ಕೂಡಿಗೆ, ಡಿ. 27: ಮುಳ್ಳುಸೋಗೆ ಗ್ರಾ.ಪಂ. ಸಾಮಾನ್ಯ ಸಭೆಯು ಸದಸ್ಯರ ನಡುವೆ ಹೊಂದಾಣಿಕೆಯಿಲ್ಲದೇ, ಇಂದೂ ಕೂಡಾ ಮುಂದೂಡಲ್ಪಟ್ಟ ಘಟನೆ ನಡೆದಿದೆ.
ಒಂದೇ ತಿಂಗಳಿನಲ್ಲಿ ಎರಡು ಬಾರಿ ಸಭಾತ್ಯಾಗವಾಗಿದ್ದು, ಕಳೆದ ಮೂರು ತಿಂಗಳುಗಳಿಂದ ಇದು ಮುಂದುವರಿಯುತ್ತಿದೆ.
ಈ ಗ್ರಾ.ಪಂ.ಯಲ್ಲಿ ಒಟ್ಟು 23 ಸದಸ್ಯರಿದ್ದು, ಇಂದಿನ ಸಭೆಯಲ್ಲಿ 14 ಸದಸ್ಯರು ಹಾಜರಿದ್ದರು. ಸಭೆಯಲ್ಲಿ ಪಿಡಿಓ ಸ್ವಾಗತ ಬಯಸುವ ಸಂದರ್ಭ ಉಪಾಧ್ಯಕ್ಷ ಸೇರಿದಂತೆ ಪಂಚಾಯಿತಿಯ ಹಿರಿಯ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.
ಬಹುಮತಕ್ಕೆ 12 ಜನ ಸದಸ್ಯರ ಅವಶ್ಯಕತೆಯಿದ್ದು, ಬಹುಮತಕ್ಕಾಗಿ ಒಂದು ಗಂಟೆ ಸಮಯ ಕಾದರೂ ಯಾರೂ ಕೂಡಾ ಸಭೆಗೆ ಹಾಜರಾಗದ ಹಿನ್ನಲೆ ಸಭೆಯನ್ನು ಮುಂದೂಡಲಾಯಿತು.
ಇದೇ ರೀತಿ ಮುಂದುವರೆದರೆ ಗ್ರಾಮದ ಪ್ರಗತಿ ಹೇಗೆ ಸಾಧ್ಯ ಎಂದು ಗ್ರಾಮಸ್ಥರಲ್ಲಿ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ, ಗ್ರಾಮದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಹಾಗೂ ಗ್ರಾಮಸ್ಥರ ಅನೇಕ ಅರ್ಜಿಗಳು ಸಭೆಗೆ ಬಂದಿದ್ದು, ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.