ಗೋಣಿಕೊಪ್ಪ ವರದಿ, ಡಿ. 28 : ಹಕ್ಕುಪತ್ರ ನೀಡಿರುವ ಜಾಗದಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿ, ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಕುಂದ ಗ್ರಾಮದ ಗಿರಿಜನ ನಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರು ದಿನ ಪೂರೈಸಿದೆ.

ಬುಡಕಟ್ಟು ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪೊನ್ನಂಪೇಟೆಯಲ್ಲಿರುವ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು 100 ಕ್ಕೂ ಹೆಚ್ಚು ನಿವಾಸಿಗಳು ಪ್ರತಿಭಟನೆ ಮುಂದು ವರಿಸಿದ್ದಾರೆ. ತಾ. 26 ರಿಂದ ಪ್ರತಿಭಟನೆಯಲ್ಲಿ ತೊಡಗಿರುವ ನಿವಾಸಿಗಳು, ಅಲ್ಲಿನ ಮೂಲಭೂತ ಸೌಕರ್ಯ ನೀಡಿ ಜೀವನ ಸಾಗಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

2016 ರಲ್ಲಿ ಕುಂದ ಗ್ರಾಮದ ಸರ್ವೆ ನಂ 92/1 ರಲ್ಲಿ 6 ಎಕರೆ ಭೂಮಿಯನ್ನು ಜಿಲ್ಲಾಡಳಿತ ನಮಗೆ ಹಕ್ಕುಪತ್ರ ನೀಡಿ ಆದೇಶ ನೀಡಿದೆ. ತಾಲೂಕು ಪಂಚಾಯ್ತಿ ಕಾರ್ಯನಿರ್ವ ಹಣಾಧಿಕಾರಿ ಅವರ ಹೆಸರಿನಲ್ಲಿ ಜಾಗ ನೋಂದಣಿಯಾಗಿದ್ದು, ಪುನರ್ವಸತಿ ಕಲ್ಪಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹಕ್ಕುಪತ್ರ ವಿತರಣೆ ಹೊರತು, ರಸ್ತೆ, ಚರಂಡಿ, ಕುಡಿಯುವ ನೀರು, ಭೂಮಿ ಸಮತಟ್ಟು ಮಾಡುವದು, ಗಡಿ ಗುರುತಿಸುವ ಕೆಲಸ ನಡೆದಿಲ್ಲ. ನಿವಾಸಿಗಳಿಗೆ ಹೊಸ ಪಡಿತರ ಚೀಟಿ ವಿತರಣೆ ಮಾಡಿಲ್ಲ ಇದರಿಂದಾಗಿ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದೇವೆ ಎಂದು ನಿವಾಸಿಗಳು ನೋವು ತೋಡಿಕೊಂಡರು.

ಅಲ್ಲಿ ಒತ್ತುವರಿ ಮಾಡಿಕೊಂಡಿರು ವದನ್ನು ತೆರವುಗೊಳಿಸಿ, ನಮಗೆ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿದರು. ಪುನರ್ವಸತಿ ಕಾರ್ಯ ಆರಂಭಿಸುವವರೆಗೆ ಅಹೋರಾತ್ರಿ ಧರಣಿ ನಡೆಸುವದಾಗಿ ಘೋಷಿಸಿದರು. ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಬುಡಕಟ್ಟು ಕಾರ್ಮಿಕರ ಸಂಘದ ಸಂಚಾಲಕ ವೈ. ಬಿ. ಗಪ್ಪು ಮುಂದಾಳತ್ವದಲ್ಲಿ ಧರಣಿ ಮುಂದುವರಿದಿದೆ.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಗೋವಿಂದರಾಜು ಹಾಗೂ ಇಒ ಜಯಣ್ಣ ಆಗಮಿಸಿ 2 ದಿನಗಳಲ್ಲಿ ಸಮಸ್ಯೆ ಪರಿಹಾರ ಮಾಡಿಕೊಡುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಜಾಗ ತೆರವುಗೊಳಿಸಿ, ಜಾಗವನ್ನು ಸಮತಟ್ಟು ಮಾಡಿಕೊಡಲಿ. ಅಲ್ಲಿವರೆಗೂ ನಾವು ಕದಲುವದಿಲ್ಲ ಎಂದು ಪಟ್ಟು ಹಿಡಿದರು. ಜಾಗದ ಮೇಲೆ ತಡೆಯಾಜ್ಞೆ ಇರುವದರಿಂದ ತೊಂದರೆಯಾಗಿದೆ ಎಂದು ಅಧಿಕಾರಿಗಳು ಮನವೋಲಿಕೆಗೆ ಮುಂದಾದರೂ ಜಗ್ಗದೆ ಪ್ರತಿಭಟನೆ ನಿರತರಾಗಿದ್ದಾರೆ.

-ಸುದ್ದಿಪುತ್ರ