ಜನವರಿ : ಮೇವು ಹಗರಣದಲ್ಲಿ ಆರ್.ಜೆ.ಡಿ. ಮುಖ್ಯಸ್ಥ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್‍ಗೆ ರಾಂಚಿಯ ಸಿ.ಬಿ.ಐ. ವಿಶೇಷ ನ್ಯಾಯಾಲಯದಿಂದ ಜೈಲು ಶಿಕ್ಷೆ ಹಾಗೂ ರೂ. 10 ಲಕ್ಷ ದಂಡ ವಿಧಿಸುವ ತೀರ್ಪು ಪ್ರಕಟಣೆ.

ವೈದ್ಯಕೀಯ ಆಯೋಗ ಸ್ಥಾಪಿಸುವ ಕೇಂದ್ರ ಸರಕಾರದ ನಿರ್ಧಾರ ವಿರೋಧಿಸಿ ದೇಶಾದ್ಯಂತ ವೈದ್ಯರುಗಳ ಮುಷ್ಕರ.

ಫೆಬ್ರವರಿ 1 ರಿಂದ ಕರ್ನಾಟಕದಲ್ಲಿ ಐ.ಎಸ್.ಐ. ಹೆಲ್ಮೆಟ್ ಕಡ್ಡಾಯ ಅಳವಡಿಸಲು ದ್ವಿಚಕ್ರ ವಾಹನ ಸವಾರರಿಗೆ ನಿರ್ದೇಶನ.

ಅರುಣಾಚಲ ಪ್ರದೇಶಕ್ಕೆ ಚೀನಾ ಸೈನಿಕರ ಅಕ್ರಮ ಪ್ರವೇಶ ಉದ್ವಿಗ್ನ ಪರಿಸ್ಥಿತಿ. ಭಾರತೀಯ ಸೇನೆಯಿಂದ ಕಾರ್ಯಾಚರಣೆ.

ಬಿ.ಎಸ್.ಎಫ್. ಯೋಧ ಹಾಜರ ಅವರನ್ನು ಗುಂಡಿಟ್ಟು ಹತ್ಯೆಗೈದ ಪಾಕ್ ಕ್ರೌರ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯಿಂದ ಪಾಕಿಸ್ತಾನದ ಹತ್ತು ಮಂದಿ ಸೈನಿಕರ ಹತ್ಯೆ.

ಪಂಜಾಬ್ ಮತ್ತು ರಾಜಸ್ತಾನ ಗಡಿ ಭಾಗದಲ್ಲಿ ಚೀನಾ ನೆರವಿನಿಂದ ಪಾಕಿಸ್ತಾನದಿಂದ ಬಂಕರ್‍ಗಳ ನಿರ್ಮಾಣ. ಇದಕ್ಕೆ ಪ್ರತಿಯಾಗಿ ಭಾರತದಿಂದ 14 ಸಾವಿರ ಬಂಕರ್‍ಗಳ ನಿರ್ಮಾಣ ಯೋಜನೆ.

ಕೇರಳದಾದ್ಯಂತ ಐ.ಸಿ.ಎಸ್. ಉಗ್ರ ಸಂಘಟನೆಯಿಂದ ಅನ್ಯ ಧರ್ಮದ ಯುವತಿಯರನ್ನು ಮತಾಂತರಗೊಳಿಸಿ ಮಾರಾಟ ಮಾಡುತ್ತಿದ್ದ ದಂಧೆ ಪತ್ತೆ. ಹಲವು ಆರೋಪಿಗಳ ಬಂಧನ.

ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ವಿರುದ್ಧ ನಾಲ್ವರು ಇತರ ನ್ಯಾಯಮೂರ್ತಿ ಗಳಿಂದ ಬಂಡಾಯ. ಹಲವು ಕಾಲದ ಸಂದಿಗ್ಧತೆ ಬಳಿಕ ಉಪಶಮನ.

ಮ್ಯಾಕ್ಸಿಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸುಳಿಗೆ ಸಿಲುಕಿದ ಕಾಂಗ್ರೆಸ್ ನಾಯಕ ಪಿ. ಚಿದಂಬರ್ ಹಾಗೂ ಪುತ್ರ ಕಾರ್ತಿಗೆ ಸಂಬಂಧಿಸಿದಂತೆ ಹತ್ತು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿ ಗಳಿಂದ ಧಾಳಿ.

ಜಮ್ಮು-ಕಾಶ್ಮೀರ ಗಡಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಪಾಕಿಸ್ತಾನದ ಏಳು ಸೈನಿಕರು ಭಾರತದ ಪ್ರತೀಕಾರಕ್ಕೆ ಬಲಿ.

ಕೇಂದ್ರದಿಂದ ನೂತನ ಜಿ.ಎಸ್.ಟಿ. ತೆರಿಗೆಯ ಭಾರ ಹಗುರಗೊಳಿಸಲು 29 ವಸ್ತು, 53 ಸೇವೆಗಳ ತೆರಿಗೆ ಕಡಿತ.

ಕಾಂಗ್ರೆಸ್ ನಾಯಕರುಗಳಾದ ಸೋನಿಯ ಹಾಗೂ ರಾಹುಲ್ ಗಾಂಧಿಗೆ ನ್ಯಾಷನಲ್ ಹೆರಾಲ್ಡ್ ಸಮಸ್ಯೆಗೆ ಸಂಬಂಧಿಸಿದ ತೆರಿಗೆ ಪಾವತಿಯ ತಲೆನೋವು. ಆದಾಯ ತೆರಿಗೆ ಇಲಾಖೆಯಿಂದ ಕಾನೂನು ಕ್ರಮ.

ಲಾಭದ ಹುದ್ದೆಯ ಆರೋಪ ಹೊತ್ತಿದ್ದ ಆಮ್ ಆದ್‍ಮಿ ಪಕ್ಷದ 20 ಶಾಸಕರುಗಳನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗ.

ಗುಜರಾತ್ ಮತ್ತು ಬೆಂಗಳೂರಿನಲ್ಲಿ 2008 ರ ಸರಣಿ ಬಾಂಬ್ ಸ್ಫೋಟದ ಸಂಚುಕೋರ ಅಬ್ದುಲ್ ಸುಭಾನ್ ಖುರೇಷಿ ಬಂಧನ.

36 ವರ್ಷಗಳ ಬಳಿಕ ಭಾರತದಲ್ಲಿ ಅಪೂರ್ವ ಸಂಪೂರ್ಣ ಚಂದ್ರಗ್ರಹಣ ಗೋಚರ.

ಫೆಬ್ರವರಿ : ಕೇಂದ್ರ ಬಜೆಟ್‍ನಲ್ಲಿ 8 ಕೋಟಿ ಮಹಿಳೆಯರಿಗೆ ಉಚಿತ ಎಲ್.ಪಿ.ಜಿ., 10 ಕೋಟಿ ಕುಟುಂಬಗಳಿಗೆ ಉಚಿತ ವಿಮೆ, 4 ಕೋಟಿ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ರೈತರ ಬೆಳೆಗಳ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ-ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಣೆ.

ಪಾಕಿಸ್ತಾನಿ ಉಗ್ರರಿಂದ ಕಾಶ್ಮೀರ ಸೇವಾ ಶಿಬಿರದ ಮೇಲೆ ಧಾಳಿ. ಇಬ್ಬರು ಯೋಧರ ಹತ್ಯೆ. ಪ್ರತಿಧಾಳಿಗೆ ಮೂವರು ಉಗ್ರರ ಬಲಿ.

ಮುಂಬೈಯ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ ಸಾಲ ನೀಡಿಕೆ ದಂಧೆಯಲ್ಲಿ ರೂ. 11,360 ಕೋಟಿ ವಂಚನೆ. ಸಿ.ಬಿ.ಐ.ನಿಂದ ಕ್ರಮ.

ಮಾರ್ಚ್ : ಭಾರತದ ಜಿ.ಡಿ.ಪಿ. 3ನೇ ತ್ರೈಮಾಸಿಕದಲ್ಲಿ 7.2 ಕ್ಕೆ ಏರಿಕೆ. ಚೀನಾವನ್ನು ಹಿಂದಿಕ್ಕಿದ ಭಾರತ.

ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ದೈವಾಧೀನ.

ಛತ್ತೀಸ್‍ಘಡ, ತೆಲಂಗಾಣ ಗಡಿಯಲ್ಲಿ ಪೊಲೀಸ್ ಇಲಾಖೆಯಿಂದ 12 ನಕ್ಸಲರ ಹತ್ಯೆ. ಕಾರ್ಯಾಚರಣೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ಕಮಾಂಡೋ ಕರ್ನಾಟಕರ ಬಿ. ಸುಶೀಲ್ ಕುಮಾರ್ (33) ವೀರ ಮರಣ.

ತ್ರಿಪುರ, ನಾಗಾಲ್ಯಾಂಡ್‍ಗಳಲ್ಲಿ ಬಿ.ಜೆ.ಪಿ. ಸರಕಾರ ರಚನೆ. ಮೇಘಾಲಯದಲ್ಲಿ ಅತಂತ್ರ.

ಛತ್ತೀಸ್‍ಘಡದಲ್ಲಿ ಸಿ.ಆರ್.ಪಿ.ಎಫ್. ವಾಹನದ ಮೇಲೆ ಧಾಳಿ ನಡೆಸಿದ ನಕ್ಸಲರಿಂದ 9 ಯೋಧರ ಹತ್ಯೆ.

ಪುರಾತನ ಕಾಲದ ರಾಮ ಸೇತುವನ್ನು ರಕ್ಷಿಸಲಾಗುತ್ತದೆ. ಅದನ್ನು ಕೆಡಹುವ ಕಾರ್ಯ ನಡೆಯುವದಿಲ್ಲ ಎಂದು ಕೇಂದ್ರ ಸರಕಾರದಿಂದ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಕೆ.

ಇಸ್ರೋದಿಂದಶ್ರೀಹರಿ ಕೋಟಾದಲ್ಲಿ ಜಿ-ಸ್ಯಾಟ್6 ಎ ಯಶಸ್ವಿ ಉಡಾವಣೆ.

ಏಪ್ರಿಲ್: ದಕ್ಷಿಣ ಕಾಶ್ಮೀರದಲ್ಲಿ ಸೇವಾ ಪಡೆಯ ಕಾರ್ಯಾಚರಣೆ ಯಲ್ಲಿ ಉಗ್ರ ಪಡೆಯ ಇಬ್ಬರು ಕಮಾಂಡರ್ ಸೇರಿ 12 ಮಂದಿಯನ್ನು ಹತ್ಯೆ ಮಾಡಲಾಯಿತು.

ಸುಪ್ರೀಂಕೋರ್ಟ್ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯಿದೆ ಸಂಬಂಧ ತೀರ್ಪಿನ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ದೇಶದ 7 ರಾಜ್ಯಗಳಲ್ಲಿ ಹಿಂಸಾಚಾರ ನಡೆದು 9 ಮಂದಿ ಮೃತಪಟ್ಟು ನೂರಕ್ಕೂ ಅಧಿಕ ಮಂದಿ ಗಾಯಗೊಂಡರು.

ಕೃಷ್ಣಮೃಗ ಬೇಟೆ ಪ್ರಕರಣ. ಖ್ಯಾತ ನಟ ಆರೋಪಿ ಸಲ್ಮಾನ್‍ಗೆ ಜೋದ್‍ಪುರ ನ್ಯಾಯಾಲಯದಿಂದ 5 ವರ್ಷ ಶಿಕ್ಷೆ.

ಪುಣೆಯ ಖಂಡಾಲ ಘಾಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅವಘಡದಲ್ಲಿ 21 ಮಂದಿಯ ಸಾವು.

ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾಗೆ ಮರಣೋತ್ತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ.

ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ 2007 ರ ಮೇ 18 ರಂದು ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ವಾಮಿ ಅಸೀಮಾನಂದ ಸೇರಿ ಐವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಆರೋಪ ಮುಕ್ತ್ತಗೊಳಿಸಿತು.

ಮಹಾರಾಷ್ಟ್ರದ ಗಢ್ ಬೆರೋಲಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 16 ನಕ್ಸಲರು ಹತರಾಗಿದ್ದು, ಇಬ್ಬರು ವಿಭಾಗೀಯ ಕಮಾಂಡರ್‍ಗಳು ಸಾವಿಗೀಡಾದರು.

12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ, ಆರ್ಥಿಕ ವಂಚನೆ ಎಸಗಿ ವಿದೇಶಕ್ಕೆ ಪಲಾಯನ ಮಾಡುವ ಘೋಷಿತ ಅಪರಾಧಿಗಳ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳಲು ಅವಕಾಶ ವಿರುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅಂಕಿತ ಹಾಕಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ವಿರುದ್ಧ ಕಾಂಗ್ರೆಸ್ ನಾಯಕರುಗಳು ಸಲ್ಲಿಸಿದ್ದ ಮಹಾಭಿಯೋಗ ನೋಟಿಸನ್ನು ರಾಜ್ಯ ಸಭೆಯ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ತಿರಸ್ಕರಿಸಿದರು.

ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸ್ವ ಘೋಷಿತ ದೇವಮಾನವ ಆಸಾರಾಮ್ ಬಾಬಾ ದೋಷಿ ಎಂದು ಜೋದ್‍ಪುರ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. ಅಪರಾಧಿ ಆಸಾರಾಮ್ ಮತ್ತು ಇನ್ನಿಬ್ಬರು ಸಹಚರರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತು.

ಮೇ : ಕಾಶ್ಮೀರದ ಶೋಫಿಯಾನ ಬದ್ಗಾಮ್‍ನಲ್ಲಿ ಭಾರತೀಯ ಸೇನೆ ಐವರು ಉಗ್ರರನ್ನು ಬೇಟೆಯಾಡಿತು.

ಐ.ಪಿ.ಎಲ್. ಟಿ-20 ಕ್ರಿಕೆಟ್ ಪಂದ್ಯಾಟದಲ್ಲಿ ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 3ನೇ ಬಾರಿಗೆ ಪ್ರಶಸ್ತಿ ಗಳಿಸಿತು.

ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದುನಾಮಗೌಡ (69) ರಸ್ತೆ ಅವಘಡದಲ್ಲಿ ಸಾವಿಗೀಡಾದರು.

ದಕ್ಷಿಣ ಕರಾವಳಿಯಲ್ಲಿ ಮುಂಗಾರು ಆರ್ಭಟ. ಮಂಗಳೂರು ಜಲಾವೃತ, ಉಡುಪಿಯಲ್ಲಿ ಸಮುದ್ರ ಭೋರ್ಗರೆತ, ಮೂವರ ಸಾವು, ಕೊಚ್ಚಿಹೋದ ಬಾಲಕಿ.

ಜೂನ್ : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್.ಎಸ್.ಎಸ್. ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿ.

ಮೊಬೈಲ್ ಸಿಮ್ ಖರೀದಿಯ ಮೇಲೆ ಗುರುತಿನ ದಾಖಲೆಯಾಗಿ ಗ್ರಾಹಕರು ಆಧಾರ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ಮಾಹಿತಿ ನೀಡುವದು ಕಡ್ಡಾಯವಿಲ್ಲ ಎಂದು ಕೇಂದ್ರ ದೂರ ಸಂಪರ್ಕ ವಿಭಾಗ ಎಲ್ಲಾ ಟೆಲಿಕಾಮ್ ಕಂಪೆನಿಗಳಿಗೆ ಸೂಚನೆ ನೀಡಿತು.

ಭಾರತದ ಸಾಂಬಾ ಸೆಕ್ಟರ್ ವಲಯದಲ್ಲಿ ಪಾಕಿಸ್ತಾನದ ಧಾಳಿಯಿಂದಾಗಿ ನಾಲ್ವರು ಭಾರತೀಯ ಯೋಧರು ಹತರಾದರು.

ಕಾಶ್ಮೀರದಲ್ಲಿ ಪಿ.ಡಿ.ಪಿ.ಯೊಂದಿಗೆ ಮುರಿದು ಬಿದ್ದ ಬಿ.ಜೆ.ಪಿ. ಮೈತ್ರಿ. ಮೈತ್ರಿ ಸರಕಾರದ ಪಥನ. ಮುಖ್ಯಮಂತ್ರಿ ಮೆಹಬೂಬ್‍ಮುಫ್ತಿ ರಾಜೀನಾಮೆ.

ಡಾಲರ್ ಎದುರು ರೂಪಾಯಿ ಮೌಲ್ಯದ ಬೃಹತ್ ಕುಸಿತ ಭಾರತಕ್ಕೆ ಆರ್ಥಿಕ ಆಗಾಧ.

-ಐದನೇ ಪುಟಕ್ಕೆ