ಕೂಡಿಗೆ, ಡಿ. 29 : ಗಿರಿಜನರ ಬದುಕು ಹಸನಾಗಿಸಲು ಹೋರಾಟ ನಡೆಸಿದ ಬಿರ್ಸಾ ಮುಂಡಾ ಅವರ ವ್ಯಕ್ತಿತ್ವ ಗಿರಿಜನ ಸಮಾಜಕ್ಕೆ ದಾರಿ ದೀಪವಾಗಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದರು.

ಕುಶಾಲನಗರದ ಸಮೀಪ ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ಕೊಡಗು ಜಿಲ್ಲೆ, ಗಿರಿಜನ ದೊಡ್ಡ ಪ್ರಮಾಣದ ಕೊಡಗು ಜಿಲ್ಲೆ ಹಾಗೂ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ಬಸವನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಿರ್ಸಾಮುಂಡಾ ಅವರ 143 ನೇ ಜಯಂತಿ ಉತ್ಸವ ಆಚರಣೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸ್ವಾತಂತ್ರ್ಯ ಸ್ವಾಭಿಮಾನಕ್ಕಾಗಿ ಹೋರಾಡಿದ ಬಿರ್ಸಾ ಮುಂಡ ಅವರ ಆತ್ಮಕ್ಕೆ ತೃಪ್ತಿ ನೀಡಬೇಕಾದರೆ ಅವರ ತತ್ವ ಆದರ್ಶಗಳನ್ನು ಮರೆಯುವಂತಿಲ್ಲ; ಅವರ ಹೋರಾಟದ ಕೆಲವು ಅಂಶಗಳನ್ನಾದರೂ ಮೈಗೂಡಿಸಿಕೊಂಡು ಇಂದಿನ ಹೋರಾಟಗಳು ನಡೆಯಬೇಕಿದೆ ಎಂದರು.

ರಾಜ್ಯದ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಗಿರಿಜನರ ಅಭಿವೃದ್ಧಿಗೆ ಹಾಗೂ ಆದಿವಾಸಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 1ನೇ ತರಗತಿಯಿಂದ ಪಿಯುಸಿ ವರೆಗೆ ಮೊರಾರ್ಜಿ ಶಾಲೆ ಮಾದರಿಯಲ್ಲಿ ಎರಡು ಪಿಯು ಕಾಲೇಜುಗಳು ಹಾಗೂ ಎರಡು ಪದವಿ ಕಾಲೇಜುಗಳನ್ನು ಮುಂಡಾ ಹೆಸರಿನಲ್ಲಿ ತೆರೆಯಲು ತೀರ್ಮಾನ ಕೈಗೊಳ್ಳಲಾಗುವದು. ಆದಿವಾಸಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದÀ್ಯತೆ ನೀಡುವ ಮೂಲಕ ವಿದ್ಯಾರ್ಜನೆಗೆ ಹೆಚ್ಚು ಅವಕಾಶ ಕಲ್ಪಿಸಲು ತಾನು, ರಾಜ್ಯದ ಮುಖ್ಯಮಂತ್ರಿ ಹಾಗೂ ಆಡಳಿತ ವರ್ಗ ಒಳಗೊಂಡಂತೆ ಜಿಲ್ಲೆಯ ಯಾವದಾದರೂ ಒಂದು ಹಾಡಿಯ ಕೇಂದ್ರದಲ್ಲಿ ಕ್ಯಾಬಿನೆಟ್ ಸಭೆ ನಡೆಸಿ ಅಧಿಕಾರಿಗಳಿಗೆ ಸ್ಥಳದಲ್ಲೇ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಚಿಂತನೆ ನಡೆಸಲಾಗುವದು ಎಂದರು.

ಜಾತ್ಯತೀತ ಜನತಾ ದಳದ ಅಧ್ಯಕ್ಷ ಹೆಚ್ ವಿಶ್ವನಾಥ್ ಮಾತನಾಡಿ, ಗಿರಿಜನರಿಗೆ ಸರಿಯಾದ ನ್ಯಾಯ ಸಿಗಬೇಕು ಅವರು ಒಳ್ಳೆಯ ವಿದ್ಯಾವಂತರಾಗಬೇಕು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಲು ಸರ್ಕಾರ ಪ್ರಯತ್ನಿಸಬೇಕು. ಗಿರಿಜನರು ಸಂಘಟಿತ ಹೋರಾಟ ಮಾಡಲು ಮುಂದಾಗಬೇಕು ರಾಜ್ಯ ಸರ್ಕಾರ ಗಿರಿಜನರಿಗೆ ಶಾಶ್ವತವಾದ ಪರಿಹಾರ ಸಿಗುವಂತೆ ವ್ಯವಸ್ಥೆ ನಿರ್ಮಾಣವಾಗಲು ಅವರು ಇರುವ ಹಾಡಿಯಲ್ಲಿ ಕ್ಯಾಬಿನೆಟ್ ಸಭೆ ನಡೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವದಾಗಿ ಸಭೆಯಲ್ಲಿ ಹೇಳಿದರು.

ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಬಿರ್ಸಾ ಮುಂಡಾ ಗಿರಿಜನರ ಧೀಮಂತ ನಾಯಕನಾಗಿ ಆ ಕಾಲಘಟ್ಟದ ಸ್ವಾತಂತ್ರ್ಯ ಸಮರದಲ್ಲಿ ಹೋರಾಟ ನಡೆಸಿದ ಭಗತ್‍ಸಿಂಗ್‍ರಿಗಿಂತ ಕಡಿಮೆಯೇನಲ್ಲ. ಬಿರ್ಸಾ ಮುಂಡಾ ಅವರು ಸ್ವಾಭಿಮಾನಿ ಮಾತ್ರವಲ್ಲ ಸ್ವಾವಲಂಬಿಯಾಗಿದ್ದರು ಎಂದರು.

ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಆದಿವಾಸಿಗಳು ಸಿಗುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಬೇಕು. ಕಷ್ಟಪಟ್ಟು ದುಡಿದ ಸಂಪತ್ತನ್ನು ಮದ್ಯಪಾನದಂತಹ ದುವ್ರ್ಯಸನಗಳಿಗೆ ಬಳಸಕೂಡದು ಎಂದು ಕಿವಿಮಾತು ಹೇಳಿದರು.ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಎಲ್.ರಮೇಶ್ ವಹಿಸಿದ್ದರು. ರಾಜ್ಯ ಮೂಲ ನಿವಾಸಿಗಳ ರಕ್ಷಣಾ ವೇದಿಕೆ ಅಧ್ಯಕ್ಷ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳಾಡಿದರು.

ಮಾಜಿ ಸಚಿವ ಬಿ.ಎ. ಜೀವಿಜಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲತೀಫ್, ಕೆ.ಪಿ. ಚಂದ್ರಕಲಾ, ಪುಟ್ಟರಾಜು, ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ, ಮಾಜಿ ಸದಸ್ಯೆ ಸುಲೋಚನ, ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆಯ ಅಧ್ಯಕ್ಷ ಗೋಪಾಲ ಪೂಜಾರಿ, ಕಾರ್ಯದರ್ಶಿ ರವಿ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಧರ್ಮಪ್ಪ, ಗಿರಿಜನ ಮುಖಂಡರಾದ ವಿಜಯ, ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಸಣ್ಣಪ್ಪ ಇದ್ದರು.