ಗೋಣಿಕೊಪ್ಪ ವರದಿ: ಮತೀಯ ಭಾವನೆಗಳಿಂದ ದೂರವಿರಬೇಕು ಎಂದು ಗೋಣಿಕೊಪ್ಪ ಕಾವೇರಿ ಕಾಲೇಜು ಸಹ ಪ್ರಾಧ್ಯಾಪಕಿ ಡಾ. ಎ.ಎಸ್. ಪೂವಮ್ಮ ಕರೆ ನೀಡಿದರು.

ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜು ವಾಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಮಯಪ್ರಜ್ಞೆ ಮತ್ತು ಶಿಸ್ತು ರೂಢಿಸಿಕೊಂಡು ಅಧ್ಯಯನದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಉದಾತ್ತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಮತೀಯಭಾವನೆಗಳಿಂದ ದೂರವಿರಬೇಕು ಎಂದರು.

ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಆಸಕ್ತಿಗೆ ತಕ್ಕ ಕ್ಷೇತ್ರವನ್ನು ಆರಿಸಿಕೊಂಡು ಏನಾದರೊಂದು ಸಾಧನೆ ಮಾಡಲು ಯತ್ನಿಸಬೇಕು. ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಕೆ.ಪಿ. ಪೊನ್ನಮ್ಮ, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್ ವರದಿ ವಾಚಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಸಹ ಕಾರ್ಯದರ್ಶಿ ಪೋಡಮಾಡ ಮೋಹನ್, ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹಕೋಶಾಧಿಕಾರಿ ಆಲೆಮಾಡ ಕರುಂಬಯ್ಯ, ನಿರ್ದೇಶಕರಾದ ಮಾಚಂಗಡ ಸುಜಾ ಪೂಣಚ್ಚ, ಆದೇಂಗಡ ವಿನು ಉತ್ತಪ್ಪ ಉಪಸ್ಥಿತರಿದ್ದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಂಜಿಸಿದರು.

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ವಿದ್ಯಾಸಂಸ್ಥೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಠಾಧೀಶ ಸದಾಶಿವ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಹಿತವಚನಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿ ಶನಿವಾರಸಂತೆಯ ವಿಘ್ನೇಶ್ವರ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ದುಶ್ಚಟಗಳಿಗೆ ಬಲಿಯಾದರೆ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದರು.

ಯೋಜನಾಧಿಕಾರಿ ವೈ. ಪ್ರಕಾಶ್, ಮೇಲ್ವಿಚಾರಕ ಸುಬ್ರಮಣ್ಯ, ಸೇವಾ ಪ್ರತಿನಿಧಿ ಸುಧಾ ಹಾಗೂ ವಿದ್ಯಾಸಂಸ್ಥೆ ಪ್ರಾಂಶುಪಾಲ ತನುಜಾ ಉಪಸ್ಥಿತರಿದ್ದರು.

ಕುಶಾಲನಗರ: ಸಮೀಪದ ಮೂಕಾಂಬಿಕ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ ನಡೆಯಿತು. ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವ್ಯಸನಕ್ಕೆ ಬಲಿಯಾಗಿ ವಿವೇಚನಾ ರಹಿತರಾಗುತ್ತಿರುವದರೊಂದಿಗೆ ತಮ್ಮ ಜೀವ ಬಲಿ ತೆಗೆದುಕೊಳ್ಳುವ ನಿರ್ಧಾರ ಸಲ್ಲದು ಎಂದ ಅವರು, ವಿದ್ಯಾರ್ಥಿಗಳನ್ನು ಅತ್ಯಂತ ದೃಢ ಮನಸಿನ, ಮನೋಬಲ ಉಂಟುಮಾಡುವ, ಆತ್ಮವಿಶ್ವಾಸದ ಚಿಲುಮೆಯಾಗಿ ರೂಪಿಸುವಂತಹ ಶಿಕ್ಷಣದ ಅಗತ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಡಯಟ್ ಉಪನ್ಯಾಸಕ ಕೆ.ವಿ. ಸುರೇಶ್, ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರಸನ್ನ ಚಂದ್ರ, ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಸಂತೋಷ್, ಪ್ರಾಂಶುಪಾಲ ಗೋಪಾಲ್ ಮತ್ತಿತರರು ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಸುಂಟಿಕೊಪ್ಪ: ವಿದ್ಯೆಯನ್ನು ಬೇರೆಯವರಿಗೂ ಕಲಿಸುವ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ನಿವೃತ್ತ ಉಪಾಧ್ಯಾಯ ಶಿವಪ್ಪ ಹೇಳಿದರು. ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸರಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳ (ಗುರು-ಶಿಷ್ಯರ ಸಮ್ಮಿಲನ) ‘ಒಂದಾಗೋಣ ಬಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಶಿಕ್ಷಕರುಗಳು ಸಮರ್ಪಣಾ ಮನೋಭಾವನೆಯಿಂದ ನಿಷ್ಪಕ್ಷಪಾತವಾಗಿ ಜಾತಿ ಮತ ಧರ್ಮ ನೋಡದೆ ಮಕ್ಕಳ ಭವಿಷ್ಯವನ್ನು ಶಿಲ್ಪಿಯಂತೆ ರೂಪಿಸುತ್ತಾರೆ ಎಂದರು.

ನಿವೃತ್ತ ಶಿಕ್ಷಕಿ ಸರಸ್ವತಿ ಮಾತನಾಡಿ, ಶಿಕ್ಷಕರಿಗೆ ವಿದ್ಯಾರ್ಥಿಗಳೇ ಆಸ್ತಿ ವೃತ್ತಿ ಜೀವನವನ್ನು ನಿಷ್ಠೆಯಿಂದ ದೇವರು ಮೆಚ್ಚುವ ರೀತಿಯಲ್ಲಿ ನಿರ್ವಹಿಸಿದ ತೃಪ್ತಿ ಇದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಶಿವರಾಮಯ್ಯ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ಶಿಕ್ಷಕ ಶಿಕ್ಷಕಿಯರುಗಳಾದ ಭೀಮಯ್ಯ, ಕರುಂಬಯ್ಯ, ಚಂಗಪ್ಪ, ಸ್ವಾಮಿ, ರಂಗಸ್ವಾಮಿ, ಬಾಲಕೃಷ್ಣ, ಸಿ.ಟಿ. ಸೋಮಶೇಖರ್, ಪ್ರೇಮ್‍ಕುಮಾರ್, ತಂಗಮ್ಮ, ಲಲಿತ, ಕಾವೇರಮ್ಮ, ದೇವಮ್ಮ, ಲತಾ, ಶ್ಯಾಮಲ, ಅನಿತಾ, ಚಿತ್ರ, ಪುಷ್ಪಾ, ಯಶೋಧ ಹಾಗೂ ಶಾಂತ ಹೆಗಡೆ ಇದ್ದರು.

ಆಗಮಿಸಿದ್ದ ಶಿಕ್ಷಕರುಗಳನ್ನು ಹಳೇ ವಿದ್ಯಾರ್ಥಿಗಳು ಗೌರವಿಸಿದರು. ಪ್ರೌಢಶಾಲಾ ಹಳೇ ವಿದ್ಯಾರ್ಥಿ ಲಿಂಗರಾಜು ಪ್ರಾರ್ಥಿಸಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಎಸ್. ಸುನಿಲ್ ಸ್ವಾಗತಿಸಿ, ಕಾರ್ಯದರ್ಶಿ ಡೆನ್ನಿಸ್ ಡಿಸೋಜ ಪ್ರಾಸ್ತಾವಿಕ ನುಡಿ ಹಾಗೂ ನಿರೂಪಿಸಿ, ರಜಾಕ್ ವಂದಿಸಿದರು.ಸೋಮವಾರಪೇಟೆ: ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅಧ್ಯಯನ ಪ್ರವಾಸಗಳು ಸಹಕಾರಿಯಾಗಿವೆ ಎಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ ಅಭಿಪ್ರಾಯಿಸಿದರು.

ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಆಯ್ದ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಆಯೋಜಿಸಲಾಗಿರುವ ಶೈಕ್ಷಣಿಕ ಪ್ರವಾಸಕ್ಕೆ ಇಲ್ಲಿನ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕ ಭವ್ಯ ಪರಂಪರೆಯ ಇತಿಹಾಸವನ್ನು ಹೊಂದಿದ್ದು, ಹಲವಷ್ಟು ಶಾಸನಗಳು ಇಂದಿಗೂ ನಮ್ಮ ಕಣ್ಮುಂದೆ ಇದೆ. ಇತಿಹಾಸದ ಪಾಠಗಳಲ್ಲಿ ಇವುಗಳ ಅಧ್ಯಯನ ನಡೆದರೂ ಸಹ ಅಂತಹ ಸ್ಥಳಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿದಾಗ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧ್ಯಯನಶೀಲ ವಿದ್ಯಾರ್ಥಿಗಳಿಗೆ ಇಂತಹ ಪ್ರವಾಸಗಳು ಉತ್ತಮ ಅವಕಾಶಗಳನ್ನು ಕಲ್ಪಿಸುತ್ತವೆ ಎಂದರು.

ತಾಲೂಕಿನಿಂದ 300 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಆಯ್ಕೆಗೊಂಡಿದ್ದು, ಬೇಲೂರು, ಹಳೆಬೀಡು, ಚಿತ್ರದುರ್ಗದ ಕಲ್ಲಿನಕೋಟೆ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಂಪಿ ಸೇರಿದಂತೆ ಇನ್ನಿತರ ಐತಿಹಾಸಿಕ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಶಿಕ್ಷಣ ಸಂಯೋಜಕ ಶೇಖರ್ ತಿಳಿಸಿದರು.

ಪ್ರವಾಸಕ್ಕೆ ಚಾಲನೆ ನೀಡಿದ ಸಂದರ್ಭ ಶಿಕ್ಷಣ ಸಂಯೋಜಕ ರಾಧಾಕೃಷ್ಣ, ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹಿರಕರ ಶರಣ್, ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣ, ಸಂದ್ಯಾ, ತುಳಸಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಿರುನಾಣಿ: ಬಿರುನಾಣಿಯ ಮರೆನಾಡು ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಕ್ರೀಡೋತ್ಸವದ ಧ್ವಜಾರೋಹಣವನ್ನು ಆಡಳಿತ ಮಂಡಳಿ ಅಧ್ಯಕ್ಷ ಬೊಟ್ಟಂಗಡ ಬಿ. ಮಾಚಯ್ಯ ನೆರವೇರಿಸಿದರು.

ಮೈದಾನದಲ್ಲಿ ನೃತ್ಯ, ವಿದ್ಯಾರ್ಥಿಗಳಿಂದ ಕವಾಯತು, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಅಪರಾಹ್ನ ಸಭಾ ಕಾರ್ಯಕ್ರಮ ಆಡಳಿತ ಮಂಡಳಿ ಅಧ್ಯಕ್ಷ ಬೊಟ್ಟಂಗಡ ಬಿ. ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಡಗಿನ ಪ್ರಕೃತಿ ವಿಕೋಪದಲ್ಲಿ ಮಡಿದವರಿಗೆ ಸಭೆಯಲ್ಲಿ ಒಂದು ನಿಮಿಷ ಮೌನಾಚರಿಸಿ ಸಂತಾಪ ಸೂಚಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಂ. ಕಿಶೋರ್ ಸ್ವಾಗತಿಸಿದರು.

ಉದ್ಘಾಟನೆಯನ್ನು ಮರೆನಾಡು ಪ್ರೌಢಶಾಲೆಯ ಸ್ಥಾಪಕ ಸದಸ್ಯ ಹಿರಿಯ ಚೇತನ ಕುಪ್ಪುಡೀರ ಐ. ಕಾಳಪ್ಪ ಅವರು ಮಕ್ಕಳಿಗೆ, ಸಾರ್ವಜನಿಕರಿಗೆ ಅಭ್ಯಾಸ ಮತ್ತು ಆಸಕ್ತಿಯುಳ್ಳ ವ್ಯಕ್ತಿ ಉತ್ತಮ ನಾಗರಿಕನಾಗಬಲ್ಲ ಹಾಗೂ ಮಕ್ಕಳು ಅಭ್ಯಾಸ ಮತ್ತು ಆಸಕ್ತಿಯನ್ನು ಹೆಚ್ಚಿಸಿಕೊಂಡರೆ ತಮ್ಮ ಗುರಿಯನ್ನು ಸರಳವಾಗಿ ತಲಪಬಹುದು ಎಂದು ಹೇಳಿದರು.

ಇತ್ತೀಚೆಗೆ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನದಲ್ಲಿ ವೀರಾಜಪೇಟೆ ತಾಲೂಕಿನ ಉತ್ತಮ ಶಿಕ್ಷಕರೆಂದು ಸನ್ಮಾನಿಸಲಾದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಆಡಳಿತ ಮಂಡಳಿಯವರು ಸಭೆಯಲ್ಲಿ ಸನ್ಮಾನ ಮಾಡುವದರ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು. ಶಾಲೆಗೆ ಸ್ಥಳ ಧಾನ ಮಾಡಿದ ಕಾಯಪಂಡ ಕುಟುಂಬಸ್ಥರ ಪರವಾಗಿ ವಿಶೇಷ ಆಹ್ವಾನಿತರಾಗಿ ಕಾಯಪಂಡ ಕೆ. ಅಯ್ಯಪ್ಪ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಯು. ಚಲನ್‍ಕುಮಾರ್, ಆಡಳಿತ ಮಂಡಳಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ನಾಗರಾಜ್ ವಂದಿಸಿದರು. ಎಂ. ಶಾಂತಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಈ ಬಾರಿ ಶಾಲಾ ಆಡಳಿತ ಮಂಡಳಿಯವರೇ ವಾರ್ಷಿಕೋತ್ಸವದ ಎಲ್ಲಾ ವ್ಯವಸ್ಥೆಗಳ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು. ಸಂಜೆ 5 ಗಂಟೆಯಿಂದ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ 56ನೇ ವರ್ಷದ ವಾರ್ಷಿಕೋತ್ಸವ ಮುಕ್ತಾಯವಾಯಿತು.

ಶನಿವಾರಸಂತೆ: ಸಮಾಜದಲ್ಲಿ ಶಿಸ್ತು, ಶಾಂತಿ, ಸುವ್ಯವಸ್ಥೆ ಕಾಪಾಡಲು ಕಾನೂನು ಅತ್ಯಗತ್ಯವಾಗಿದೆ ಎಂದು ಸೋಮವಾರಪೇಟೆ ವಕೀಲ ಕೆ.ಪಿ. ಗಣಪತಿ ಹೇಳಿದರು.

ಪಟ್ಟಣದ ವಿಘ್ನೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಾನವ ಹಕ್ಕು ಭ್ರಷ್ಟಾಚಾರ ವಿರೋಧಿ ಸಂಸ್ಥೆ ವತಿಯಿಂದ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

10 ಸಾವಿರ ಕಾನೂನುಗಳಿದ್ದು ಅವುಗಳಲ್ಲಿ ಕೆಲವು ಕಾನೂನುಗಳ ಅರಿವು ಬಹಳ ಮುಖ್ಯ. ತಪ್ಪುಗಳಿಗೆ ಶಿಕ್ಷೆ ಅನಿವಾರ್ಯ. 18 ವರ್ಷದೊಳಗಿನ ಮಕ್ಕಳು ಲೈಂಗಿಕ ಅಪರಾಧ ಮಾಡದಂತೆ ತಡೆಯುವ ಕಾನೂನಿದೆ. ಲೈಂಗಿಕ ದೌರ್ಜನ್ಯವು ಅಪರಾಧವಾಗಿದ್ದು, ಸ್ಥಳೀಯ ಠಾಣೆಯಲ್ಲಿ ದೂರು ನೀಡುವದು ಬಹುಮುಖ್ಯ. ದೂರು ನೀಡದಿರುವದು. ಸುಳ್ಳು ದೂರು ನೀಡುವದು ಕೂಡ ಅಪರಾಧವೇ ಆಗಿದೆ ಎಂದು ಗಣಪತಿ ಮಾಹಿತಿ ನೀಡಿದರು.

ಮುಖ್ಯ ಪೇದೆ ಹೆಚ್.ಟಿ. ಶಿವಣ್ಣ ಮಾತನಾಡಿ, ವಿದ್ಯಾರ್ಥಿಗಳು ವಾಹನ ಚಾಲನೆ ಮಾಡುವಾಗ ಚಾಲನಾಪತ್ರ, ಅಗತ್ಯ ವಿಮೆ ಮಾಡಿಸುವದು ಹೆಲ್ಮೆಟ್ ಧರಿಸುವದು ಮುಖ್ಯ ಎಂದರು. ಮಾನವ ಹಕ್ಕು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ತಾಲೂಕು ಘಟಕದ ನಿರ್ದೇಶಕ ಗಣೇಶ್ ಮಾತನಾಡಿ, ಮಗುವಿನ ಜನನದಿಂದ ಮರಣದವರೆಗೂ ಮಾನವ ಹಕ್ಕು ಅನ್ವಯವಾಗುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಟಿ.ಪಿ. ಶಿವಕುಮಾರ್ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ದೌರ್ಜನ್ಯಗಳು ನಡೆದಾಗ ದೂರು ಸಲ್ಲಿಸಲು ಕಾನೂನಿನ ಅರಿವು ಮುಖ್ಯವಾಗಿದೆ ಎಂದರು. ಮಾನವ ಹಕ್ಕು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ತಾಲೂಕು ಘಟಕದ ಅಧ್ಯಕ್ಷ ಪಿ. ಮಧು, ನಿರ್ದೇಶಕರಾದ ಧರಣೇಂದ್ರ, ಶರತ್, ಲೇಖಕಿ ಶ.ಗ. ನಯನತಾರಾ, ವಿಘ್ನೇಶ್ವರ ವಿದ್ಯಾಸಂಸ್ಥೆ ನಿರ್ದೇಶಕಿ ನಿತ್ಯಾನಿಧಿ, ಪೊಲೀಸ್ ಸಿಬ್ಬಂದಿ ಶಫೀರ್, ರಘುನಾಯಕ್, ಉಪನ್ಯಾಸಕರಾದ ಜಹೀರ್ ಹಾಗೂ ಸರ್ಫ್‍ರಾಜ್ ಉಪಸ್ಥಿತರಿದ್ದರು.ವೀರಾಜಪೇಟೆ: ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಪೋಷಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಪ್ರಬಾರ ಪ್ರಾಂಶುಪಾಲ ಡಾ ಜೆ. ಸೋಮಣ್ಣ ಹೇಳಿದರು.

ವೀರಾಜಪೇಟೆ ಪ್ರಗತಿ ಶಾಲೆಯ ಕ್ರೀಡಾ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದ ಸೋಮಣ್ಣ ಅವರು, ವಿದ್ಯಾರ್ಥಿಗಳಿಗೆ ಮನೆಯೇ ಗ್ರಂಥಾಲಯವಾಗಿದ್ದರೆ ಮುಂದೆ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಲಿದೆ ಎಂದರು.

ಕೊಡಗು ಎಜುಕೇಷನ್ ಹಾಗೂ ಸೋಷಿಯಲ್ ಟ್ರಸ್ಟ್‍ನ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ ಮಾತನಾಡಿ ವಿದ್ಯಾರ್ಥಿಗಳು ಟಿ.ವಿ., ಮೊಬೈಲ್‍ಗಳಿಂದ ದೂರ ಇದ್ದು ಪಠ್ಯದ ಕಡೆಗೆ ಆಸಕ್ತಿ ಇಟ್ಟು ಕಾರ್ಯನಿರ್ವಹಿಸಿದರೆ ತಾವು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಹೇಳಿದರು.

ಇದೇ ಸಂದರ್ಭ ಪ್ರಗತಿ ವಿದ್ಯಾ ಸಂಸ್ಥೆ ವತಿಯಿಂದ ಪ್ರಕೃತಿ ವಿಕೋಪದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಟ್ರಸ್ಟ್‍ನ ಕಾರ್ಯದರ್ಶಿ ಗಣೇಶ್ ಪೊನ್ನಪ್ಪ ಅವರಿಗೆ ಹಸ್ತಾಂತರಿಸಿದರು. ಸಭೆಯ ಅಧ್ಯಕ್ಷತೆಯನ್ನು ಪ್ರಗತಿ ಸಂಸ್ಥೆಯ ಅಧ್ಯಕ್ಷ ಮಾದಂಡ ಪೂವಯ್ಯ ವಹಿಸಿದ್ದರು. ಆಡಳಿತಾಧಿಕಾರಿ ತುಂಗಾ ಪೂವಯ್ಯ, ಮುಖ್ಯೋಪಾಧ್ಯಾಯಿನಿ ಕಾವೇರಮ್ಮ ಉಪಸ್ಥಿತರಿದ್ದರು.

ಕೂಡಿಗೆ: ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ಸುಗಮ ವಾಹನ ಸಂಚಾರಕ್ಕೆ ಸಹಕರಿಸಬೇಕು ಎಂದು ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ ತಿಳಿಸಿದರು.

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಕೂಡಿಗೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾ ಸುರಕ್ಷಾ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ಪಾಲಿಸಲು ಅಸಡ್ಡೆತನ ತೋರುತ್ತಿದ್ದಾರೆ. ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಹಲವು ಸಾವು ನೋವುಗಳು ಉಂಟಾಗುತ್ತಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು.

ಯಾರೇ ಅಪಘಾತ ಮತ್ತು ಇನ್ನಿತರ ತೊಂದರೆಗೆ ಸಿಲುಕಿದ ಸಂದರ್ಭ ಎಫ್.ಐ.ಆರ್. ಎಂಬ ಅಪ್ಲಿಕೇಷನನ್ನು ಬಳಸಿ ಪೊಲೀಸರ ಗಮನಕ್ಕೆ ತರಬಹುದಾಗಿದೆ. ಇದರಿಂದ ಸಾರ್ವಜನಿಕರ ತೊಂದರೆಗಳಿಗೆ ಬೇಗನೇ ಸ್ಪಂದಿಸಲು ಈ ಆಪ್ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೆ. ನಾಗರಾಜ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಮಹಲಿಂಗಯ್ಯ, ಉಪನ್ಯಾಸಕರಾದ ರಮೇಶ್, ಸತೀಶ್, ಮಹದೇವ್, ಸಂಚಾರಿ ಪೋಲೀಸ್ ಸಿಬ್ಬಂದಿ ಸಹದೇವ್, ಲೋಕೇಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ದಅವಾ ಫ್ರೆಂಡ್ಸ್ ಅಸೋಸಿಯೇಶನ್ ವತಿಯಿಂದ ಜ.6ರ ಸಂಜೆ 3 ಗಂಟೆಗೆ ‘ಮನೋವಿಜ್ಞಾನ ತರಬೇತಿ’ ಹಾಗೂ ‘ಕಥಾ ಪ್ರಸಂಗ’ ನಡೆಸಲು ತೀರ್ಮಾನಿಸಲಾಗಿದೆ.

ದಅವಾ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಂ. ಅಶ್ರಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು ಮನೋವಿಜ್ಞಾನ ತರಬೇತಿ ನಡೆಸಿಕೊಡಲು ಕಣ್ಣೂರಿನ ಸಜೀಉಲ್ ರಹಮಾನ್ ಹಾಗೂ ಕಥಾ ಪ್ರಸಂಗ ನಡೆಸಲು ತೋಟಿಕ್ಕಲ್‍ನ ಝುಬೈರ್ ಮಾಸ್ಟರ್ ಅವರನ್ನು ಕರೆಸುವಂತೆ ಸಭೆ ತೀರ್ಮಾನಿಸಿತು.

ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಶಾರದಾಶ್ರಮದ ಅಧ್ಯಕ್ಷ ಬೋಧ ಸ್ವರೂಪ ನಂದಾಜಿ ಮಹರಾಜ್, ಗೋಣಿಕೊಪ್ಪ ಶಾಫಿ ಜುಮಾ ಮಸೀದಿಯ ಖತೀಬ ಮುಹಮ್ಮದ್ ಫೈಝಿ, ಕೊಡಗು ಜಿಲ್ಲಾ ಪಂಚಾಯತ್‍ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ, ಪೊನ್ನಂಪೇಟೆ ಸಾಯಿ ಶಂಕರ್ ಟ್ರಸ್ಟ್‍ನ ಅಧ್ಯಕ್ಷ ಝರು ಗಣಪತಿ, ಶಾಫಿ ಜಮಾಹತ್‍ನ ಅಧ್ಯಕ್ಷ ಸಿ.ಪಿ.ಎಂ. ಬಶೀರ್, ನೂರುಲ್ ಹುದ ಮದ್ರಸ ಪ್ರಾಧ್ಯಾಪಕ ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಗ್ರಾಮ ಪಂಚಾಯಿತಿ ಬಿ.ಎನ್. ಪ್ರಕಾಶ್, ಪ್ರಮೋದ್ ಗಣಪತಿ, ಕೆ.ಪಿ. ಬೋಪಣ್ಣ, ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್, ಠಾಣಾಧಿಕಾರಿ ಬಿ.ಎಸ್.ಶ್ರೀಧರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ತನ್ವೀರ್ ಅಹಮ್ಮದ್, ಅನಾಫಿ ಜಾಮಿಯ ಮಸೀದಿಯ ಅಧ್ಯಕ್ಷ ಆಸಿಪ್ ಮುನೀಬ್, ನಿವೃತ್ತ ಶಿಕ್ಷಕ ದೇವಯ್ಯ, ಪಿಡಿಒ ಚಂದ್ರಮೌಳಿ, ಎಂ.ಕೆ.ಅಬೂಟಿ, ಪತ್ರಕರ್ತ ಹೆಚ್.ಕೆ. ಜಗದೀಶ್ ಅವರುಗಳು ಪಾಲ್ಗೊಳ್ಳುವರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ವಿ.ರಫೀಕ್, ಜಂಟಿ ಕಾರ್ಯದರ್ಶಿ ಫೈಝಲ್, ಖಜಾಂಚಿ ಸಂಶುದ್ದೀನ್, ಉಪಾಧ್ಯಕ್ಷ ಆಶ್ರಫ್ ಉಪಸ್ಥಿತರಿದ್ದರು.

ಕೂಡಿಗೆ: ಕೂಡಿಗೆಯ ಮೊರಾರ್ಜಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಪೋಷಕರ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಹಾಜರಿದ್ದ ಪೋಷಕರು ತಮ್ಮ ಮಕ್ಕಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಶಾಲೆಯ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳ ಪ್ರಗತಿಗೆ ಪೋಷಕರ ಸಹಕಾರ ಅತಿಮುಖ್ಯವಾದದ್ದು. ಪೋಷಕರು ವಿದ್ಯಾರ್ಥಿಗಳ ಚಲನ ವಲನಗಳ ಮೇಲೆ ಗಮನವಿಟ್ಟು ಅವರ ಶ್ರೇಯಸ್ಸಿಗೆ ಶ್ರಮಿಸಬೇಕು. ವಿದ್ಯಾರ್ಥಿಗಳು ಪಾಠಪ್ರವಚನದ ಕಡೆಗೆ ಹೆಚ್ಚಿನ ಗಮನ ವಹಿಸುವ ಮೂಲಕ ಮುಂಬರುವ ಪರೀಕ್ಷೆಯನ್ನು ಎದುರಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಲು ಪ್ರಯತ್ನಿಸಬೇಕು. ಸರ್ಕಾರವು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ವಿದ್ಯಾರ್ಥಿ ಪರಿಷತ್ತಿನ ಸದಸ್ಯರುಗಳು ಹಾಗೂ ಶಾಲಾ ಶಿಕ್ಷಕ ವೃಂದ ಹಾಜರಿದ್ದರು.

ಮಡಿಕೇರಿ: ಕುಶಾಲನಗರದ ಜ್ಞಾನಗಂಗಾ ವಸತಿ ಶಾಲೆಯ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಫರ್ಧೆಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿನಿಯರಾದ ಕೆ.ಪಿ. ಚೋಂದಮ್ಮ, ಗಾಯನ ಬೋಪಣ್ಣ, ಗಾನವಿ ಬೋಪಣ್ಣ ಇವರುಗಳು ಭಾಗವಹಿಸಿ ದ್ವಿತೀಯ ಸ್ಥಾನಗಳಿಸಿದ್ದಾರೆ.

ಶಾಲಾ ಪ್ರಾಂಶುಪಾಲ ಪಿ.ಎನ್. ವಿನೋದ್ ಮತ್ತು ದೈಹಿಕ ಶಿಕ್ಷಕ ಕೆ.ಜಿ. ಮಿಥುನ್ ಮಾರ್ಗದರ್ಶನ ನೀಡಿದ್ದರು.ಮಡಿಕೇರಿ: ಭಾ.ಕೃ.ಅ.ಪ.-ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳದಲ್ಲಿ 15 ದಿನಗಳ ಸ್ವಚ್ಛತಾ ಪಕ್ವಡವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ರಾಜಾಸೀಟಿನ ಒಳ ಆವರಣದಲ್ಲಿದಂತಹ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ತೆಗೆಯುವ ಮೂಲಕ ಪ್ರವಾಸಿಗರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು. ಹಾಗೆಯೇ ಶಾಲಾ ವಿದ್ಯಾರ್ಥಿಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ರಸಪ್ರಶ್ನೆ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮಡಿಕೇರಿ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಇತ್ತೀಚೆಗೆ ಬೆಟ್ಟಗೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವ ಜನತೆ’ ಎಂಬ ಧ್ಯೇಯದೊಂದಿಗೆ ತಾ.ಪಂ. ಸದಸ್ಯ ಕೊಡಪಾಲ ಗಣಪತಿ ಅವರು ಶಿಬಿರವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಬೆಟ್ಟಗೇರಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್