ಗೋಣಿಕೊಪ್ಪ ವರದಿ, ಡಿ. 30 : ಬಾಳೆಲೆ ಸಮೀಪದ ಕಾರ್ಮಾಡು ಗ್ರಾಮದಲ್ಲಿ ಕರಡಿ ಧಾಳಿಯಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಸಪೋಟ ಹಣ್ಣು ತಿನ್ನಲು ಬರುವ ಕರಡಿಗಳಿಂದಾಗಿ ತೋಟದಲ್ಲಿ ಕೆಲಸ ನಿರ್ವಹಿಸಲು ಅಗುತ್ತಿಲ್ಲ. ಕರಡಿಯನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಗ್ರಾಮದ ಬೆಳೆಗಾರರುಗಳ ಮನೆಯಂಗಳ, ತೋಟಗಳಿಗೆ ರಾತ್ರಿ ಧಾಳಿ ಇಡುತ್ತಿರುವ ಕರಡಿಗಳು ಮರದ ರೆಂಬೆಗಳನ್ನು ಮುರಿದು ಹಾಕುತ್ತಿದೆ. ಹಣ್ಣು ಮರಗಳ ರಕ್ಷಣೆ ಕಷ್ಟ ಸಾಧ್ಯವಾಗಿದೆ. ರಾತ್ರಿ 8 ಗಂಟೆಯ ನಂತರ ಬರುವ 2 ಕರಡಿಗಳು ನಿರಂತರ ಧಾಳಿ ಇಡುತ್ತಿವೆ. ಗ್ರಾಮದಲ್ಲಿ ತೊಂದರೆ ನೀಡುತ್ತಿವೆ. ಕೊಟ್ಟಂಗಡ ಮಧು ಸೇರಿದಂತೆ ಹಲವು ಬೆಳೆಗಾರರ ಮನೆಯಂಗಳದಲ್ಲಿ ನಿತ್ಯ ಕಾಣಿಸಿಕೊಳ್ಳುತ್ತಿದೆ.

(ಮೊದಲ ಪುಟದಿಂದ)

ಕಾಫಿ ತೋಟಗಳಿಗೆ ನೀರು ಹಾಯಿಸುವ ಕೆಲಸ ಆರಂಭಗೊಳ್ಳಲಿರುವದರಿಂದ ರಾತ್ರಿ ಓಡಾಡುವಾಗ ಜನರ ಮೇಲೆ ಧಾಳಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು. ಹಿಡಿದು ಸ್ಥಳಾಂತರ ಮಾಡಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.

-ಸುದ್ದಿಪುತ್ರ