ಮಡಿಕೇರಿ, ಜ. 1: ತಲಕಾವೇರಿ ಕ್ಷೇತ್ರದಲ್ಲಿ ಅಗಸ್ತ್ಯೇಶ್ವರ ಲಿಂಗ ವಿವಾದ ಕುರಿತು, ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯಿಂದ ಮೂರನೆಯ ದೈವಜ್ಞರಿಂದ ಅಷ್ಟಮಂಗಲ ಪ್ರಶ್ನೆ ಕುರಿತು ವಿಮರ್ಶೆ ನಡೆದರೆ ಮಾತ್ರ, ಕೊಡವ - ಅಮ್ಮಕೊಡವ ಹಿತರಕ್ಷಣಾ ಸಮಿತಿಯು ಸಹಕಾರ ನೀಡುವದಾಗಿ ಅಧ್ಯಕ್ಷ ಎಂ.ಬಿ. ದೇವಯ್ಯ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇರಳದ ನಾರಾಯಣ ಪೊದುವಾಳ್ ಹಾಗೂ ವಿಷ್ಣು ಪ್ರಸಾದ್ ಹೆಬ್ಬಾರ್ ಹೊರತಾಗಿ ಪ್ರಶ್ನೆ ವಿಮರ್ಶೆ ನಡೆಸುವಂತೆ ಆಗ್ರಹಿಸಿದ್ದಾರೆ.

ಪ್ರಸಕ್ತ ಅಷ್ಟಮಂಗಲ ನಡೆಸಿರುವ ನಾರಾಯಣ ಪೊದುವಾಳ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರ ಒತ್ತಡಕ್ಕೆ ಮಣಿದಿರುವದು ಸೇರಿದಂತೆ ಭಕ್ತರ ಭಾವನೆಗೆ ವ್ಯತಿರಿಕ್ತ ನಿಲುವು ತಳೆದಿರುವದು ಬೇಸರ ಉಂಟುಮಾಡಿದೆ ಎಂದು ಮಾರ್ನುಡಿದಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಕೊಡಗಿನ ಜನತೆಯ ಭಾವನೆ ಗೌರವಿಸುವಂತೆ ಹಾಗೂ ಅಗಸ್ತ್ಯೇಶ್ವರ ಲಿಂಗವನ್ನು ಸಮುದ್ರದಲ್ಲಿ ವಿಸರ್ಜಿಸಲು ಅವಕಾಶ ಕಲ್ಪಿಸದೆ ಲೋಕ ಹಿತ ಕಾಪಾಡಲು ಮುಂದಾಗುವಂತೆ ಒತ್ತಾಯಿಸಲಾಗು ವದು ಎಂದು ತಿಳಿಸಿದ್ದಾರೆ.

ಸ್ಪಷ್ಟೀಕರಣ: ತಾ. 26 ರಂದು ತಲಕಾವೇರಿಯಲ್ಲಿ ವಿಮರ್ಶೆ ಸಂದರ್ಭ, ತಾವು ತಂತ್ರಿಗಳೊಂದಿಗೆ ಗೊಂದಲದ ಕುರಿತು ಪ್ರಶ್ನಿಸುತ್ತಿದ್ದಾಗ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಹಾಗೂ ಮಣವಟ್ಟಿರ ದೊರೆ ಗಣಪತಿ ಆಕ್ಷೇಪಿಸಿದ್ದರಿಂದ ಮಾತಿನ ಘರ್ಷಣೆಗೆ ಅವಕಾಶವಾಗಿದ್ದು, ಬೇರೆ ಯಾವದೇ ಕಾರಣ ಇರಲಿಲ್ಲವೆಂದು ದೇವಯ್ಯ ಸ್ಪಷ್ಟೀಕರಣ ನೀಡಿದ್ದಾರೆ.