(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಡಿ. 27: ಮಹಿಳೆ ಮನಸ್ಸು ಮಾಡಿದ್ದಲ್ಲಿ ಯಶಸ್ಸು ಸಾಧಿಸುತ್ತಾಳೆ ಎಂಬದಕ್ಕೆ ದ. ಕೊಡಗಿನ ಬಾಳೆಲೆ ಸಮೀಪದ ನಲ್ಲೂರು ಗ್ರಾಮದ ರೈತ ಮಹಿಳೆ ಪುಚ್ಚಿಮಾಡ ಕವಿತ ಉದಾಹರಣೆ. ಬಿಡುವಿನ ಸಮಯವನ್ನು ವ್ಯರ್ಥ ಮಾಡದೇ ಕೃಷಿಯಲ್ಲಿ ಲಾಭದಾಯಕ ವಾಗಿ ಫಸಲು ಬೆಳೆಯಲು ತೀರ್ಮಾನಿಸಿದ ಅವರು ನೇಂದ್ರ ಬಾಳೆಯನ್ನು ಬೆಳೆಯುವ ನಿರ್ಧಾರಕ್ಕೆ ಬಂದರು.
ಮೂರು ಎಕರೆ ಜಮೀನಿನಲ್ಲಿ ಅಡಿಕೆ ಬೆಳೆದಿದ್ದ ಜಾಗದ ಉಳಿದ ಭಾಗವನ್ನು ಬಾಳೆ ನೆಡಲು ಯೋಜನೆ ರೂಪಿಸಿ 3500 ಬಾಳೆಗಿಡಗಳನ್ನು ಕೃಷಿ ಮಾಡಿ ಇದೀಗ ಸ್ವಲ್ಪ ದಿನದಲ್ಲಿ ಫಸಲು ನೀಡಲಿದೆ.
ಭತ್ತದ ಗದ್ದೆಯಲ್ಲಿ ಎರಡು ವರ್ಷಗಳಿಂದ ಮಳೆಯಿಲ್ಲದೆ ಭತ್ತದ ಕೃಷಿ ನಿಂತುಹೋದ ಹಿನ್ನೆಲೆಯಲ್ಲಿ ಗದ್ದೆಯನ್ನು ಹಾಳು ಮಾಡಬಾರ ದೆಂಬ ಉದ್ದೇಶದಿಂದ ಭೂಮಿ ಯನ್ನು ಹದಗೊಳಿಸಿ ಅಡಿಕೆ ಗಿಡ ನೆಡಲು ತೀರ್ಮಾನಿಸಿದರು. ನಂತರ ಅಡಿಕೆ ಗಿಡದ ಮಧ್ಯೆ ಬಾಳೆ ಬೆಳೆದರೆ ಅನುಕೂಲವಾಗುವದೆಂಬ ದೃಷ್ಠಿ ಕೋನದಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಾಯಕ ಆಡಳಿತಾಧಿಕಾರಿ ಎಸ್.ಸಿ. ಹೇಮಂತ್ ಕುಮಾರ್ ಸಲಹೆ ಪಡೆದು ಬಾಳೆ ಬೆಳೆಯಲು ನಿರ್ಧರಿಸಿದರು.
ಈ ಸಂದರ್ಭ ಉಡುಪಿ ಅನ್ನಪೂರ್ಣೆಶ್ವರಿ ಪ್ರಯೋಗಾಲಯ ದಿಂದ ಬೀಜ ತಂದ ಇವರು ತೋಟದ ಜಾಗದಲ್ಲಿ ನರ್ಸರಿ ಪ್ಯಾಕೆಟ್‍ಗಳನ್ನು ಮಾಡಲಾರಂಭಿಸಿ ದರು. ಇವರ ಪತಿ ಪುಚ್ಚಿಮಾಡ ಸುನೀಲ್ ಪತ್ನಿಯ ಕೃಷಿಗೆ ಸಾಥ್ ನೀಡಿದರು.
ಬಾಳೆ ಅಂಗಾಂಶ ಕೃಷಿಯ ಬಗ್ಗೆ ಮಾಹಿತಿ ಪಡೆದ ಇವರು 200ಕ್ಕೂ ಅಧಿಕ ಸಣ್ಣ ಸಣ್ಣ ಜಟ್‍ಗಳನ್ನು ಅಳವಡಿಸಿ ನೀರಾವರಿ ಯೋಜನೆ ಮಾಡಿಕೊಂಡರು. ನಂತರ ಒಂದೂವರೆ ಅಡಿಯ ಸುತ್ತಳತೆಯಲ್ಲಿ ಗುಂಡಿ ತೆಗೆದು ಅಗತ್ಯ ರಸಗೊಬ್ಬರ ಗಳನ್ನು ಗುಂಡಿಗೆ ಸುರಿಯುವ ಮೂಲಕ ನರ್ಸರಿಯಲ್ಲಿ ಬೆಳೆದಿದ್ದ ಒಂದು ಅಡಿ ಎತ್ತರದ ಬಾಳೆ ಗಿಡವನ್ನು ನೆಡಲಾರಂಭಿಸಿದರು. ಮೇ ತಿಂಗಳ ಕೊನೆಯ ವಾರದಲ್ಲಿ ಬಾಳೆ ಗಿಡವನ್ನು ನೆಟ್ಟ ಇವರು ವಾರಕ್ಕೆ ಮೂರು ಬಾರಿ ನೀರನ್ನು ಜಟ್ ಮೂಲಕ ಹಾಯಿಸಿ ದರು. ನಿಗದಿತ ಸಮಯಕ್ಕೆ ಗೊಬ್ಬರ ಗಳನ್ನು ಹಾಗೂ ಕೀಟ ಭಾದೆ ತಗುಲ ದಂತೆ ಕ್ರಿಮಿನಾಶಕ ಸಿಂಪಡಿಸಿದರು. ಇದೀಗ ಫಸಲು ಬಿಡಲಾರಂಭಿಸಿದ್ದು ಫೆಬ್ರವರಿ ಕೊನೆಯ ವಾರದಲ್ಲಿ ಫಸಲು ಕೈ ಸೇರಲಿದೆ.
ಬಾಳೆ ಗಿಡಕ್ಕೆ ನೀಡುವ ಗೊಬ್ಬರ,ನೀರಿನಿಂದ ಮೂರು ಏಕರೆಯಲ್ಲಿ ಬೆಳೆದಿರುವ ಅಡಿಕೆ ಗಿಡವೂ ಕೂಡ ಉತ್ತಮವಾಗಿ ಬೆಳೆಯುತ್ತಿದ್ದು ಒಂದೇ ಖರ್ಚಿನಲ್ಲಿ ಬಾಳೆ ಹಾಗೂ ಅಡಿಕೆ ಬೆಳೆಯುತ್ತಿವೆ. ಪ್ರತಿ ನಿತ್ಯ ಈ ತೋಟದಲ್ಲಿ ಆಯ್ದ ಕೆಲವು ಕಾರ್ಮಿಕರೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿರುವ ಕವಿತ ಬಾಳೆ ತೋಟ ನೋಡುವದೇ ಒಂದು ಹೆಮ್ಮೆ. ಬಾಳೆ ಕೃಷಿಗೆ ಸಂಬಂಧಿಸಿದಂತೆ ಕವಿತ ಅವರನ್ನು 9448140463 ಸಂಪರ್ಕಿಸಬಹುದು.