*ಗೋಣಿಕೊಪ್ಪಲು, ಡಿ. 29: ಬೆಂಗಳೂರಿನ ಗಾರ್ಡ್ ಬುಕ್ ಕನ್ಸಲ್ಟೆಂಟ್ ಫೌಂಡೇಷನ್ ನಾಗರಹೊಳೆ ಅರಣ್ಯದಂಚಿನ ಬಾಳೆಲೆ ಕಾರ್ಮಾಡು ಭಾಗದ ಕುಂಬಾರಕಟ್ಟೆ, ಗಣಗೂರು ವ್ಯಾಪ್ತಿಯ ಅರಣ್ಯ ರಕ್ಷಕರ ವಸತಿ ಗೃಹಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಕಲ್ಪಿಸಿ ಕೊಟ್ಟಿದೆ.
ವನ್ಯಜೀವಿಗಳು ಅರಣ್ಯವನ್ನು ಬಿಟ್ಟು ಊರಿನತ್ತ ಬರುವದನ್ನು ತಡೆಗಟ್ಟಲು ಕಾಡಿನಂಚಿನಲ್ಲಿ ರಾತ್ರಿ ವೇಳೆ ಕಾವಲು ಕಾಯುವ ಅರಣ್ಯ ರಕ್ಷಕರಿಗೆ ಬೆಂಗಳೂರಿನ ಗಾರ್ಡ್ ಬುಕ್ ಕನ್ಸಲ್ಟೆಂಟ್ ಫೌಂಡೇಷನ್ ಸೋಲಾರ್ ದೀಪದ ವ್ಯವಸ್ಥೆ ಕಲ್ಪಿಸಿ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದಿದೆ. ಇದರಿಂದ ಅರಣ್ಯ ರಕ್ಷಕರ ಮೊಗದಲ್ಲಿ ಮಂದಹಾಸ ಮೂಡಿದೆ.
ನಾಗರಹೊಳೆ ಅರಣ್ಯದಂಚಿನ ಬಾಳೆಲೆ ಕಾರ್ಮಾಡು ಭಾಗದ ಕುಂಬಾರಕಟ್ಟೆ, ಗಣಗೂರು ವ್ಯಾಪ್ತಿಯಲ್ಲಿ ಅರಣ್ಯ ರಕ್ಷಣೆ ಹಾಗೂ ಕಾಡಾನೆಗಳು ರಾತ್ರಿ ವೇಳೆ ಕಾಫಿ ತೋಟದತ್ತ ನುಸುಳುವದನ್ನು ತಡೆಯಲು ಅರಣ್ಯ ಇಲಾಖೆ ಕಾವಲುಗಾರರಿಗೆ 8 ವರ್ಷಗಳ ಹಿಂದೆ 5 ವಸತಿ ಗೃಹಗಳನ್ನು ನಿರ್ಮಿಸಿಕೊಟ್ಟಿದೆ. ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಈ ವಸತಿ ಗೃಹಗಳಿಗೆ ವಿದ್ಯುತ್ ಸೌಲಭ್ಯವಿಲ್ಲದೆ ಅರಣ್ಯ ರಕ್ಷಕರು ಕತ್ತಲೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ಬೆಂಕಿ ಹಾಕಿಕೊಂಡು ಕೊಳ್ಳಿ ಬೆಳಕಿನಲ್ಲಿಯೇ ಇರುತ್ತಿದ್ದರು. ಇದರಿಂದ ಅವರಿಗೆ ಟಾರ್ಚ್ ಅಥವಾ ಮೊಬೈಲ್‍ಗಳನ್ನು ಚಾರ್ಜ್ ಮಾಡಿಕೊಳ್ಳಲಾಗದೆ ಕತ್ತಲೆಯಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾಗಿತ್ತು.
ಅರಣ್ಯ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಯನ್ನು ಧ್ಯೇಯವಾಗುಳ್ಳ ಗಾರ್ಡ್ ಬುಕ್ ಕನ್ಸಲ್ಟೆಂಟ್ ಫೌಂಡೇಷನ್ ಇದೀಗ 4 ಮನೆಗಳಿಗೆ ಸೋಲಾರ್ ಲೈಟ್ ವ್ಯವಸ್ಥೆ ಕಲ್ಪಿಸಿ ಅರಣ್ಯ ರಕ್ಷಕರಿಗೆ ಬಹಳ ವರ್ಷಗಳಿಂದ ಕಾಡುತ್ತಿದ್ದ ಬೆಳಕಿನ ಕೊರತೆಯನ್ನು ನೀಗಿಸಿದೆ ಎಂದು ನಾಗರಹೊಳೆ ಎಸಿಎಫ್ ಪ್ರಸನ್ನಕುಮಾರ್, ಆರ್‍ಎಫ್‍ಒ ಶಿವಾನಂದ್, ಡಿಆರ್‍ಎಫ್‍ಒ ಪ್ರಸಾದ್ ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಸೋಲಾರ್ ಸಿಸ್ಟಮ್‍ನಿಂದ ಲೈಟ್ ಜತೆಗೆ ಮಿಕ್ಸಿ, ಟಿ.ವಿ., ಕಂಪ್ಯೂಟರ್‍ಗಳನ್ನು ಬಳಸಬಹುದು ಎಂದು ಅವರು ಹೇಳಿದ್ದಾರೆ. ಫೌಂಡೇಷನ್ ಸಂಚಾಲಕ ವಿಶ್ರುತ್ ಇದ್ದರು.