ಕುಶಾಲನಗರ, ಡಿ. 31: ಮೈಸೂರಿನ ವಸಿಷ್ಠ ಸಂಸ್ಥೆ ವತಿಯಿಂದ ಸ್ಥಳೀಯ ಮಾರುತಿ ವಿದ್ಯಾಸಂಸ್ಥೆಯಲ್ಲಿ ವೇದಗಣಿತದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ವಸಿಷ್ಠ ಸಂಸ್ಥೆಯ ನಿರ್ದೇಶಕಿ ಶಿಲ್ಪಾ ವಿದ್ಯಾರ್ಥಿಗಳಿಗೆ ವೇದಗಣಿತದ ಬಗ್ಗೆ ಅರಿವು ಮೂಡಿಸಿದರು. ವೇದಗಣಿತ ಶಾಸ್ತ್ರ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ವೇಗವಾಗಿ ಹಾಗೂ ಸುಲಭವಾಗಿ ಪರಿಹರಿಸಬಹುದಾದ ಗಣಿತ ಸಮಸ್ಯೆಗಳ ಬಗ್ಗೆ ವಿವರಿಸಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಎಲ್. ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಲವು ವಿದ್ಯಾರ್ಥಿಗಳಿಗೆ ಕಗ್ಗಂಟು ಎನಿಸಿರುವ ಗಣಿತವನ್ನು ಅತಿ ಸುಲಭವಾಗಿ ಅರ್ಥೈಸುವ ಕ್ರಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವೇದಗಣಿತದ ಮೂಲಕ ವಿದ್ಯಾರ್ಥಿಗಳು ಸುಲಲಿತವಾಗಿ ಗಣಿತ ಶಾಸ್ತ್ರ ಮನನ ಮಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಾಗಾರದಲ್ಲಿ ಜ್ಞಾನಭಾರತಿ, ಜ್ಞಾನೋದಯ, ಮೊರಾರ್ಜಿ ಶಾಲೆಗಳ 68 ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದರು. ಮಾರುತಿ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ತ್ರಿವೇಣಿ, ವಸಿಷ್ಠ ಸಂಸ್ಥೆ ಸಂಚಾಲಕಿ ಯಾಲದಾಳು ಕುಮುದಾ ಜಯಪ್ರಶಾಂತ್ ಇದ್ದರು.