ಕುಶಾಲನಗರ, ಡಿ. 27: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಪರಿಶೀಲನೆಗೆ ಮುಂದಾದ ಕೇಂದ್ರ ಸರ್ಕಾರದ ಮಹಾಲೆಕ್ಕಪಾಲನಾ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಸ್ಥಳೀಯ ವರ್ತಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ವಾಣಿಜ್ಯ ಉದ್ದೇಶದ ಮಳಿಗೆಗಳು, ಶಾಪಿಂಗ್ ಕಾಂಪ್ಲೆಕ್ಸ್‍ಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಸ್ಥಳೀಯ ಆಡಳಿತದ ಷರತ್ತು, ನಿಯಮಗಳ ಅನುಸಾರ ಕಟ್ಟಡಗಳು ನಿರ್ಮಾಣಗೊಂಡಿದೆಯೇ, ರಸ್ತೆ, ಚರಂಡಿ, ವಿದ್ಯುತ್ ಕಂಬಗಳು, ಕುಡಿವ ನೀರಿನ ಸರಬರಾಜು, ಪಾದಚಾರಿಗಳ ಮಾರ್ಗ ಹೀಗೆ ಹತ್ತು ಹಲವು ಉದ್ದೇಶಗಳಿಗೆ ನಿಯಮಿತ ಜಾಗವನ್ನು ಬಿಡಲಾಗಿದೆಯೇ, ಪಂಚಾಯಿತಿಗೆ ತೆರಿಗೆ ಪಾವತಿಸಲಾಗುತ್ತಿದೆಯೇ ಎಂಬಿತ್ಯಾದಿ ಪ್ರಕರಣಗಳನ್ನು ಪತ್ತೆ ಹಚ್ಚಲು ಪಂಚಾಯಿತಿಗೆ ಆಗಮಿಸಿದ ಲೆಕ್ಕಪರಿಶೋಧನೆ ತಂಡ ಕೆಲವು ವಾಣಿಜ್ಯ ಕಟ್ಟಡಗಳ ಪರಿಶೀಲನೆಗೆ ಖುದ್ದು ಮುಂದಾಗಿತ್ತು.

ಬೆಂಗಳೂರಿನಿಂದ ಆಗಮಿಸಿದ ಲಿಲೀಂದ್ರ ಹಾಗೂ ಅಮಿತ್ ಕುಮಾರ್ ಎಂಬ ಅಧಿಕಾರಿಗಳು ಪಂಚಾಯಿತಿ ಸಿಬ್ಬಂದಿಗಳೊಡಗೂಡಿ ಐಬಿ ರಸ್ತೆಯ ಕೆಲವು ವಾಣಿಜ್ಯ ಮಳಿಗೆಗಳಿಗೆ ತೆರಳಿ ಏಕಾಏಕಿ ಟೇಪ್ ಹಿಡಿದು ಅಳತೆ ಮಾಡಲು ಮುಂದಾದ ಸಂದರ್ಭ ವರ್ತಕರು ಅಸಮಾಧಾನ ವ್ಯಕ್ತಪಡಿಸಿದರು.

ಕಟ್ಟಡ ಮಾಲಿಕರಿಗೆ ಕನಿಷ್ಟ ಮಾಹಿತಿ ನೀಡದೆ, ಅನುಮತಿ ಪಡೆಯದೆ ಒಳ ನುಗ್ಗಿ ಅಳತೆ ಮಾಡಲು ಮುಂದಾದ ಅಧಿಕಾರಿಗಳನ್ನು ವರ್ತಕರು ತರಾಟೆಗೆ ತೆಗೆದುಕೊಂಡರು. ನೀವು ಯಾರೆಂದು ಪ್ರಶ್ನಿಸಿದಾಗ ಅಧಿಕಾರಿಗಳು ಸರಿಯಾಗಿ ವರ್ತಿಸದೇ ಉಡಾಫೆಯಿಂದ ವರ್ತಿಸಿದರೆಂದು ಆರೋಪಿಸಿ ಅಧಿಕಾರಿಗಳ ಕಾರ್ಯಕ್ಕೆ ತಡೆಯೊಡ್ಡಿ ವಾಪಸ್ ಕಳುಹಿಸಿದರು.

ಬಳಿಕ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಕಟ್ಟಡಗಳ ಮಾಲಿಕರಿಂದ ಮಾಹಿತಿ ಪಡೆದು ಅಧಿಕಾರಿಗಳಿಂದಲೂ ಮಾಹಿತಿ ಪಡೆದು ಪರಿಸ್ಥಿತಿ ತಿಳಿಗೊಳಿಸಿದರು.

ಕುಶಾಲನಗರ ಮುಖ್ಯಾಧಿಕಾರಿ ಸ್ಥಳದಲ್ಲಿ ಇಲ್ಲದ ಕಾರಣ ಮತ್ತೊಮ್ಮೆ ಬಂದು ತಮ್ಮ ಕೆಲಸ ಮಾಡುವದಾಗಿ ಹೇಳಿ ಅಧಿಕಾರಿಗಳು ತೆರಳಿದರು.