ಮಡಿಕೇರಿ, ಡಿ. 27: ರೈತರು ಬೆಳೆದ ಭತ್ತವನ್ನು ಖರೀದಿ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖಾ ಉಪ ನಿರ್ದೇಶಕ ಸದಾಶಿವಯ್ಯ ಅವರನ್ನು ಅಮಾನತ್ತು ಮಾಡಲು ತಾನು ಶಿಫಾರಸ್ಸು ಮಾಡುವ ದಾಗಿ ಪ್ರವಾಸೋದ್ಯಮ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೇಳಿದರು.ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಆಹಾರ ಇಲಾಖೆ ರೈತರ ಭತ್ತ ಖರೀದಿಸುವಲ್ಲಿ ವಿಳಂಬ ಮಾಡುತ್ತಿದೆ. ಸಂಬಂಧಿಸಿದ ಅಧಿಕಾರಿ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪ ಮಾಡಿದರು. ಪ್ರತಿಕ್ರಿಯಿಸಿದ ಉಪ ನಿರ್ದೇಶಕ ಸದಾಶಿವಯ್ಯ ರೈತರ ನೋಂದಣಿ ಕಾರ್ಯ ನಡೆಯುತ್ತಿದೆ. ನೋಂದಣಿಗೆ ತಾ. 30ರವರೆಗೆ ಅವಕಾಶ ನೀಡಲಾಗಿದೆ ಎಂದಾಗ ಕೆಜಿಬಿ ಅಧಿಕಾರಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಮೈಸೂರು ಭಾಗದಲ್ಲಿ ಈಗಾಗಲೇ ಭತ್ತ ಖರೀದಿಸ ಲಾಗಿದೆ. ಆದರೆ ಕೊಡಗಿನಲ್ಲಿ ಮಾತ್ರ ಇಲ್ಲಸಲ್ಲದ ನೆಪವೊಡ್ಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಚಿವ ಮಹೇಶ್ ಅವರು ಸರ್ಕಾರದ ಆದೇಶದಂತೆ ತಾ. 15ರಿಂದ ನೀವು ಭತ್ತ ಖರೀದಿ ಮಾಡ ಬೇಕಿತ್ತು. ಈ ನಿಟ್ಟಿನಲ್ಲಿ ಏನೆ ಸಮಸ್ಯೆ ಗಳಿದ್ದರೂ ತನ್ನ ಅಥವಾ ಜಿಲ್ಲಾಧಿಕಾರಿ ಗಳ ಗಮನಕ್ಕೆ ತರಬೇಕಿತ್ತು. ಅದನ್ನು ಬಿಟ್ಟು ಈಗ ಇಲ್ಲಸಲ್ಲದ ಕಾರಣ ನೀಡುತ್ತಿದ್ದೀರಾ ಎಂದು ಕಿಡಿಕಾರಿ ದರಲ್ಲದೇ ನಿಮ್ಮನ್ನು ಸೇವೆಯಿಂದ ಅಮಾನತ್ತು ಮಾಡಲು ಶಿಫಾರಸ್ಸು ಮಾಡುತ್ತೇನೆ ಎಂದು ಹೇಳಿದರು.ಹುಲ್ಲು ಸಾಗಾಟ ಕ್ರಮ ಹುಲ್ಲು ಸಾಗಾಟವನ್ನು ಕೊಡಗಿನಲ್ಲಿ ನಿರ್ಬಂಧಿಸಲಾಗಿದೆ. ಕಾಡಾನೆಗಳು
(ಮೊದಲ ಪುಟದಿಂದ) ಹುಲ್ಲನ್ನು ತಿಂದು ನಾಶ ಮಾಡುತ್ತಿವೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಇದಕ್ಕೆ ಧನಿಗೂಡಿಸಿದರು. ಇದಕ್ಕುತ್ತರಿಸಿದ ಸಚಿವರು ಹುಲ್ಲನ್ನು ರೈತರಿಂದ ಪಡೆದು ಶೇಖರಿಸಿ ಹೆಚ್ಚುವರಿ ಹುಲ್ಲನ್ನು ಬೇಡಿಕೆಯಿರುವ ಸ್ಥಳಗಳಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲು ಎರಡು ದಿನಗಳಲ್ಲಿ ಕ್ರಮಕೈಗೊಳ್ಳುವದಾಗಿ ಭರವಸೆಯಿತ್ತರು.
ಬಯೋಮೆಟ್ರಿಕ್ ವ್ಯವಸ್ಥೆ ಸರಿಪಡಿಸಿ
ಪಡಿತರ ಮಳಿಗೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡಿರುವದು ಸರಿ. ಆದರೆ ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆ ಯಿಂದ ಬಯೋಮೆಟ್ರಿಕ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವದ ರಿಂದಾಗಿ ನಾಗರಿಕರು ಪಡಿತರ ಖರೀದಿಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನೆಟ್ವರ್ಕ್ ವ್ಯವಸ್ಥೆಯನ್ನು ಸರಿಪಡಿಸಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಗ್ರಾಮೀಣ ಭಾಗಗಳಲ್ಲಿ ಮುಂದುವರೆಸಿ; ಇಲ್ಲದಿದ್ದರೆ ಆ ವ್ಯವಸ್ಥೆಯನ್ನು ಹಿಂಪಡೆಯಿರಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ನುಡಿದರು.
ಸಿಸಿಎಫ್ ಬರದಿದ್ದ ಡಿಎಫ್ಓ ಅಮಾನತು
ಕೆಡಿಪಿ ಸದಸ್ಯ ಜರ್ಮ ಡಿಸೋಜ ಸಭೆಯಲ್ಲಿ ಮಾತನಾಡಿ ಅರಣ್ಯ ಇಲಾಖಾಧಿಕಾರಿಗಳು ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಿ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಹೇಶ್ ಅವರು ಸಿಸಿಎಫ್ ಎಲ್ರಿ? ಎಂದು ಪ್ರಶ್ನಿಸಿದರು. ಸಿಸಿಎಫ್ ಅವರು ಸಭೆಗೆ ಬಂದಿಲ್ಲ ಎಂದು ಡಿಎಫ್ಓ ಮಂಜುನಾಥ್ ತಿಳಿಸಿದಾಗ ಮುಂದಿನ ಸಭೆಗಳಿಗೆ ಸಿಸಿಎಫ್ ಬರದಿದ್ರೆ ನಿಮ್ನ ಸಸ್ಪೆಂಡ್ ಮಾಡ್ತಿನಿ ಎಂದು ಡಿಎಫ್ಓಗೆ ಎಚ್ಚರಿಕೆ ನೀಡಿದರು.
ಹುಳ ನೋಡಿ ಇಲ್ಲಿ
ಸಂತ್ರಸ್ತರಿಗೆ ಬಂದಿರುವ ಪರಿಹಾರ ಸಾಮಗ್ರಿಗಳು ಕೊಳೆಯುತ್ತಿವೆ ಎಂದು ಶಾಸಕ ರಂಜನ್ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಸಾಮಗ್ರಿಗಳು ಉತ್ತಮವಾಗಿದೆ ಕೊಳೆಯುತ್ತಿಲ್ಲ ಎಂದು ಹೇಳಿದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಅಪ್ಪಚ್ಚು ರಂಜನ್ ತಾನು ನಿನ್ನೆ ದಿನ ಕುಶಾಲನಗರದಲ್ಲಿ ಪರಿಹಾರ ಸಾಮಗ್ರಿ ಶೇಖರಿಸಿಟ್ಟಿರುವ ಸ್ಥಳಕ್ಕೆ ಭೇಟಿ ನೀಡಿದಾಗ ಪದಾರ್ಥಗಳು ಕೊಳೆತು ಹುಳ ತಿನ್ನುತ್ತಿರುವದು ಪತ್ತೆಯಾಗಿದೆ. ನೀವು ಸುಳ್ಳು ಮಾಹಿತಿ ನೀಡಬೇಡಿ ಎಂದರು. ಈ ಬಗ್ಗೆ ಕೆಲಕಾಲ ಚರ್ಚೆ ವಿಚರ್ಚೆ ನಡೆದ ಬಳಿಕ ವಾಟ್ಸಾಪ್ ಮೂಲಕ ವೀಡಿಯೋ ತರಿಸಿಕೊಂಡ ರಂಜನ್ ಸಚಿವರ ಬಳಿ ತೆರಳಿ ಅಧಿಕಾರಿಗಳು ಪದಾರ್ಥಗಳಲ್ಲಿ ಹುಳ ತುಂಬಿಲ್ಲ ಎಂದು ಹೇಳುತ್ತಾರಲ್ಲ ನೋಡಿ ಇಲ್ಲಿ ಹುಳ ಎಂದು ವೀಡಿಯೋವನ್ನು ತೋರಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸಚಿವರು ಪರಿಹಾರ ಪದಾರ್ಥಗಳು ಕೆಡದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದರು.
ಗುತ್ತಿಗೆದಾರನ ವಿರುದ್ಧ ದೂರು ನೀಡಿ
ಕೊಡವ ಹೆರಿಟೇಜ್ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಮಹೇಶ್ ಸಂಬಂಧಿಸಿದ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಪ್ಪುಪಟ್ಟಿಗೆ ಸೇರಿಸುವಂತೆ ಹಂಗಾಮಿ ಲೋಕೋಪಯೋಗಿ ಇಂಜಿನಿಯರ್ ಇಬ್ರಾಹಿಂ ಅವರಿಗೆ ಸೂಚಿಸಿದರು. ಈ ವೇಳೆ ದೂರು ನೀಡಲು ಉನ್ನತಾಧಿಕಾರಿಗಳು ಸೂಚನೆ ಬೇಕು ಎಂದಾಗ ಆಕ್ರೋಶಗೊಂಡ ಸಚಿವರು ನಾನ್ ಹೇಳ್ತಾ ಇದ್ದೀನಲ್ವ ಕ್ರಿಮಿನಲ್ ಕೇಸ್ ಮಾಡಿ ಅಂತ; ನನಗ್ಯಾಕ್ರಿ ಬೇಕು ಉನ್ನತಾಧಿಕಾರಿಗಳ ಅನುಮತಿ ? ಯೂಸ್ಲೆಸ್ ಫೆಲೋಸ್ ಹೇಳ್ದಷ್ಟು ಮಾಡ್ರಿ ಎಂದು ಸೂಚನೆಯಿತ್ತರು.
ತ್ವರಿತವಾಗಿ ಮನೆ ನಿರ್ಮಿಸಿ
ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ತುತ್ತಾಗಿರುವ ನಿರಾಶ್ರಿತ ಕುಟುಂಬಗಳಿಗೆ ತ್ವರಿತವಾಗಿ ಮನೆ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾ.ರಾ,ಮಹೇಶ್ ನಿರ್ದೇಶನ ನೀಡಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಯವರು ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಮಾದಾಪುರ, ಕರ್ಣಂಗೇರಿ, ಸಂಪಾಜೆ, ಮದೆ ಮತ್ತಿತರ ಕಡೆಗಳಲ್ಲಿ ಗುರ್ತಿಸಲಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ತಂಡ ನಿಯೋಜಿಸಿ ಮನೆ ನಿರ್ಮಿಸುವಂತೆ ರಾಜೀವ್ ಗಾಂಧಿ ವಸತಿ ನಿಗಮದ ಇಂಜಿನಿಯರ್ಗಳಿಗೆ ನಿರ್ದೇಶನ ನೀಡಿದರು.
ಮನೆ ನಿರ್ಮಾಣ ಸಂಬಂಧ ವಸತಿ ಸಚಿವರು ಮತ್ತು ವಸತಿ ಇಲಾಖೆಯ ಕಾರ್ಯದರ್ಶಿ ಯವರೊಂದಿಗೆ ಸದ್ಯದಲ್ಲಿಯೇ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ದಂಧೆ ಮಾಡೋಕೆ ಬಿಡ್ಬೇಡಿ
ಮನೆ ನಿರ್ಮಾಣಕ್ಕೆ ಮರಳು ಕೊಂಡೊಯ್ದರೆ ತೊಂದರೆಯಿಲ್ಲ. ಆದರೆ ಮರಳು ದಂಧೆ ಮಾಡಲು ಅವಕಾಶ ನೀಡಬೇಡಿ ಎಂದು ಸಚಿವರು ಎಸ್ಪಿ ಡಾ. ಸುಮನ ಅವರಿಗೆ ಸೂಚಿಸಿದರು. ಪಿಕಪ್ಗಳಲ್ಲಿ ಮರಳು ಕೊಂಡೊಯ್ದರೂ ಮೊಕದ್ದಮೆ ಹೂಡುತ್ತಾರೆ ಎಂದು ಶಾಸಕರು ಹೇಳಿದಾಗ, ಪಿಕ್ಪ್ನಲ್ಲಾಗಲಿ, ಲಾರಿಯಲ್ಲಾಗಲಿ ಅನಧಿಕೃತವಾಗಿ ಮರಳು ಸಾಗಿಸಿದರೆ ಕಾನೂನು ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದು ಎಸ್ಪಿ ಸುಮನ ಹೇಳಿದರು.
ಕೋಟೆ ದುರಸ್ತಿ ಕಾರ್ಯ
ಕೋಟೆ ದುರಸ್ತಿ ಕಾರ್ಯವನ್ನು ಪುರಾತತ್ವ ಇಲಾಖೆ ವತಿಯಿಂದ ಕೈಗೊಳ್ಳುವಂತೆ ಅಧಿಕಾರಿ ಮೂರ್ತೇಶ್ವರಿಯವರಿಗೆ ಸೂಚಿಸಿದ ಸಚಿವರು ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ಹಣವನ್ನು ಠೇವಣಿ ಇಡುವದಾಗಿ ಹೇಳಿದರು.
ಮರದ ಹಕ್ಕು ರೈತರಿಗೆ ನೀಡಿ
ಪ್ರಾಕೃತಿಕ ವಿಕೋಪದ ಸಂದರ್ಭ ರೈತರ ಜಮೀನಿನಲ್ಲಿದ್ದ ಮರಗಳು ಕೊಚ್ಚಿ ಹೋಗಿ ಅರಣ್ಯ ಇಲಾಖೆ ಜಾಗದಲ್ಲಿ ಉಳಿದುಕೊಂಡಿವೆ. ಇದನ್ನು ಸಂಬಂಧಪಟ್ಟ ರೈತರು ಪಡೆಯಲು ಅರಣ್ಯ ಇಲಾಖೆ ಅಡ್ಡಿ ಮಾಡುತ್ತಿದೆ. ಮಾನವೀಯತೆ ದೃಷ್ಟಿಯಿಂದ ಅರಣ್ಯ ಇಲಾಖೆ ಮರವನ್ನು ರೈತರು ಪಡೆಯಲು ಅವಕಾಶ ನೀಡಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಆಗ್ರಹಿಸಿದರು. ಎಂ.ಎಲ್.ಸಿ. ವೀಣಾ ಅಚ್ಚಯ್ಯ ಕೂಡ ಇದೇ ಮನವಿ ಮಾಡಿದರು. ಈ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆಯು ವದಾಗಿ ಡಿಎಫ್ಓ ಮಂಜುನಾಥ್ ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಇದ್ದರು.