ಕುಶಾಲನಗರ, ಜ. 1: ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಕುಶಾಲನಗರ ಒಕ್ಕಲಿಗ ಯುವ ವೇದಿಕೆ ವತಿಯಿಂದ ಸಮುದಾಯ ಬಾಂಧವರಿಗೆ ಕ್ರೀಡಾಕೂಟ ನಡೆಯಿತು.

ಕುಶಾಲನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ತೊರೆನೂರು ರೈತ ಸಹಕಾರ ಸಂಘದ ಅಧ್ಯಕ್ಷ ಕೆ. ಎಸ್. ಕೃಷ್ಣೇಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕಳೆದ ಐವತ್ತು ವರ್ಷಗಳ ಹಿಂದೆ ಒಕ್ಕಲಿಗರು ಎಂದರೆ ಯಾರೆಂದು ಪ್ರಶ್ನಿಸುವ ಕಾಲವೊಂದಿತ್ತು. ಒಕ್ಕಲಿಗರು ಸಂಘಟನೆ ಇಲ್ಲದೇ ಹರಿದು ಹಂಚಿ ಹೋದಾಗ ಆದಿಚುಂಚನಗಿರಿಯ ಅಂದಿನ ಪೀಠಾಧಿಪತಿ ಲಿಂಗೈಕ್ಯ ಶ್ರೀ ಬಾಲಗಂಗಾಧರನಾಥ ಶ್ರೀಗಳ ಕೃಪೆಯಿಂದ ಒಕ್ಕಲಿಗರ ಸಮಾಜ ಉದಯಿಸಿತು. ಇಂದಿನ ಸ್ವಾಮೀಜಿ ಶ್ರೀ ನಿರ್ಮಲಾನಂದ ಶ್ರೀಗಳು ಒಕ್ಕಲಿಗರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದು ಸಮಾಜ ಬಲಿಷ್ಠವಾಗುತ್ತಿದೆ. ಎಲ್ಲರೂ ಇನ್ನಷ್ಟು ಒಗ್ಗೂಡಬೇಕಿದೆ ಎಂದು ಹೇಳಿದರು. ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಮಾತನಾಡಿದರು.

ಕುಶಾಲನಗರ ಪಟ್ಟಣ ಪಂಚಾಯತಿ ಸದಸ್ಯೆ ಶೈಲಾ ಕೃಷ್ಣಪ್ಪ, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಒಕ್ಕಲಿಗ ಸಮಾಜದ ಜಿಲ್ಲಾ ನಿರ್ದೇಶಕ ಭುವನೇಂದ್ರ, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಮಾದಪ್ಪ ಮೊದಲಾದವರಿದ್ದರು.

ಬಳಿಕ ನಡೆದ ವಾಲಿಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಮಹಿಳೆಯರು, ಮಕ್ಕಳು, ಸಾಮೂಹಿಕವಾಗಿ ಪಾಲ್ಗೊಂಡರು. ಕ್ರೀಡಾಕೂಟದ ವಿಜೇತರಿಗೆ ಜ.5 ರಂದು ನಡೆವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವದು.