ಸೋಮವಾರಪೇಟೆ, ಜ. 3: ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ರಾತ್ರಿ ಪುಂಡರ ಪುಂಡಾಟ ನಡೆದಿದ್ದು, ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ಅಳವಡಿಸಿರುವ ನೀರಿನ ಟ್ಯಾಪ್‍ಗಳನ್ನು ಕಿತ್ತೆಸೆದು, ಹೂ ಕುಂಡಗಳನ್ನು ಒಡೆಯುವ ಮೂಲಕ ವಿಕೃತಿ ಮೆರೆದಿದ್ದಾರೆ.
ಎಂದಿನಂತೆ ಸಂಜೆ ಶಾಲೆಯಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೆರಳಿದ್ದು, ರಾತ್ರಿ ವೇಳೆ ಶಾಲೆಯ ಗೇಟ್‍ನಿಂದ ಇಳಿದಿರುವ ಪುಂಡರು, ಶಾಲಾ ಆವರಣದಲ್ಲಿ ಹೂಕುಂಡ ಗಳಲ್ಲಿ ಬೆಳೆಸಿದ್ದ ಹೂವಿನ ಗಿಡಗಳನ್ನು ಕಿತ್ತೆಸೆದು ಹೂಕುಂಡಗಳನ್ನು ಒಡೆದು ಹಾಕಿದ್ದಾರೆ.
ಇದರೊಂದಿಗೆ ಶಾಲೆಯ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಒದಗಿಸಲು ನಿರ್ಮಿಸಲಾಗಿರುವ ಟ್ಯಾಂಕ್‍ಗಳನ್ನು ಹಾಳುಗೆಡವಿದ್ದು, ಟ್ಯಾಂಕ್‍ಗೆ ಅಳವಡಿಸಿದ್ದ ಟ್ಯಾಪ್‍ಗಳನ್ನು ಕಿತ್ತೆಸೆದಿದ್ದಾರೆ. ನೀರಿನ ಸಂಪರ್ಕಕ್ಕಾಗಿ ಅಳವಡಿಸಿದ್ದ ಪೈಪ್‍ಗಳನ್ನು ಮುರಿದು ಹಾಕಿದ್ದಾರೆ.
ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳೇ ಮುಚ್ಚುತ್ತಿರುವ ಪ್ರಸ್ತುತದ ದಿನಗಳಲ್ಲಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಒದಗಿಸುತ್ತಿರುವ ಸರ್ಕಾರಿ ಶಾಲೆಯಲ್ಲಿ ಇಂತಹ ಪುಂಡಾಟ ನಡೆಸಿರುವದು ಸಾರ್ವಜನಿಕರು ಹಾಗೂ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲೆಯೊಳಗೆ ಅಕ್ರಮ ಪ್ರವೇಶ ಮಾಡಿ, ಕುಡಿಯುವ ನೀರಿನ ಪೈಪ್, ಟ್ಯಾಪ್‍ಗಳನ್ನು ಮುರಿದು, ಹೂಕುಂಡ ಗಳನ್ನು ಒಡೆದು ವಿಕೃತಿ ಮೆರೆದಿರುವ ಪುಂಡರನ್ನು ಪತ್ತೆಹಚ್ಚುವ ಮೂಲಕ, ಕಾನೂನು ಕ್ರಮ ಕೈಗೊಳ್ಳುವಂತೆ ಶಾಲಾ ಮುಖ್ಯೋಪಾಧ್ಯಾಯಿನಿ ತೆರೇಸಾ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಅವರುಗಳು, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರಿಗೆ ದೂರು ಸಲ್ಲಿಸಿದ್ದಾರೆ.