ಮಡಿಕೇರಿ, ಡಿ. 28: ಕೊಡಗಿನಲ್ಲಿ ಉಂಟಾಗಿದ್ದ ಪ್ರವಾಹ ಹಾಗೂ ಭೂಕುಸಿತದಿಂದ ಸಂತ್ರಸ್ತರಾದವರ ಸಂಕಷ್ಟಕ್ಕೆ ನೆರವಾಗುವಂತೆ ಕರ್ನಾಟಕದ ಜನರಿಗೆ ಟಿವಿ9 ಕರೆ ನೀಡಿತ್ತು. ಈ ಕರೆಗೆ ರಾಜ್ಯದ ಮೂಲೆಮೂಲೆ ಯಿಂದ ಸಾವಿರಾರು ಕೈಗಳು ಸ್ಪಂದಿಸಿದ್ದವು. ಆ ನೆರವನ್ನು ಸಂತ್ರಸ್ತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲು ಟಿವಿ9 ಮುಂದಾಗಿದ್ದು, ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯಲ್ಲಿ ಕಲಿಯುತ್ತಿರುವ 62 ವಿದ್ಯಾರ್ಥಿನಿಯರನ್ನು ದತ್ತು ಪಡೆದುಕೊಂಡಿತು.

ಬುಧವಾರ ರಾತ್ರಿ ಸಾಯಿ ಶಂಕರ ಶಾಲಾ ಆವರಣದಲ್ಲಿ ನಡೆದ `ಮುಂದೆ ಸಾಗು ಮಗಳೇ...' ಕಾರ್ಯಕ್ರಮದಲ್ಲಿ ರೂ. 50 ಲಕ್ಷದ ಚೆಕ್ ಅನ್ನು ಟಿವಿ9 ನಿರ್ದೇಶಕ ಮಹೇಂದ್ರ ಮಿಶ್ರಾ ಅವರು ಸಾಯಿ ಶಂಕರ ವಿದ್ಯಾಸಂಸ್ಥೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಇದೇ ವೇಳೆ ಒಪ್ಪಂದ ಪತ್ರಕ್ಕೂ ಸಹಿ ಹಾಕಲಾಯಿತು.

ಆ ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಊಟ, ವಸತಿ ಎಲ್ಲವನ್ನೂ ಕೂಡ ಟಿವಿ9 ಸಂಸ್ಥೆ ಮುಂದಿನ ಮೂರು ವರ್ಷಗಳ ಕಾಲ ನೋಡಿಕೊಳ್ಳಲಿದೆ ಎಂದು ಅಭಯ ನೀಡಲಾಯಿತು. ಪ್ರಕೃತಿ ಮುನಿಸಿಕೊಂಡರೂ ಕರುನಾಡಿನ ಸಹೃದಯಿಗಳ ಸಹಕಾರದಿಂದ ಪುಟ್ಟ ಮಕ್ಕಳ ವಿದ್ಯಾಭ್ಯಾಸ ನಿರಂತರವಾಗಿ ಮುಂದುವರೆಯಲಿ ಎಂದು ಟಿವಿ9 ನಿರ್ದೇಶಕ ಮಹೇಂದ್ರ ಮಿಶ್ರಾ ಹಾರೈಸಿದರು.

ಆಗ ನೆರದವರ ಕಣ್ಣಾಲಿಗಳೂ ತೇವಗೊಂಡವು. ನೂರಾರು ಮಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕೊಡಗು ಜಿಲ್ಲೆಗೆ ಪ್ರಕೃತಿಯೇ ವರ. ಆದರೆ, ಅದೇ ಪ್ರಕೃತಿ 2018ರ ಮಧ್ಯಭಾಗದಲ್ಲಿ ಮುನಿದಿತ್ತು. ಇದರಿಂದ ನೂರಾರು ಮಂದಿ ಆಶ್ರಯ ಕಳೆದುಕೊಂಡಿದ್ದರೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗಿತ್ತು. ಸಾಯಿ ಶಂಕರ್ ಶಾಲೆಯವರು ಸಂತ್ರಸ್ತರ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಈಗ ಟಿವಿ9 ಸಂಸ್ಥೆಯು 62 ವಿದ್ಯಾರ್ಥಿನಿಯರನ್ನು ದತ್ತು ಪಡೆದು ಶೈಕ್ಷಣಿಕ ಭವಿಷ್ಯ ರೂಪಿಸಲು ಮುಂದಾಗಿದೆ.

ಸಾಧಕರಿಯರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನೋಸ್ಥೈರ್ಯ ಹೆಚ್ಚಿಸಲು ಕೊಡಗಿನ 9 ಮಂದಿ ಮಹಿಳಾ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಿನಿತಾರೆ ರಶ್ಮಿಕಾ ಮಂದಣ್ಣ, ಐಆರ್‍ಎಸ್ ಆಫೀಸರ್ ಪ್ರೀತ್, ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ ಅನುಪಮಾ, ಸಾಹಿತಿಗಳಾದ ಶೋಭಾ ಸುಬ್ಬಯ್ಯ ಹಾಗೂ ಗೀತಾ ಮಂದಣ್ಣ, ಮೇಜರ್ ಈಶ್ವರಿ, ಉದ್ಯಮಿ ಫ್ಯಾನ್ಸಿ ಗಣಪತಿ, ನ್ಯಾಯಾಧೀಶೆ ಶಿಲ್ಪಾ ಗಣೇಶ್, ಶಿಕ್ಷಕಿ ರೇವತಿ ರಮೇಶ್ ಅವರಿಗೆ ಟಿವಿ 9 ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್, ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಯೋಗಗುರು ವಚನಾನಂದ ಸ್ವಾಮೀಜಿ, ಟಿವಿ9 ನಿರ್ದೇಶಕ ಮಹೇಂದ್ರ ಮಿಶ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಟಿವಿ9 ಕೊಡಗು ಎಜುಕೇಷನ್ ಫಂಡ್‍ನ ಮೇಲುಸ್ತುವಾರಿ ಸದಸ್ಯರಾದ ಜಿ. ಚಿದ್ವಿಲಾಸ್, ಕೆ.ಕೆ. ಮಹೇಶ್ ಕುಮಾರ್ ಹಾಗೂ ಮಂಜು ಚಿಣ್ಣಪ್ಪ, ಟಿವಿ9 ಇನ್ ಪುಟ್ ಚೀಪ್ ಜಗದೀಶ್ ಬೆಳ್ಳಿಯಪ್ಪ, ಜಿಲ್ಲಾ ವರದಿಗಾರ ಪ್ರಶಾಂತ್ ಮೂಡ್ಗೆರೆ ಸೇರಿದಂತೆ ಅನೇಕರು ಹಾಜರಿದ್ದರು.

ಸಾಂಸ್ಕೃತಿಕ ರಂಗು: ಈ ವಿಶೇಷ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಚಿತ್ರ ನಟಿಯರಾದ ರಾಗಿಣಿ ದ್ವಿವೇದಿ , ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ ಸಿನಿಮಾ ಹಾಡಿಗೆ ನೃತ್ಯ ಪ್ರಸ್ತುತಪಡಿಸಿದರು.

ಹಾಸ್ಯ ಕಲಾವಿದರಾದ ಪ್ರೊ.ಕೃಷ್ಣೇಗೌಡ, ತಬಲಾ ನಾಣಿ, ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ನಯನಾ, ಗೋವಿಂದೇಗೌಡ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.