ಮಡಿಕೇರಿ, ಜ. 3: ಪುರಾಣೋಕ್ತ ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದ ಪರಂಪರೆಯೊಂದಿಗೆ ಅಲ್ಲಿನ ಕಟ್ಟುಪಾಡುಗಳನ್ನು ಉಲ್ಲಂಘಿಸಿ ಕೇರಳ ಸರಕಾರದ ಪೊಲೀಸ್ ರಕ್ಷಣೆಯಲ್ಲಿ ಮಹಿಳೆಯರಿಬ್ಬರಿಗೆ ದೇವ ಸನ್ನಿಧಿಗೆ ಪ್ರವೇಶ ಕಲ್ಪಿಸಿರುವದ್ದನ್ನು ಖಂಡಿಸಿ, ನಗರದಲ್ಲಿ ಅಯ್ಯಪ್ಪ ಭಕ್ತರ ಸಹಿತ ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಇಂದು ಹಗಲು ಹೆದ್ದಾರಿ ತಡೆದು ಪ್ರತಿಭಟಿಸಿದ ಕಾರ್ಯಕರ್ತರನ್ನು ನಿಯಂತ್ರಿಸಿದ ಪೊಲೀಸರು, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ, ನಗರ ಬಿಜೆಪಿ ಹಾಗೂ ಸಂಘದ ಕಾರ್ಯಕರ್ತರು ಕೇರಳ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಿನ ಮುಖ್ಯಮಂತ್ರಿ ಪಿಣಾರಾಯ್ ವಿಜಯನ್ ಸರಕಾರ ದುರುದ್ದೇಶದಿಂದ ಹಿಂದೂಗಳ ಶ್ರದ್ಧೆ, ನಂಬಿಕೆ ಹಾಗೂ ಧಾರ್ಮಿಕ ಕಟ್ಟುಪಾಡುಗಳಿಗೆ ಅವಮಾನಿಸುವ ಮೂಲಕ ಪೊಲೀಸ್ ರಕ್ಷಣೆಯಲ್ಲಿ ಮಹಿಳೆಯರಿಬ್ಬರನ್ನು ವಾಮಮಾರ್ಗದಿಂದ ಸನ್ನಿಧಿಗೆ ಪ್ರವೇಶ ಕಲ್ಪಿಸಿದಾಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂ.ಜಾ.ವೇ. ಸಂಚಾಲಕ ಕೊಕ್ಕೆರ ಅಜಿತ್ ಹಾಗೂ ಬಿಜೆಪಿಯ ರಾಬಿನ್ ದೇವಯ್ಯ, ಘಟನೆ ಖಂಡಿಸಿ ಮಾತನಾಡಿದರು. ಪ್ರಮುಖರಾದ ಕೆ.ಹೆಚ್. ಚೇತನ್, ಮಹೇಶ್ ಜೈನಿ, ಪ್ರಸನ್ನ ಭಟ್, ಮನುಕುಮಾರ್ ರೈ, ಅರುಣ್ ಶೆಟ್ಟಿ, ಮಹೇಶ್, ಗಣೇಶ್, ಲಿಂಗಪ್ಪ, ಉನ್ನಿಕೃಷ್ಣ, ರಮೇಶ್ ಹೊಳ್ಳ, ಸುಬ್ರಮಣ್ಯ ಹೊಳ್ಳ ಸೇರಿದಂತೆ ಅಯ್ಯಪ್ಪ ಭಕ್ತರು ಪಾಲ್ಗೊಂಡಿದ್ದರು.

ಕೇರಳಬಂದ್ ಬಿಸಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕ್ಕೆ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ ಕರೆ ಕೊಟ್ಟಿದ್ದ ಕೇರಳ ಬಂದ್ ಬಿಸಿ ಕರ್ನಾಟಕ ಗಡಿ ಗ್ರಾಮ ಕರಿಕೆ ಭಾಗಮಂಡಲಕ್ಕೂ ತಟ್ಟಿತ್ತು.

ಬೆಳಿಗ್ಗೆಯಿಂದಲೇ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸುಳ್ಯದ ಕಡೆ ತೆರಳುವ ಶಾಲಾ ವಾಹನ ತೆರಳದೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಶಾಲೆಗೆ ಗೈರುಹಾಜರಿಯಾಗ ಬೇಕಾಯಿತು. ಚೆಂಬೇರಿಯಲ್ಲಿ ಬಿಕೋ ಅನ್ನುತ್ತಿತ್ತು. ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ಸ್ಥಗಿತವಾಗಿತ್ತು.