ಗೋಣಿಕೊಪ್ಪ ವರದಿ, ಡಿ. 28 : ನಿರ್ಣಾಯಕ ಪಂದ್ಯದಲ್ಲಿ ಸೋಲನುಭವಿಸಿದ ಮಂಗಳೂರು ವಿಶ್ವವಿದ್ಯಾಲಯ ತಂಡವು ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯ ಮಹಿಳಾ ಹಾಕಿ ಟೂರ್ನಿಯಿಂದ ಹೊರ ಬಿದ್ದಿದೆ. ಸಬಲ್‍ಪುರಿ ವಿವಿ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ 0-1 ಗೋಲುಗಳ ಮೂಲಕ ಕೊಡಗಿನ ಆಟಗಾರರಿರುವ ಮಂಗಳೂರು ವಿಶ್ವವಿದ್ಯಾಲಯ ತಂಡವು ಸೋಲನುಭವಿಸಿತು. ಪರಿಣಾಮ ಟೂರ್ನಿಯಿಂದ ಹೊರ ಬಂದಿದೆ.
ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಬರ್ಕತುಲಹ್ ವಿವಿ ತಂಡವನ್ನು 3-1 ಗೋಲುಗಳ ಮೂಲಕ ಮಣಿಸಿ, ಕಪ್ ಗೆಲ್ಲುವ ಉತ್ಸಾಹದಲ್ಲಿತ್ತು. 2 ನೇ ಪಂದ್ಯದಲ್ಲಿ ಕುರುಕ್ಷೇತ್ರ ವಿವಿ ವಿರುದ್ಧ ಗೋಲು ದಾಖಲಿಸದೆ ಡ್ರಾ ಸಾಧನೆ ಮಾಡಿಕೊಂಡಿತ್ತು. ಡ್ರಾ ಸಾಧನೆ ಕ್ವಾರ್ಟರ್ ಫೈನಲ್ ಹಾದಿಗೆ ಮುಳುವಾಯಿತು. ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಕನಿಷ್ಟ ಡ್ರಾ ಫಲಿತಾಂಶ ಅವಶ್ಯಕತೆ ಇತ್ತಾದರೂ, ಸಬಲ್‍ಪುರಿ ವಿರುದ್ಧ ಸೋಲನುಭವಿಸಿ ನಿರಾಸೆಯಿಂದ ಹಿಂತಿರುಗಿದೆ. ಆ ಮೂಲಕ ಕಪ್ ಕನಸು ಭಗ್ನವಾಗಿದೆ. ತಂಡದಲ್ಲಿ ಪೂಜಾ, ಮಲ್ಲಮಾಡ ಲೀಲಾವತಿ, ಎಂ. ಪಾರ್ವತಿ, ಕುಮುದಾ, ಎನ್. ನಿವೇದಿತಾ, ಮಲ್ಲಮಾಡ ಲೀಲಾವತಿ, ಎಂ. ಎಸ್. ಕೀರ್ತನಾ, ಕೆ. ಎಸ್. ವಿದ್ಯಾ, ಪಿ. ಎ. ಪವಿತ್ರ, ಪ್ರಿಯಾದರ್ಶಿನಿ, ಸಿ. ಜೆ. ಸಂಗೀತಾ, ಕೆ.ಪಿ. ಮಿಲನಾ, ಆರ್. ಚೆಲುವಾಂಭ, ಪಿ. ಸಿ. ನಿಶಾ, ತಂಡದಲ್ಲಿದ್ದರು. ವ್ಯವಸ್ಥಾಪಕರಾಗಿ ಕಂಬೀರಂಡ ರಾಖಿ ಪೂವಣ್ಣ, ತರಬೇತುದಾರರಾಗಿ ಮೂಕಚಂಡ ನಿರನ್ ನಾಚಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಿಶೋರ್, ಸಹಾಯಕ ನಿರ್ದೇಶಕರಾಗಿ ರಮೇಶ್ ಕಾರ್ಯನಿರ್ವಹಿಸಿದ್ದರು. -ಸುದ್ದಿಪುತ್ರ