ಜನವರಿ : ರಾಜ್ಯದ 8 ಜಿಲ್ಲೆಗಳಲ್ಲಿ ಧಾಳಿ ನಡೆಸಿದ ಎ.ಸಿ.ಬಿ. 12 ಮಂದಿ ಸರಕಾರಿ ಅಧಿಕಾರಿಗಳಿಂದ ಕೋಟ್ಯಾಂತರ ಮೌಲ್ಯದ ಆಸ್ತಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿತು.

ಕರಾವಳಿ ಪ್ರದೇಶದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹಾಗೂ ಮುಸ್ಲಿಂ ಪ್ರಮುಖ ಬಷೀರ್ ಹತ್ಯೆಯಿಂದ ಮತೀಯ ವಿಕೋಪ ಸ್ಥಿತಿ.

ಬೆಂಗಳೂರಿನಲ್ಲಿ ಮ್ಯಾನ್‍ಹೋಲ್ ಸ್ವಚ್ಛತೆ ಸಂದರ್ಭ ಮೂವರು ಕಾರ್ಮಿಕರ ಸಾವು.

ಬೆಂಗಳೂರಿನ ಕೈಲಾಸ್ ಬಾರ್‍ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಐವರು ಸಜೀವ ದಹನ.

ರಾಜ್ಯ ಸರಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ರೂ. 20 ಲಕ್ಷದ ವಿಮಾ ಯೋಜನೆ ಘೋಷಣೆ.

ಹಾಸನದ ಕಾರೆಕೆರೆ ಕೃಷಿ ಕಾಲೇಜು ಸಮೀಪ ಬಸ್ ಉರುಳಿ ಬೆಳ್ತಂಗಡಿಯ ನಾಲ್ವರ ದುರ್ಮರಣ.

ಸಿದ್ದರಾಮಯ್ಯ ಸರಕಾರದಿಂದ ಪ್ರಥಮ ಬಾರಿಗೆ ಕರ್ನಾಟಕದ ನಾಡ ಧ್ವಜ ಬಿಡುಗಡೆ. ಆದರೆ ಬಳಿಕ ಕೇಂದ್ರದಿಂದ ಪ್ರತ್ಯೇಕ ಧ್ವಜ ಬಳಕೆಗೆ ಅಸಮ್ಮತಿ.

ಪಲಿಮಾರು ಶ್ರೀಗಳಿಂದ ಉಡುಪಿ ಪರ್ಯಾಯ ಪೀಠಾರೋಹಣ.

ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ಕೋಮು ಗಲಭೆಗೆ ಸಂಬಂಧಿತ ಕ್ರೈಂ ಪ್ರಕರಣಗಳ ಪೈಕಿ ಅಲ್ಪಸಂಖ್ಯಾತರ ವಿರುದ್ಧ ಹೂಡಿದ್ದ ಮೊಕದ್ದಮೆಗಳನ್ನು ಸಿದ್ದರಾಮಯ್ಯ ಸರಕಾರ ಹಿಂಪಡೆಯಿತು. ಬಳಿಕ ಇದರ ವಿರುದ್ಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತಗೊಂಡಾಗ ಎಲ್ಲಾ ಕೋಮಿನ ಜನರ ವಿರುದ್ಧ ಮೊಕದ್ದಮೆಗಳನ್ನು ಹಿಂಪಡೆಯಿತು.

ರಾಜ್ಯದಲ್ಲಿ ಪ್ರತಿ ಯೂನಿಟ್‍ಗೆ 38 ಪೈಸೆಯಿಂದ ರೂ. 1.10 ಕ್ಕೆ ವಿದ್ಯುತ್ ದರ ಏರಿಕೆ.

ಹಿಂದೂ ಮಠ ಮಂದಿರಗಳನ್ನು ಸಿದ್ದರಾಮಯ್ಯ ಸರಕಾರ ಸರಕಾರಿ ಅಧೀನಕ್ಕೆ ತೆಗೆದುಕೊಳ್ಳುವ ಪ್ರಯತ್ನ ಬಹಿರಂಗಗೊಂಡು ಭಾರೀ ವಿರೋಧ. ಈ ಕುರಿತಾದ ಸುತ್ತೋಲೆ ಹಿಂಪಡೆದ ಸರಕಾರ.

ಫೆಬ್ರವರಿ : ಬೆಂಗಳೂರಿನ ಜಯರಾಮ ರೆಡ್ಡಿ ಲೇಔಟ್‍ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು ಮೂವರು ಕಾರ್ಮಿಕರ ಸಾವು.

ಶ್ರವಣಬೆಳಗೊಳದಲ್ಲಿ ಬಾಹುಬಲಿಗೆ 88ನೇ ಮಹಾ ಮಸ್ತಾಕಾಭಿಷೇಕ.

ರಾಜ್ಯದ ಹೋಬಳಿಗೊಂದು ಸರಕಾರಿ ಪಿ.ಯು. ಕಾಲೇಜು ತೆರೆಯಲು ಸಿದ್ದರಾಮಯ್ಯ ಸರಕಾರ ನಿರ್ಧಾರ. ರಾಜ್ಯದಲ್ಲಿ ಒಂದು ಸಾವಿರ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ಆಗಿನ ಶಿಕ್ಷಣ ಸಚಿವ ತನ್ವೀರ್ ಸೇಟ್ ಪ್ರಕಟಣೆ.

ಬಜೆಟ್‍ನಲ್ಲಿ ಕೃಷಿಗೆ ರೂ. 5080 ಕೋಟಿ ಸಣ್ಣ ನೀರಾವರಿಗೆ ರೂ. 2020 ಕೋಟಿ ಪ್ರಕಟಿಸಿದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ. ಉಚಿತ ಬಸ್‍ಪಾಸ್ ಸೌಲಭ್ಯ, ವಿದ್ಯಾರ್ಥಿನಿಯರಿಗೆ ಶುಲ್ಕ ರಹಿತ ಶಿಕ್ಷಣ, ಸ್ತ್ರೀಯರಿಗೆ ಸಾಲ ಮಿತಿ ಹೆಚ್ಚಳದಂತಹ ಕೊಡುಗೆಗಳು ಬಜೆಟ್‍ನಲ್ಲಿ ಘೋಷಣೆ.

ಬೆಂಗಳೂರಿನ ಶಾಂತಿ ನಗರದ ಕ್ಷೇತ್ರದ ಶಾಸಕ ಎಂ.ಎ. ಹಾರಿಸ್ ರವರ ಪುತ್ರ ಮಹಮ್ಮದ್ ನಲಪಾಡ್‍ನಿಂದ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ-ಆರೋಪಿಯ ಬಂಧನ.

ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ (68) ನಿಧನ.

ಮಾರ್ಚ್ : ರಾಜ್ಯ ಸರಕಾರದಿಂದ ಆರನೇ ವೇತನ ಆಯೋಗದ ವರದಿ ಜಾರಿ. 50 ಸಾವಿರ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸರಕಾರದಿಂದಲೇ ವೇತನ ನೀಡಿಕೆ ಘೋಷಣೆ.

ಪರಪ್ಪನ ಅಗ್ರಹಾರದಲ್ಲಿ ಸೆರೆವಾಸದಲ್ಲಿರುವ ಎ.ಐ.ಎ.ಡಿ.ಎಂ.ಕೆ. ನಾಯಕಿ ಶಶಿಕಲಾಗೆ ರಾಜಾತೀಥ್ಯ. ಐ.ಪಿ.ಎಸ್. ಅಧಿಕಾರಿ ಡಿ. ರೂಪ ಅವರಿಂದ ಸರಕಾರಕ್ಕೆ ತನಿಖಾ ವರದಿ. ಆದರೆ ರೂಪ ಅವರನ್ನು ವರ್ಗಾಯಿಸಿದ ಸರಕಾರ.

ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಗುರು ದತ್ತಾತ್ರೇಯರ ಬಾಬಾ ಬುಡಾನ್‍ಗಿರಿ ದರ್ಗಾದ ನಿರ್ವಹಣೆ ಮುಜರಾಯಿ ಇಲಾಖೆಯ ಅಧೀನಕ್ಕೆ ನೀಡಲು ಸರಕಾರದ ಘೋಷಣೆ.

ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಸ್ಥಾನದಲ್ಲಿದ್ದ ವಿಶ್ವನಾಥ ಶೆಟ್ಟಿ ಅವರಿಗೆ ತುಮಕೂರಿನ ತೇಜ್‍ರಾಜ್ ಎಂಬಾತನಿಂದ ಚೂರಿ ಇರಿತ. ಆರೋಪಿ ಬಂಧನ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೆ.ಟಿ. ನವೀನ್‍ಕುಮಾರ್ ಆಲಿಯಾಸ್ ಹೊಟ್ಟೆ ಮಂಜ ಸೇರಿದಂತೆ ಪೊಲೀಸರಿಂದ ಅನೇಕ ಆರೋಪಿಗಳ ಬಂಧನ.

ರಾಜ್ಯದ 36 ಸ್ಥಳಗಳಲ್ಲಿ ಎ.ಸಿ.ಬಿ. ಕಾರ್ಯಾಚರಣೆ, 9 ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಹೆಚ್ಚಿಸಿ ವಿಶೇಷ ಸಭೆಯಲ್ಲಿ ನಿರ್ಣಯ.

ಏಪ್ರಿಲ್ : ರಾಜ್ಯದಲ್ಲಿ ಬೇಸಿಗೆ ಮಳೆಯ ಆರ್ಭಟಕ್ಕೆ ಭಾಗ್ಯಪಲ್ಲಿ ಗ್ರಾಮದ ಇಬ್ಬರು ಸಾವು.

ಕರ್ನಾಟಕ ಲೋಕಸೇವಾ ಆಯೋಗ 1998, 1999 ಮತ್ತು 2004 ರಲ್ಲಿ ಕೈಗೊಂಡ ನೇಮಕಾತಿಗಳನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು.

ಐಟಿ ಇಲಾಖೆ ಧಾಳಿಯಲ್ಲಿ ಮೈಸೂರಿನ ನಾಲ್ವರು ಗುತ್ತಿಗೆದಾರರ ರೂ. 6.76 ಕೋಟಿ ನಗದನ್ನು ಜಪ್ತಿ ಮಾಡಲಾಯಿತು.

ಮೇ : ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಪಾರ್ಟ್‍ಮೆಂಟ್ ಒಂದರಲ್ಲಿ 10 ಸಾವಿರ ಮತದಾರರ ಗುರುತಿನ ಚೀಟಿ ಪತ್ತೆಯಾದ ಹಿನ್ನೆಲೆ ಚುನಾವಣೆ ಮುಂದೂಟಲ್ಪಟ್ಟಿತ್ತು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವದೇ ಪಕ್ಷ ಬಹುಮತ ಪಡೆಯದೆ ಅತಂತ್ರ ಸ್ಥಿತಿ. 104 ಸ್ಥಾನಗಳಿಸಿದ ಬಿ.ಜೆ.ಪಿ. ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಕಾಂಗ್ರೆಸ್ 78, ಜೆ.ಡಿ.ಎಸ್. 38 ಹಾಗೂ ಇತರರಿಗೆ ಎರಡು ಸ್ಥಾನಗಳ ಫಲಿತಾಂಶ ದೊರಕಿತು.

ಅತೀ ದೊಡ್ಡ ಪಕ್ಷವಾಗಿ ಗೆದ್ದ ಬಿ.ಜೆ.ಪಿ. ರಾಜ್ಯಾದ್ಯಕ್ಷ ಬಿ. ಎನ್. ಯಡಿಯೂರಪ್ಪ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಹುಮತದ ಅಗ್ನಿ ಪರೀಕ್ಷೆಯಲ್ಲಿ ಸೋಲು ಅನುಭವಿಸಿದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ.

ಜೆ.ಡಿ.ಎಸ್. -ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ. ಮುಖ್ಯಮಂತ್ರಿಯಾಗಿ ಜೆ.ಡಿ.ಎಸ್.ನ ಕುಮಾರಸ್ವಾಮಿ ಆಯ್ಕೆ, ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‍ನ ಪರಮೇಶ್ವರ್ ಆಯ್ಕೆ.

ಜೂನ್ : ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ದಿಂದ ಸಾಲ ಮನ್ನಾ ಘೋಷಣೆ. ಆದರೆ ಸಾಲ ಮನ್ನಾ ಪಡೆಯಲು ವಿಧಿಸಿರುವ ವಿವಿಧ ಷರತ್ತುಗಳ ಕುರಿತು ವ್ಯಕ್ತಗೊಂಡ ಪ್ರತಿರೋಧ.

ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಹೋದರರಿಗೆ ತಟ್ಟಿದ ಸಿ.ಬಿ.ಐ. ಧಾಳಿ ಆಘಾತ.

ಸಮ್ಮಿಶ್ರ ಸರಕಾರದ ಹೊಂದಾಣಿಕೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ರಚನೆ.

ಅತಿವೃಷ್ಟಿಯಿಂದಾಗಿ ರಾಜ್ಯದ ಅನೇಕ ಕಡೆ 6 ಮಂದಿಯ ಸಾವು.

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ 25 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ.

ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರಕಾರಿ ನೌಕರರ ವೇತನವನ್ನು ಸರಕಾರ ಶೇ. 30 ರಷ್ಟು ಏರಿಕೆ ಮಾಡಿತು.

ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ಬಳಿಕ ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮರು ಬಜೆಟ್ ಮಂಡನೆಗೆ ಒಳ ವಿರೋಧದ ನಡುವೆ ಯಶಸ್ವಿ ಮಂಡನೆ.

ಜುಲೈ : ಕುಮಾರಸ್ವಾಮಿ ಅವರ ನೂತನ ಬಜೆಟ್‍ನಲ್ಲಿ ಹಿಂದೆ ಸಿದ್ದರಾಮಯ್ಯ ಮಂಡಿಸಿದ ಯೋಜನೆಗಳ ಮುಂದುವರಿಕೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಷರತ್ತಿನ ಸಾಲ ಮನ್ನಾ ಕುರಿತು ಬಜೆಟ್‍ನಲ್ಲಿ ಪ್ರಕಟಿಸಿದ ಬಳಿಕ ರಾಜ್ಯದಲ್ಲಿ ಮೂವರು ರೈತರು ಷರತ್ತಿನ ಬಗ್ಗೆ ಅಸಮಾಧಾನಗೊಂಡು ಪ್ರತ್ಯೇಕ ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಶರಣಾದರು.

ಅತಿವೃಷ್ಟಿಯಿಂದಾಗಿ ಏಪ್ರಿಲ್‍ನಿಂದ ಜೂನ್‍ವರೆಗೆ ರಾಜ್ಯದಲ್ಲಿ 126 ಮಂದಿ ಸಾವಿಗೀಡಾದರು.

ಉಡುಪಿಯ ಶಿರೂರು ಮಠದ ಯತಿ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು (55) ಸಂಶಯಸ್ಪಾದ ಸಾವಿಗೀಡಾದರು.

ಆಗಸ್ಟ್ : ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಅಲ್ಲಿನ ಮಠಾಧೀಶರು ಸೇರಿದಂತೆ ಸಾರ್ವಜನಿಕ ಮುಖಂಡರು, ಸಂಘ-ಸಂಸ್ಥೆಗಳಿಂದ ಹೋರಾಟ ಯತ್ನ. ಮುಖ್ಯಮಂತ್ರಿ ಪ್ರವೇಶದಿಂದ ತಿಳಿಗೊಂಡ ವಾತಾವರಣ.

ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ ಬಾಂಗ್ಲಾ ಮೂಲದ ಜೆ.ಎಂ.ಬಿ. ಉಗ್ರ ಮುನೀರ್ ಶೇಕ್ ರಾಮನಗರದಲ್ಲಿ ಸೆರೆಯಾದ.

ಮಹದಾಯಿ ನದಿ ನೀರಿನಲ್ಲಿ ಅಗತ್ಯವಾದ ಪಾಲನ್ನು ಕರ್ನಾಟಕಕ್ಕೂ ನೀಡಬೇಕೆಂದು ನ್ಯಾಯಮೂರ್ತಿ ಪಾಂಚಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಾಧೀಶರುಗಳಿಂದ ತೀರ್ಪು ಪ್ರಕಟ.

ಸೆಪ್ಟೆಂಬರ್ : ಕೋಲಾರದ ಮಾಲೂರು ತಾಲೂಕಿನಲ್ಲಿ ನಡೆದಿದ್ದ ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯವು ಐವರು ಆರೋಪಿಗಳಿಗೆ ಮರಣ ದಂಡನೆ ವಿಧಿಸಿತು.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ಪರಿವರ್ತಿಸಲು ಅವಕಾಶ ಕಲ್ಪಿಸಿದ ರಾಜ್ಯ ಸರಕಾರ.

ವಿಧಾನ ಪರಿಷತ್‍ನ 3 ಸ್ಥಾನಗಳಿಗೆ ಕಾಂಗ್ರೇಸ್‍ನ ಇಬ್ಬರು ಹಾಗೂ ಜೆ.ಡಿ.ಎಸ್. ಒಬ್ಬರು ಅವಿರೋಧ ಆಯ್ಕೆ.

ರಾಜ್ಯದಲ್ಲಿ ಭಾರೀ ಮಳೆ-ಸಿಡಿಲಿಗೆ 6 ಮಂದಿ ಬಲಿ.

ಅಕ್ಟೋಬರ್ : ದಸರ ಸಂಭ್ರಮದ ದಿನವೇ ಮೈಸೂರು ರಾಜಮನೆತನದ ಪ್ರಮೋದದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿಕ್ಕಮ್ಮಣ್ಣಿ (98) ಹಾಗೂ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರವರ ಹಿರಿಯ ಸಹೋದರಿ ವಿಶಾಲಾಕ್ಷಿ ದೇವಿ (56) ಸಾವಿಗೀಡಾದ ಸಂದರ್ಭ ಕಂಡು ಬಂದಿತು.

ಇಂಫಾಲ್‍ನಲ್ಲಿ ಉಗ್ರರು ಸೇನಾ ಟ್ರಕ್‍ಗಳ ಮೇಲೆ ಗ್ರೆನೇಟ್ ಎಸೆದಾಗ ಕರ್ನಾಟಕದ ಗೋಕಾಕ್ ಮೂಲದ ಉಮೇಶ್ ಎಂ. ಹೆಳವರ (26) ಅವರು ಆ ದಾಳಿಯನ್ನು ತಡೆದು 20 ಮಂದಿ ಸೈನಿಕರ ಪ್ರಾಣ ಉಳಿಸಿ ತಾವು ಹುತಾತ್ಮರಾದರು.

ರಾಜ್ಯದಲ್ಲಿ ಕೃಷಿಭೂಮಿ ಪ್ರಮಾಣ ಕುಗ್ಗುತ್ತಿರುವದನ್ನು ಪರಿಗಣಿಸಿ ರಾಜ್ಯ ಸರಕಾರವು ಬಗರ್‍ಹುಕ್‍ಂನಲ್ಲಿ ಮಂಜೂರಾದ ಜಮೀನುಗಳ ಮಾರಾಟಕ್ಕೆ ಇರುವ ಅವಧಿಯನ್ನು 15 ರಿಂದ 25 ವರ್ಷಕ್ಕೆ ಹೆಚ್ಚಿಸಿತು.

ನವೆಂಬರ್ : ರಾಮನಗರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಲೋಕಸಭಾ ಉಪಚುನಾವಣೆಯಲ್ಲಿ ಜೆ.ಡಿ.ಎಸ್. ನಿಂದ ಸ್ಪರ್ಧೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಚಂದ್ರಶೇಖರ್ ಆಶ್ಚರ್ಯಕರವಾಗಿ ಕೊನೆ ಗಳಿಗೆಯಲ್ಲಿ ಸ್ಪರ್ಧಾಕಣದಿಂದ ನಿವೃತ್ತಿ ಘೋಷಣೆ.

ರಾಜ್ಯದ ಕೃಷಿಕರಿಗೆ ಸರ್ಕಾರ ದೀಪಾವಳಿ ಸಂದರ್ಭ ಸಿಹಿ ಸುದ್ದಿ ಪ್ರಕಟಿಸಿತು. ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಂಡು ಬಳಕೆ ಮಾಡದೆ ಖಾಲಿ ಬಿಟ್ಟ 40 ಸಾವಿರ ಎಕರೆ ಭೂಮಿಯನ್ನು ರೈತರಿಗೆ ಹಿಂತಿರುಗಿಸುವ ನಿರ್ಧಾರ ಕೈಗೊಂಡಿತು.

ಬಿ.ಜೆ.ಪಿ. ನಾಯಕ ಕೇಂದ್ರದ ಸಚಿವ ಕರ್ನಾಟಕದ ರಾಜಕೀಯ ಧುರೀಣ ಅನಂತಕುಮಾರ್ ನಿಧನರಾದರು.

ಆ್ಯಂಬಿಡೆಂಟ್ ಕಂಪೆನಿ ವಂಚನೆ ಪ್ರಕರಣ ಆರೋಪ ಹಿನ್ನೆಲೆಯಲ್ಲಿ ರಾಜ್ಯದ ಮಾಜಿ ಸಚಿವ ಬಿ. ಜನಾರ್ಧನ ರೆಡ್ಡಿ ಬಂಧನಕ್ಕೆ ಒಳಗಾಗಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡರು.

ರಾಜ್ಯ ಸರ್ಕಾರವು ಆನ್‍ಲೈನ್ ಮೂಲಕವೇ ಆಸ್ತಿ ಹಸ್ತಾಂತರ, ಅಂಡಮಾನ ಹಾಗೂ ಅಧಿಕಾರ ಪತ್ರಗಳ ನೋಂದಣಿ ವ್ಯವಸ್ಥೆ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿತು.

ಕಬ್ಬು ಮಾರಾಟದ ಹಣದ ಬಾಕಿ ಪಾವತಿಗಾಗಿ ಆಗ್ರಹಿಸಿ ಕಬ್ಬು ಬೆಳೆಗಾರರಿಂದ ಅಹೋರಾತ್ರಿ ಧರಣಿ. ವಿಶೇಷ ಸಭೆ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ರೈತರ ಸಮಸ್ಯೆಗೆ ತಾತ್ಕಾಲಿಕ ಉಪಶಮನ.

ರಾಜ್ಯಕ್ಕೆ ಕೇಂದ್ರದಿಂದ ಪ್ರಾಕೃತಿಕ ವಿಕೋಪದಿಂದ ಪರಿಹಾರದ ಸಲುವಾಗಿ ರೂ. 546 ಕೋಟಿ ನೆರವು ಬಿಡುಗಡೆ.

ಖ್ಯಾತ ನಟ ಹಾಗೂ ಮಾಜಿ ಸಚಿವ ಅಂಬರೀಷ್ ನಿಧನ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಭಾರೀ ಜನಸ್ತೋಮ.

ಪಾಂಡವಪುರದಿಂದ ತೆರಳುತ್ತಿದ್ದ ಖಾಸಗಿ ಬಸ್ ಕನಕÀನ ಮರಡಿ ಗ್ರಾಮದ ಬಳಿ ನಾಲೆಗೆ ಬಿದ್ದು 30 ಜನರು ಜಲಸಮಾಧಿ.

ಹಿರಿಯ ಕಾಂಗ್ರೆಸ್ ನಾಯಕ ಕೇಂದ್ರ ಮಾಜಿ ಸಚಿವ ಸಿ. ಕೆ. ಜಾಫರ್ ಷರೀಫ್ (85) ನಿಧನ.

ಕಾಶ್ಮೀರದ ಕುಲ್‍ಗಾಮ್‍ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಸಿ.ಆರ್.ಪಿ.ಎಫ್. ಯೋಧ ಬೋಜರಾಜ ಪುಂಡಲೀಕ ಜಾದವ್ (29) ಹುತಾತ್ಮ.

ಡಿಸೆಂಬರ್ : ಕರ್ನಾಟಕದಲ್ಲಿ ಲಿಂಗಾಯಿತ ಪ್ರತ್ಯೇಕ ಧರ್ಮ ಜಾರಿಗೊಳಿಸಲು ಸಿದ್ದರಾಮಯ್ಯ ಸರಕಾರ ಕೇಂದ್ರಕ್ಕೆ ಕಳುಹಿಸಿದ್ದ ಪ್ರಸ್ತಾವನೆಯನ್ನು ಕೇಂದ್ರವು ತಿರಸ್ಕರಿಸಿತು.

ಪಂಚ ರಾಜ್ಯಗಳ ಚುನಾವಣ ಫಲಿತಾಂಶದಲ್ಲಿ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತಿಸ್‍ಘಡ ರಾಜ್ಯಗಳಲ್ಲಿ ಕಾಂಗ್ರೇಸ್ ಪಕ್ಷ ಜಯಗಳಿಸಿ ಬಿ.ಜೆ.ಪಿ.ಯಿಂದ ಆಡಳಿತವನ್ನು ಕಸಿದುಕೊಂಡಿತು. ತೆಲಂಗಾಣದಲ್ಲಿ ಚಂದ್ರಶೇಖರ್‍ರಾವ್ ನೇತೃತ್ವದ ಟಿ.ಆರ್.ಎಸ್. ಪಕ್ಷ ಬಹುಮತ ಸಾಧಿಸಿತು. ವಿಜೋರಾಂನಲ್ಲ್ಲಿ ಎಂ.ಎನ್.ಎಫ್. ಅಧಿಕ ಸ್ಥಾನಗಳಿಸಿತು.