ವೀರಾಜಪೇಟೆ, ಜ. 1: ಅನೇಕ ದಶಕಗಳಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ಸೇವಾ ಸಮಿತಿಯಿಂದ ಅಯ್ಯಪ್ಪ ಉತ್ಸವವು ಈ ಬಾರಿ ತಾ. 30 ರಂದು ರಾತ್ರಿ ಗುಳಿಗನ ಪೂಜೆ, ಶುದ್ಧ ಕಲಶದೊಂದಿಗೆ ಆರಂಭಗೊಂಡು ಇಂದಿನ ರಾತ್ರಿಯವರೆಗೂ ಮುಂದುವರೆಯಿತು.

ತಾ. 1ರಂದು ಹೊಸ ವರ್ಷದ ಪ್ರಾರಂಭ ಜೊತೆಗೆ ವೀರಾಜಪೇಟೆ ಪಟ್ಟಣದಲ್ಲಿ ಅಯ್ಯಪ್ಪ ಉತ್ಸವ ಹಬ್ಬದ ವಾತಾವರಣ ಮೂಡಿಸಿತ್ತು. ಭಕ್ತಾದಿಗಳು ಬೆಳಗ್ಗಿನಿಂದಲೇ ತಂಡೋಪ ತಂಡವಾಗಿ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುತ್ತಿದ್ದರು.

ದೇವಾಲಯದಲ್ಲಿ ಬೆಳಿಗ್ಗೆ ಗಣಪತಿ ಹೋಮ, 9. 30 ಗಂಟೆಗೆ ತುಲಾಭಾರ, 10 ಗಂಟೆಗೆ ಅಯ್ಯಪ್ಪನ ವೃತಧಾರಿ ಭಕ್ತಾದಿಗಳಿಂದ ಲಕ್ಷಾರ್ಚನೆ ನೆರವೇರಿತು. ಅಪರಾಹ್ನ 12.45ಕ್ಕೆ ಮಹಾ ಪೂಜಾ ಸೇವೆ ನಂತರ ವರ್ಷಂಪ್ರತಿಯಂತೆ ಈ ಬಾರಿಯು ಭಕ್ತಾದಿಗಳಿಗೆ ಬಾನಿನಲ್ಲಿ ಸಾಂಪ್ರದಾಯಿಕವಾಗಿ ಜೋಡಿ ಗರುಡಗಳ ಪ್ರದರ್ಶನವಾಯಿತು. ನಂತರ 1.30 ಗಂಟೆಯಿಂದ ಅನ್ನದಾನ ನೆರವೇರಿತು.