ಸೋಮವಾರಪೇಟೆ,ಡಿ.28: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿಗೆ ಸಮೀಪದ ಬಜೆಗುಂಡಿ ಗ್ರಾಮದಲ್ಲಿ ನಡೆದಿದೆ. ಜಿಯೋ ಟವರ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ, ಬಜೆಗುಂಡಿ ಗ್ರಾಮದ ಮಹದೇವಸ್ವಾಮಿ(41) ಮೃತಪಟ್ಟವರಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ, ಮನೆಯ ಬಿಟ್ಟಕ್ಕೆ ನೇಣು ಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಾರೆ.
ಮಹದೇವಸ್ವಾಮಿ ಅವರು ಕೆಲ ಸಮಯಗಳಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಇದರೊಂದಿಗೆ ಕೆಲ ವ್ಯಕ್ತಿಗಳು ನೀಡಬೇಕಾಗಿದ್ದ ಹಣವನ್ನು ಹಿಂದಿರುಗಿಸಲು ಸತಾಯಿಸುತ್ತಿದ್ದರಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಮೃತರ ಪತ್ನಿ ಆರ್. ವನಿತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.