ಮಡಿಕೇರಿ, ಜ. 1: ರಾಷ್ಟ್ರವ್ಯಾಪಿ ವಿವಿಧ ಕಾರ್ಮಿಕ ಸಂಘಟನೆಗಳ ಮೂಲಕ ತಾ. 8 ಮತ್ತು 9 ರಂದು ಕಾರ್ಮಿಕರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಯಲಿದ್ದು, ಇದರ ಭಾಗವಾಗಿ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ಶ್ರೇಣಿ ನಿಗದಿ ಪಡಿಸುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ 48 ಗಂಟೆಗÀಳ ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ಸ್ಪಂದಿಸಿ, ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮುಷ್ಕರ ನಡೆಯಲಿದೆ.

ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ತಾ. 8 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ, ವೀರಾಜಪೇಟೆಯ ಮಾರಿಯಮ್ಮ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ, ಸೋಮವಾರಪೇಟೆಯ ಕಾವೇರಿ ವೃತ್ತದಿಂದ ಜೆಸಿ ವೇದಿಕೆಯವರೆಗೆ ಪ್ರತಿಭಟನಾ ಜಾಥಾ ಆಯೋಜಿತವಾಗಿದೆ. ಆ.9 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಜಾಥ ನಡೆಯಲಿದ್ದು, ಈ ಎಲ್ಲಾ ಪ್ರತಿಭಟನೆಯಲ್ಲಿ ಜಿಲ್ಲಾ ವ್ಯಾಪ್ತಿಯ 700 ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿ ನೌಕರರು ತಮ್ಮ ಕರ್ತವ್ಯವನ್ನು ಬಹಿಷ್ಕರಿಸಿ ಪಾಲ್ಗೊಳ್ಳಲಿದ್ದಾರೆಂದು ಸ್ಪಷ್ಟಪಡಿಸಿದರು.

ಪ್ರಸ್ತುತ ದಿನಗಳಲ್ಲಿ ದೈನಂದಿನ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ ಗ್ರಾಮ ಪಂಚಾಯಿತಿ ನೌಕರರ ವೇತನ ಅತ್ಯಂತ ಕಡಿಮೆಯಾಗಿದೆ. ಸರ್ವೋಚ್ಚ ನ್ಯಾಯಾಲಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರಿಗೂ ಕನಿಷ್ಟ 18 ಸಾವಿರ ವೇತನ ನೀಡಬೇಕೆಂದು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ 2 ವರ್ಷ ಕಳೆದಿದೆ. ಇಲ್ಲಿಯವರೆಗೂ ಇದು ಅನುಷ್ಠಾನಗೊಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಪಂಚಾಯತ್ ರಾಜ್ ಸಂಸ್ಥೆಗಳಿಗೆ 1994-95ನೇ ಸಾಲಿನಲ್ಲಿ ಶೇ. 44.71 ಅನುದಾನವನ್ನು ಒದಗಿಸುತಿತ್ತು. ಪ್ರಸ್ತುತ ಈ ಪ್ರಮಾಣ ಶೇ. 4.87 ಕ್ಕೆ ಇಳಿದಿರುವದರಿಂದ ಗ್ರಾಮ ಪಂಚಾಯಿತಿಗಳಲ್ಲಿ ನೌಕರರಿಗೆ ಸಮರ್ಪಕವಾಗಿ ವೇತನ ಪಾವತಿ ಮಾಡುವದು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರಪುರ ಗ್ರಾಪಂನಲ್ಲಿ ಕಳೆದ 8 ತಿಂಗಳಿನಿಂದ, ಪೊನ್ನಪ್ಪಸಂತೆ ಗ್ರಾಪಂನಲ್ಲಿ ಕಳೆದ ಮೇ ತಿಂಗಳಿನಿಂದ, ನಿಟ್ಟೂರು ಗ್ರಾಪಂನಲ್ಲಿ ಕಳೆದ 9 ತಿಂಗಳಿನಿಂದ ಅಲ್ಲಿನ ನೌಕರರಿಗೆ ವೇತನ ಪಾವತಿಯಾಗಿಲ್ಲವೆಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಎಲ್ಲಾ ಸಮಸ್ಯೆಗಳ ನಡುವೆಯೇ ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನಗಳಿಗೆ ಮುಂದಾಗುವ ಮೂಲಕ ಬಂಡವಾಳಶಾಹಿಗಳನ್ನು ಮೆಚ್ಚಿಸುವ ಪ್ರಯತ್ನಕ್ಕೆ ಮುಂದಾಗುತ್ತಿದೆಯೆಂದು ಆರೋಪಿಸಿದರಲ್ಲದೆ, ಬಾಲಕಾರ್ಮಿಕರ ವಯೋಮಿತಿಯನ್ನು 14 ವರ್ಷಗಳಿಂದ 10 ವರ್ಷಕ್ಕೆ ಇಳಿಸುವ ಪ್ರಯತ್ನವೂ ನಡೆದಿದೆಯೆಂದು ಕಳವಳ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ. ಉಮೇಶ್, ವೀರಾಜಪೇಟೆ ತಾಲೂಕು ಉಪ ಕಾರ್ಯದರ್ಶಿ ಎಂ.ಕೆ. ಹರೀಶ್ ಉಪಸ್ಥಿತರಿದ್ದರು.

ಸಂಘದಿಂದ ಬೆಂಬಲ

ಮಧ್ಯವರ್ತಿ ಗುತ್ತಿಗೆದಾರರ ಮೂಲಕ ವೇತನ ಪಾವತಿಯ ಕ್ರಮವನ್ನು ಕೈಬಿಟ್ಟು ನೇರ ಸರ್ಕಾರದಿಂದಲೇ ವೇತನ ಪಾವತಿಸಬೇಕೆನ್ನುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾ. 8 ಮತ್ತು 9 ರಂದು ನಡೆಯಲಿರುವ ಕಾರ್ಮಿಕರ ಸಾರ್ವತ್ರಿಕ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿ ಅದರಲ್ಲಿ ಪಾಲ್ಗೊಳ್ಳಲಿರುವದಾಗಿ ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳ ಸಂಘ (ಸಿಐಯುಟಿ ಸಂಯೋಜಿತ) ತಿಳಿಸಿದೆ.

ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಮಡಿಕೇರಿಯ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿನ ಗುತ್ತಿಗೆದಾರರ ಮೂಲಕ ನಿಯುಕ್ತಿಗೊಂಡಿರುವ ಹೊರ ಗುತ್ತಿಗೆ ಸ್ವಚ್ಛತಾ ಸಿಬ್ಬಂದಿಗಳಿಗೆ ನಿಯಮಿತವಾಗಿ ವೇತನ ಪಾವತಿಯಾಗುತ್ತಿಲ್ಲ ಮತ್ತು ಗುತ್ತಿಗೆದಾರರು ಕಾರ್ಮಿಕರ ಪಿಎಫ್ ಹಣವನ್ನು ನಿಯಮ ಬದ್ಧವಾಗಿ ಕಟ್ಟದೆ, ಕಳೆದ ಹಲವಾರು ವರ್ಷಗಳಿಂದ ಕಾರ್ಮಿಕರನ್ನು ವಂಚಿಸುತ್ತಿರುವದಾಗಿ ಆರೋಪಿಸಿದರು.

ಗುತ್ತಿಗೆ ಸ್ವಚ್ಛತಾ ಸಿಬ್ಬಂದಿಗಳಿಗೆ ವೇತನ ಪಾವತಿ ಮತ್ತು ಪಿಎಫ್‍ನಲ್ಲಿ ಆಗುತ್ತಿರುವ ವಂಚನೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಲಕ್ಷಾಂತರ ಮೊತ್ತದ ದೊಡ್ಡ ದಂಧೆಯೇ ಆಗಿದೆಯೆಂದು ಟೀಕಿಸಿದ ಪಿ.ಆರ್. ಭರತ್, ಸ್ವಚ್ಛ ಭಾರತ್ ಅಭಿಯಾನಕ್ಕೆ ಕೋಟ್ಯಂತರ ಹಣವನ್ನು ಒಂದೆಡೆ ವ್ಯಯಿಸಲಾಗುತ್ತಿದ್ದರೆ, ಅದೇ ಮತ್ತೊಂದೆಡೆ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವ ಸ್ವಚ್ಛತಾ ಸಿಬ್ಬಂದಿಗಳಿಗೆ ಸಮರ್ಪಕವಾದ ವೇತನವನ್ನು ನೀಡದೆ ವಂಚಿಸಲಾಗುತ್ತಿದೆಯೆಂದು ತೀಕ್ಷ್ಣವಾಗಿ ನುಡಿದು, ಈ ಹಿಂದಿನಿಂದಲೂ ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರನ್ನು ಸಲ್ಲಿಸಿ, ಕಾರ್ಮಿಕ ಸಂಘಟನೆಗಳು ಮತ್ತು ಗುತ್ತಿಗೆದಾರರನ್ನು ಕರೆದು ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಕೋರಲಾಗುತ್ತಿದೆಯಾದರೂ ಯಾವದೇ ಪ್ರಯೋಜನವಾಗಿಲ್ಲವೆಂದು ಆರೋಪಿಸಿದರು.

ಪ್ರಸ್ತುತ ಸ್ವಚ್ಛತಾ ಸಿಬ್ಬಂದಿಗಳ ವೇತನದಿಂದ ಗುತ್ತಿಗೆದಾರರು 400 ರೂ.ಗಳನ್ನು ಇಎಸ್‍ಐಗೆಂದು ಕಡಿತ ಮಾಡುತ್ತಿದ್ದಾರೆ. ಆದರೆ, ಈ ಸೌಲಭ್ಯದಡಿ ಚಿಕಿತ್ಸೆ ಪಡೆಯಬಹುದಾದ ಆಸ್ಪತ್ರೆಯನ್ನು ಸೂಚಿಸುತ್ತಿಲ್ಲವೆಂದು ಆರೋಪಿಸಿದ ಭರತ್, ಸ್ವಚ್ಛತಾ ಕಾರ್ಮಿಕರಿಗೆ ಎರಡು ಜೊತೆ ಸಮವಸ್ತ್ರಗಳನ್ನು ನೀಡುವ ಹಂತದಲ್ಲಿ ಒಂದಕ್ಕೆರಡರಷ್ಟು ಹಣವನ್ನು ಗುತ್ತಿಗೆದಾರರು ಸಂಗ್ರಹಿಸುವ ದಂಧೆ ನಡೆಸುತ್ತಿರುವದಾಗಿ ನುಡಿದರು. ಗೋಷ್ಠಿಯಲ್ಲಿ ಸಂಘÀದ ಜಿಲ್ಲಾ ಕಾರ್ಯದರ್ಶಿ ಹೆಚ್. ಜಾನಕಿ, ಜಿಲ್ಲಾ ಉಪಾಧ್ಯಕ್ಷರಾದ ಶಾರದ, ಸದಸ್ಯರಾದ ಬಿಎಸ್. ಮಂಜುಳಾ, ಹರಿ ಪ್ರಸಾದ್ ಉಪಸ್ಥಿತರಿದ್ದರು.