ಗೋಣಿಕೊಪ್ಪಲು, ಡಿ. 31: ಇಲ್ಲಿನ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿರುವ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕರಾದ ಕೂಪದೀರ ಸುನೀತಾ ಮುತ್ತಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಏಡ್ಸ್ ಎಂಬ ಮಹಾಮಾರಿ ಹೆಚ್ಚಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆ ಹಾಗೂ ಮಾದಕ ವಸ್ತು ವ್ಯಸನದಿಂದ ಹರಡುತ್ತಿದ್ದು, ಯುವ ಜನತೆ ಎಚ್ಚರಿಕೆಯಿಂದಿದ್ದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಆಕಾಶವಾಣಿ ಉದ್ಘೋಷಕ ಚಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಎನ್ಎಸ್ಎಸ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಡುವದರ ಜೊತೆಗೆ, ಮಾತನಾಡುವ ಕಲೆಯನ್ನು ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಎನ್ಎಸ್ಎಸ್ ನ ಪಾತ್ರ ದೊಡ್ಡದು ಎಂದರು.
ಈ ಸಂದರ್ಭ ಬೇಗೂರಿನ ನಿವೃತ್ತ ಆರೋಗ್ಯ ಕಾರ್ಯಕರ್ತೆ ಚೋಡುಮಾಡ ವೇದಾವತಿ ಬೇಗೂರು ಶಾಲೆಯ ಮಾಜಿ ಎಸ್ಡಿಎಂಸಿ ಅಧ್ಯಕ್ಷರಾದ ಚೋಡುಮಾಡ ಶೈಲಾ ಶಂಕರಿ, ಕಾವೇರಿ ಕಾಲೇಜು ಉಪನ್ಯಾಸಕರಾದ ಸೀಮ, ಪೊನ್ನಮ್ಮ, ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಎಂ.ಎನ್. ವನಿತ್ಕುಮಾರ್ ಹಾಗೂ ಎನ್.ಪಿ. ರೀತಾ ಇದ್ದರು.
ಬೇಗೂರು ಗ್ರಾಮಸ್ಥರಿಗೆ ಹಾಗೂ ಶಿಬಿರಾರ್ಥಿಗಳಿಗೆ ಕಾವೇರಿ ಕಾಲೇಜು ಸಿಬ್ಬಂದಿ ಎಂ.ಎಂ. ಚನ್ನನಾಯಕ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ತೀರ್ಪು ಗಾರರಾಗಿ ಬೇಗೂರು ಶಾಲೆಯ ಶಿಕ್ಷಕಿ ಅನಿತಾಕುಮಾರಿ ಹಾಗೂ ಸಫೂರ ಕಾರ್ಯ ನಿರ್ವಹಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬೇಗೂರು ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಯರಾದ ಸುಜಾತ, ಅನಿತಾಕುಮಾರಿ ಹಾಗೂ ಸಫೂರ ರವರ ಮಾರ್ಗದರ್ಶನದಲ್ಲಿ ವೈವಿದ್ಯಮಯವಾದ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಬೇಗೂರು ಗ್ರಾಮಸ್ಥರಿಂದ ಉಮ್ಮತ್ತಾಟ್ ಹಾಗೂ ಬೊಳಕಾಟ್ ಪ್ರದರ್ಶನ ಮೂಡಿಬಂತು. ರಾತ್ರಿಯ ಶಿಬಿರ ಜ್ಯೋತಿ ಕಾರ್ಯಕ್ರಮವನ್ನು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಪೀಠಾಧಿಪತಿ ಬೋಧಸ್ವರೂಪಾನಂದಾ ಸ್ವಾಮೀಜಿ ಉದ್ಘಾಟಿಸಿದರು. ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕೊಡವ ಆಟ್ ಪಾಟ್ ಕಾರ್ಯಕ್ರಮ ನಡೆಯಿತು.