ಮಡಿಕೇರಿ, ಡಿ. 31: ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಡಿ. 30 ರಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮ ಗಳೊಂದಿಗೆ ಪುತ್ತರಿ ಓರ್ಮೆ ಹಾಗೂ ಸಾಂಸ್ಕøತಿಕ ಪ್ರತಿಭಾ ಪ್ರದರ್ಶನ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಕೂಟದ ಸದಸ್ಯರು ಸಂಭ್ರಮದಿಂದ ಭಾಗಿಗಳಾಗಿದ್ದರು. ಚತುಷ್ಪಥ ರಸ್ತೆ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದ ಚರ್ಚಾ ಸ್ಪರ್ಧೆ, ಬಾಲ್ಯದ ದಿನಗಳ ಮೆಲುಕು, ಕಿರುನಾಟಕ, ನೃತ್ಯ, ಹಾಡು ಮತ್ತಿತರ ಕಾರ್ಯಕ್ರಮದೊಂದಿಗೆ ಆಕರ್ಷಕ ಹೂ ಜೋಡಣೆ ಫ್ಯಾಷನ್ ಷೋ ಹಮ್ಮಿಕೊಳ್ಳ ಲಾಗಿತ್ತು. ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಹಾಗೂ ಪದಾಧಿಕಾರಿಗಳ ಉಸ್ತುವಾರಿಯಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಪಾಲ್ಗೊಂಡಿದ್ದ ವಿಧಾನ ಸಭಾ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಶುಭ ಕೋರಿದರು.

ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಹಾಜರಿದ್ದರು. ಬಳಿಕ ನಡೆದ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಸದಸ್ಯರು ತಮ್ಮ ಪ್ರತಿಭೆ ಪ್ರದರ್ಶನದೊಂದಿಗೆ ಗಮನ ಸೆಳೆದರು. ಮದುವೆ ಸಮಾರಂಭ ಗಳಲ್ಲಿ ಊಟವನ್ನು ಬಿಸಾಡುವ ವಿಚಾರದ ಕುರಿತು ತೆನ್ನೀರ ರಾಧ ಪೊನ್ನಪ್ಪ ಅವರು ಮಾತನಾಡಿದರು. ವಿವಿಧ ಸ್ಪರ್ಧೆಯ ತೀರ್ಪುಗಾರರು ಗಳಾಗಿ ಸಣ್ಣುವಂಡ ಉಷಾ, ಅಚ್ಚಪಂಡ ಪದ್ಮ, ಆಲೆಮಾಡ ಚಿತ್ರಾ ನಂಜಪ್ಪ, ಚೇಂದ್ರಿಮಾಡ ಆಗ್ನೇಸ್ ಮುತ್ತಣ್ಣ ಕಾರ್ಯನಿರ್ವಹಿಸಿದ್ದರು.

ಈ ಸಂದರ್ಭ ಕೂಟದ ಸದಸ್ಯ ರಾಗಿರುವ ಸುಬ್ರಹ್ಮಣ್ಯ ಕೇರಿಯ ಮಹಿಳೆಯರಿಂದ ಕೋಲಾಟ್ ಪ್ರದರ್ಶನ ನಡೆಯಿತು. ಪೊನ್ನಂಪೇಟೆಯಲ್ಲಿ ನಡೆದ ಮಂದ್‍ನಮ್ಮೆ ಕಾರ್ಯಕ್ರಮದಲ್ಲಿ ಉಮ್ಮತ್ತಾಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.

ಬೊಪ್ಪಂಡ ಸರಳಾ ಪ್ರಾರ್ಥಿಸಿ, ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಸ್ವಾಗತಿಸಿದರು. ಬಾಳೆಯಡ ಸವಿತಾ ಹಾಗೂ ಮಂಡೇಪಂಡ ಜರಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಬೊಳ್ಳಜೀರ ಯಮುನಾ ವರದಿ ಮಂಡಿಸಿ ವಂದಿಸಿದರು. ಖಜಾಂಚಿ ಉಳ್ಳಿಯಡ ಸಚಿತಾ ಗಂಗಮ್ಮ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.