಡುಕೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಸೈನಿಕರಿಗೆ ವೇತನ ಹಾಗೂ ನಿವೃತ್ತಿ ಬಳಿಕ ಪಿಂಚಣಿಯು ಅಲಹಾಬಾದ್‍ನಲ್ಲಿರುವ ರಕ್ಷಣಾ ಇಲಾಖೆಯ ಕೇಂದ್ರ ಲೆಕ್ಕಪತ್ರ ಕಚೇರಿಯಿಂದ ಲಭಿಸಲಿದ್ದು, ಅಲ್ಲಿನ ಅಧಿಕಾರಿಗಳು ಖುದ್ದಾಗಿ ಇಲ್ಲಿ ಆಗಮಿಸಿ ನ್ಯೂನ್ಯತೆಗಳಿಗೆ ಪರಿಹಾರ ಕಲ್ಪಿಸುತ್ತಿರುವದಾಗಿ ಅವರು ವಿವರಿಸಿದರು. ಈ ತಂಡದಲ್ಲಿ ಸೇನೆಯ ಸಾರ್ವಜನಿಕ ಸೇವಾ ವಿಭಾಗದ ಮುಖ್ಯ ನಿಯಂತ್ರಣಾಧಿಕಾರಿ (ಲೆಕ್ಕಪತ್ರ ವಿಭಾಗ) ಐಡಿಎಎಸ್ ಪ್ರವೀಣ್‍ಕುಮಾರ್, ಎಸ್.ಕೆ. ಶರ್ಮಾ, ದಿಲ್ಲಿ ಘಟಕದ ಸಂಜೀವ್ ಮಿತ್ತಲ್, ಬೆಂಗಳೂರಿನ ಸುರೇಶ್‍ಬಾಬು, ದಿಲ್ಲಿ ಸೇನಾ ಕಚೇರಿಯ ವಿಭಾಸೂದ್ ಮೊದಲಾದವರು ಮಾಜಿ ಸೈನಿಕರ ಕುಂದುಕೊರತೆ ಆಲಿಸಿ, ಸಲಹೆ ಸೂಚನೆ ನೀಡಿದರು. ಅಲ್ಲದೆ ಸಂಬಂಧಪಟ್ಟ ಬ್ಯಾಂಕ್‍ಗಳಿಂದ ಸಕಾಲದಲ್ಲಿ ಪಿಂಚಣಿ ಹಣ ತಲಪಿಸಲು ಗಮನ ಹರಿಸುವಂತೆ, ಆಯ ಬ್ಯಾಂಕ್ ಅಧಿಕಾರಿಗಳನ್ನು ಅದಾಲತ್‍ಗೆ ಕರೆಸಿ ತಿಳಿ ಹೇಳಿದರು.