ವೀರಾಜಪೇಟೆ, ಜ. 3: ಮಡಿಕೇರಿಯ ಭೂ ಮಾಪನ ಅಧಿಕಾರಿ ಷಂಶುದ್ದೀನ್ ಅವರು ರ್ಯೆತರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದು ರೈತರ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ರೈತರ ಮನವಿಗಳಿಗೆ ಸ್ಪಂದಿಸದಿರುವದು, ರೈತರನ್ನು ಅಧಿಕಾರದ ದರ್ಪದಿಂದ ನಿಂದಿಸುತ್ತಿರುವದರಿಂದ ಅವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಂಡು ತಕ್ಷಣ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ತಾ. 23 ರಂದು ತಾಲೂಕು ಹಿತ ರಕ್ಷಣಾ ಸಮಿತಿ, ವಿವಿಧ ರೈತ ಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ವೀರಾಜಪೇಟೆಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ತಾಲೂಕು ಹಿತರಕ್ಷಣಾ ಸಮಿತಿ ಸಾರ್ವಜನಿಕ ಅಧ್ಯಕ್ಷ ಕೇಚಂಡ ಕುಶಾಲಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ವೆ ಇಲಾಖೆಯ ಎ.ಡಿ.ಎಲ್.ಆರ್. ವಾರಕ್ಕೊಮ್ಮೆ ವೀರಾಜಪೇಟೆಗೆ ಭೇಟಿ ನೀಡುತ್ತಾರೆ. ಸರ್ವೆ ಇಲಾಖೆಯಲ್ಲಿ ನೂರಾರು ಕಡತಗಳನ್ನು ಬಾಕಿ ಉಳಿಸಿಕೊಂಡಿರುವ ಬಗ್ಗೆ ರೈತರು ವಿಚಾರಿಸಿದರೆ ಸಾರ್ವಜನಿಕ ಹಿತರಕ್ಷಣಾ ಸಮಿತಿಯವರು ನಮ್ಮ ಕಚೇರಿಗೆ ಬರಬಾರದು ಎಂದು ಅವಾಚ್ಯ ಶಬ್ಧ ಬಳಸಿ ಹೊರ ದಬ್ಬುವದು ನಿರಂತರವಾಗಿದೆ. ಇವರ ವರ್ತನೆಯನ್ನು ಕಂದಾಯ ಅಧಿಕಾರಿಗಳಿಗೆ ತಿಳಿಸಿದರೆ ಅವರಿಗೂ ಇದೇ ಪದವನ್ನು ಬಳಸುತ್ತಾರೆ. ತನಗೆ ರಾಜಕೀಯ ಪ್ರಭಾವಿಗಳ ಹಿನ್ನೆಲೆ ಇದ್ದು ತನ್ನ ಬಗ್ಗೆ ಯಾವದೇ ಅಧಿಕಾರಿಗಳಿಗೆ ದೂರು ನೀಡಿದರೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡುತ್ತಾರೆ.
ಕಳೆದ ನವೆಂಬರ್‍ನಲ್ಲಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ತುರ್ತು ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಇವರ ವಿರುದ್ಧ ಹಲವಾರು ದೂರುಗಳು ಬಂದಿದ್ದ ಸಂದರ್ಭ ಶಾಸಕರು ಒಂದು ತಿಂಗಳಲ್ಲಿ ಸಮಸ್ಯೆ ಇತ್ಯರ್ಥಪಡಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇವರ ವರ್ತನೆಯಿಂದ ಸಾರ್ವಜನಿಕರು ಹಾಗೂ ರೈತರು ಹೈರಾಣಾಗಿದ್ದು ಇವರು ರೈತರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಿತ ರಕ್ಷಣಾ ಸಮಿತಿಯ ಪ್ರಮುಖರು ಹಾಗೂ ರೈತರ ಸಮಕ್ಷಮದಲ್ಲಿ ಈ ಅಧಿಕಾರಿ ಕ್ಷಮಾಪಣೆ ಕೇಳದಿದ್ದರೆ ಪ್ರತಿಭಟನೆಯನ್ನು ಮುಂದುವರೆಸಿ ತಾಲೂಕು ಕಚೇರಿ ಹಾಗೂ ಸರ್ವೆ ಕಚೇರಿಗೆ ಬೀಗ ಜಡಿಯಲಾಗುವದು ಎಂದು ಹೇಳಿದರು.
ಸಾರ್ವಜನಿಕ ಹಿತರಕ್ಷಣಾ ಸಮಿತಿ ಸದಸ್ಯೆ ಕಾಳಮಂಡ ತಂಗಮ್ಮ ಮಾತನಾಡಿ ಅಧಿಕಾರಿ ಷಂಶುದ್ದೀನ್ ಅವರಿಗೆ ಯಾವದೇ ಅರ್ಜಿ, ಮನವಿ ಸಲ್ಲಿಸಿದರೆ ಅದಕ್ಕೆ ಸ್ಪಂದಿಸುವದಿಲ್ಲ ಎಂದು ದೂರಿದರು.
ತೆರಾಲು ಗ್ರಾಮದ ಬೊಟ್ಟಂಗಡ ಮಾಚಯ್ಯ ಮಾತನಾಡಿ ಈ ಅಧಿಕಾರಿ ಸರ್ವೆಗೆ ಅರ್ಜಿ ನೀಡಿದರೆ ಕೆಲವು ದಿನಗಳು ಬಿಟ್ಟು ಬರುವಂತೆ ಹೇಳಿ ನಂತರ ಕೇಳಿದರೆ ಅರ್ಜಿ ಕೊಟ್ಟವರ ವಿರುದ್ಧ ಪೊಲೀಸ್ ಪುಕಾರು ನೀಡುವದಾಗಿ ಬೆದರಿಕೆ ಹಾಕುತ್ತಾರೆ. ತಾಲೂಕು ಆಡಳಿತಕ್ಕೆ ದೂರು ನೀಡಿದರೆ ಇದು ನಮಗೆ ಸಂಬಂಧಿಸಿಲ್ಲ ಎಂದು ತಿಳಿಸುತ್ತಾರೆ ಎಂದರು.
ಗೋಷ್ಠಿಯಲ್ಲಿ ಬೊಳ್ಳಚಂಡ ಕಾಳಪ್ಪ, ಉದ್ದಪಂಡ ಅಜೀತ್, ಮೊಣ್ಣಂಡ ಮೋತಿ ಕಾರ್ಯಪ್ಪ, ಕುಟ್ಟಂಡ ಪ್ರಭು, ತಮ್ಮಯ್ಯ ಬಿ.ಪಿ ಹಸೈನಾರ್, ಇಸ್ಮಾಯಿಲ್ ಕೊಕ್ಕಂಡ ಕಾವೇರಪ್ಪ ಉಪಸ್ಥಿತರಿದ್ದರು.