ಮಡಿಕೇರಿ, ಡಿ.29: ಪೊಲೀಸ್ ಇಲಾಖೆಗೆ ಗೃಹ ರಕ್ಷಕ ದಳ ಬೆನ್ನೆಲುಬಾಗಿದ್ದು, ಗೃಹ ರಕ್ಷಕ ದಳದವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಮಟ್ಟದ ಗೃಹರಕ್ಷಕ ದಳದ ವೃತ್ತಿಪರ ಮತ್ತು ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಗೃಹ ರಕ್ಷಕ ದಳದ ಸಿಬ್ಬಂದಿಗಳು ಪೊಲೀಸರೊಂದಿಗೆ ಉತ್ತಮ ಭಾಂದವ್ಯ ಹೊಂದಿ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲಹೆ ಮಾಡಿದರು.
ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಮಾತನಾಡಿ ಕ್ರೀಡಾಕೂಟವು ನೋಡಗರು ಮತ್ತು ಪಾಲ್ಗೊಳ್ಳುವವರಲ್ಲಿ ಸಂತಸ ತರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕ್ರೀಡೆಯಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕ ಮತ್ತು ದೈಹಿಕ ನೆಮ್ಮದಿಗೆ ಸಹಕಾರಿಯಾಗಲಿದೆ. ಕಠಿಣ ಪರಿಶ್ರಮವಿದ್ದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜ್ ಅವರು ಮಾತನಾಡಿ ಪೊಲೀಸ್ ಇಲಾಖೆಯೊಂದಿಗೆ ಗೃಹರಕ್ಷಕ ದಳವು ಅವಿಭಾಜ್ಯ ಅಂಗವಾಗಿದೆ. ಪ್ರತಿನಿತ್ಯ ಪೊಲೀಸ ರೊಂದಿಗೆ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಪೊಲೀಸರಂತೆ ಗೃಹರಕ್ಷಕ ದಳದವರಿಗೆ ಕ್ರೀಡಾ ಸ್ಫೂರ್ತಿ ಇರಬೇಕು. ಕೊಡಗು ಜಿಲ್ಲೆಗೆ ಹೆಸರು ತರುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಪೊಲೀಸ್ ಇನ್ಸ್ಪೆಕ್ಟರ್ ಮೇದಪ್ಪ, ಚೇತನ್, ತೀರ್ಪುಗಾರರಾದ ಕೃಷ್ಣ, ಜನಾರ್ಧನ ಇತರರು ಇದ್ದರು. ವಿವಿಧ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.