ಕುಶಾಲನಗರ, ಡಿ. 28: ಶಾಲಾ ಶಿಕ್ಷಕನೋರ್ವ ವಿದ್ಯಾರ್ಥಿನಿಯ ರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು, ಸಾರ್ವಜನಿಕರು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಸಮೀಪದ ಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕ ಸ್ವಾಮಿ ಎಂಬಾತ ವಿದ್ಯಾರ್ಥಿನಿಯರ ಮೈಮುಟ್ಟಿ ಅನುಚಿತವಾಗಿ ವರ್ತಿಸುತ್ತಾರೆ. ಅಶ್ಲೀಲ ಪದಗಳನ್ನು ಬಳಸಿ ಕಿರುಕುಳ ನೀಡುತ್ತಾರೆ ಎಂದು ವಿದ್ಯಾರ್ಥಿನಿಯರ ಆರೋಪದ ಮೇರೆಗೆ ಪೋಷಕರು ಮತ್ತು ಸಾರ್ವಜನಿಕರು ಶಾಲೆಯ ಎದುರು ಜಮಾಯಿಸಿದ್ದರು. ಶಿಕ್ಷಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ತಮ್ಮ ಆಕ್ರೋಷ ವ್ಯಕ್ತಪಡಿಸಿದರು. ಈ ಸಂದರ್ಭ ಶಾಲೆಯ 10 ಕ್ಕೂ ಅಧಿಕ ವಿದ್ಯಾರ್ಥಿನಿಯರು ಕೂಡ ಶಿಕ್ಷಕನ ಕೀಟಲೆಯಿಂದ ನೊಂದು ಹೋಗಿ ಶಾಲೆಗೆ ತೆರಳುವದಿಲ್ಲ. ಶಿಕ್ಷಕನನ್ನು ಬೇರೆಗೆ ವರ್ಗಾಯಿಸುವವರೆಗೆ ತಾವು ತರಗತಿಗಳಿಗೆ ಹಾಜರಾಗುವದಿಲ್ಲ ಎಂದು ಪಟ್ಟು ಹಿಡಿದರು. ಇದೇ ಸಂದರ್ಭ ಸ್ಥಳಕ್ಕೆ ಆಗಮಿಸಿದ ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ನೊಂದ ವಿದ್ಯಾರ್ಥಿನಿಯರೊಡನೆ ಚರ್ಚಿಸಿ ಅವರಿಂದ ಮಾಹಿತಿ ಪಡೆದುಕೊಂಡರು. ಪಿರಿಯಾಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಕೂಡ ಶಾಲೆಗೆ ಭೇಟಿ ನೀಡಿದ್ದು ತಪಿತಸ್ಥ ಶಿಕ್ಷಕನ ವಿರುದ್ಧ ಅಗತ್ಯ ಕ್ರಮಕೈಗೊಳ್ಳುವ ಭರವಸೆ ಹಿನ್ನೆಲೆಯಲ್ಲಿ ಪೋಷಕರು ಸ್ಥಳದಿಂದ ತೆರಳಿದರು.
ಈ ಸಂಬಂಧ ಶಿಕ್ಷಕನ ವಿರುದ್ಧ ಯಾವದೇ ದೂರು ದಾಖಲಾಗಿಲ್ಲ.