ಸಿದ್ದಾಪುರ, ಜ. 1: ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಗ್ರಾಮದ ನದಿ ದಡದ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಡಬೇಕೆಂದು ನದಿ ದಡದ ನಿವಾಸಿಗಳು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಎ. ಯಮುನ ಹಾಗೂ ಬೈಜು ಕರಡಿಗೋಡು ಗ್ರಾಮದ ನದಿ ದಡದಲ್ಲಿ ನೂರಾರು ಬಡ ಕುಟುಂಬಗಳು ವಾಸ ಮಾಡಿಕೊಂಡಿದ್ದಾರೆ. ಮಳೆಗಾಲದ ಸಂದರ್ಭ ಕಾವೇರಿ ಪ್ರವಾಹದಲ್ಲಿ ಸಮಸ್ಯೆಗೆ ಸಿಲುಕುತ್ತಿದ್ದಾರೆ ಎಂದರು. ನದಿ ದಡದ ನಿವಾಸಿಗಳಿಗೆ ಜಿಲ್ಲಾಡಳಿತದ ವತಿಯಿಂದ ತಾತ್ಕಾಲಿಕವಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗುವದು. ಇದಲ್ಲದೇ ಜನಪ್ರತಿನಿಧಿಗಳು ಕೂಡ ಭೇಟಿ ನೀಡಿ ಪೊಳ್ಳು ಭರವಸೆಗಳನ್ನು ನೀಡಿ ತೆರಳುತ್ತಿದ್ದಾರೆ. ಶಾಶ್ವತ ಸೂರು ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ದೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಸಿದ್ದಾಪುರ ಸಮೀಪದ ಘಟ್ಟದಳ ಬಳಿಯ ಸರ್ವೆ ನಂ. 28/2 ರಲ್ಲಿ ಒತ್ತುವರಿ ಭೂಮಿಯನ್ನು ಕಂದಾಯ ಇಲಾಖಾಧಿಕಾರಿಗಳು ಗುರುತಿಸಿದ್ದರು. ಆದರೆ ಇದೀಗ 6 ತಿಂಗಳು ಕಳೆದರು ನದಿ ದಡದ ನಿವಾಸಿಗಳಿಗೆ ಶಾಶ್ವತ ಸೂರು ಬಗ್ಗೆ ಕ್ರಮ ಕೈಗೊಳ್ಳದೆ ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ಟೀಕಿಸಿದರು.

ಹತ್ತು ದಿನಗಳ ಒಳಗಾಗಿ ನದಿ ದಡದ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದೆಂದು ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಎಂ.ಎ. ಕೃಷ್ಣ, ಮಣಿ ಹಾಜರಿದ್ದರು.