ಕುಶಾಲನಗರ, ಡಿ. 27: ಪಟ್ಟಣದ ಎಪಿಎಂಸಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಸಂತ್ರಸ್ತ ಪರಿಹಾರ ಸಾಮಗ್ರಿಗಳನ್ನು ಶಾಸಕ ಅಪ್ಪಚ್ಚುರಂಜನ್ ಪರಿಶೀಲನೆ ನಡೆಸಿದರು.ಸಂತ್ರಸ್ತರಿಗೆಂದು ವಿವಿಧೆಡೆಗಳಿಂದ ದಾನಿಗಳು ನೀಡಿದ್ದ ಪರಿಹಾರ ಸಾಮಗ್ರಿಗಳ ಸಮರ್ಪಕವಾಗಿ ವಿಲೇವಾರಿಯಾಗದೆ ಗೋದಾಮಿನಲ್ಲಿ ಕೊಳೆಯುತ್ತಿರುವ ವಿಷಯ ತಿಳಿದು ಭೇಟಿ ನೀಡಿದ ಶಾಸಕರು ಸ್ಥಳೀಯ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭ ಅವಧಿ ಮೀರಿದ ಗೋಧಿ ಪುಡಿ, ಬಿಸ್ಕೆಟ್, ತಂಪು ಪಾನಿಯಗಳು, ಹುಳು ಹಿಡಿಯುತ್ತಿರುವ ಜೋಳ, ತೊಗರಿ ಬೇಳೆ, ಅಕ್ಕಿ ಮೂಟೆಗಳು ಕಂಡುಬಂದವು. ನ್ಯಾಪ್‍ಕಿನ್, ಬಟ್ಟೆ, ಪಾದರಕ್ಷೆ, ಪ್ಲಾಸ್ಟಿಕ್ ಬಕೆಟ್ ಇನ್ನಿತರ ಸಾಮಗ್ರಿಗಳು ಸಮರ್ಪಕವಾಗಿ ವಿಲೇವಾರಿಗೊಳ್ಳದೆ ಗೋದಾಮಿನಲ್ಲೇ ಇರಿಸಿಕೊಂಡಿರುವ ಬಗ್ಗೆ ಶಾಸಕರು ಅಸಮಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸುಮಾರು 10 ಲೋಡ್ ಪ್ರಮಾಣದ ದಿನಬಳಕೆಯ ಸಾಮಗ್ರಿಗಳು ವಿಲೇವಾರಿಗೊಳ್ಳದೆ ಇರುವದು ಕಂಡುಬಂದಿದೆ. ಅರ್ಹ ಫಲಾನುಭವಿಗಳಿಗೆ ಪರಿಹಾರ ಸಾಮಗ್ರಿಗಳು ಸಕಾಲದಲ್ಲಿ ವಿಲೇವಾರಿಗೊಳ್ಳದೆ ಹಾಗೆಯೇ ಇರಿಸಿಕೊಂಡಿರುವದು ನ್ಯಾಯೋಚಿತವಲ್ಲ. ಈ ಪೈಕಿ ಶೇ.25 ರಷ್ಟು ಆಹಾರ ಪದಾರ್ಥಗಳು ಹಾನಿಗೊಳಗಾಗಿವೆ. ಈ ಬಗ್ಗೆ ಸದÀ್ಯದಲ್ಲಿಯೇ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.